
ಧರ್ಮಪುರದ ಸ್ವಾಭಿಮಾನ್ ವಸತಿ ಶಾಲೆಯಲ್ಲಿ ನಡೆದ ಕಾನೂನು ಜಾಗೃತಿ ಜಾತ್ರೆ ಕಾರ್ಯಕ್ರಮವನ್ನು ಡಿವೈಎಸ್ ಪಿ ಶಿವಕುಮಾರ್ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಧರ್ಮಪುರ: ‘ಪ್ರತಿಯೊಬ್ಬ ನಾಗರಿಕರೂ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದರ ಜೊತೆಗೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಆಗ ಶಾಂತಿಯುತ ಸಮಾಜದ ಏಳಿಗೆಯನ್ನು ಕಾಣಲು ಸಾಧ್ಯ’ ಎಂದು ಡಿವೈಎಸ್‌ಪಿ ಶಿವಕುಮಾರ್ ತಿಳಿಸಿದರು.
ಇಲ್ಲಿನ ಸ್ವಾಭಿಮಾನ್ ವಸತಿ ಶಾಲೆಯ ಮೈದಾನದಲ್ಲಿ ಅಬ್ಬಿನಹೊಳೆ ಪೊಲೀಸ್ ಠಾಣೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನಿನ ಜಾಗೃತಿ ಜಾತ್ರೆ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾವಂತರು ಮತ್ತು ಉದ್ಯೋಗಸ್ಥರು ಇದರ ಬಲೆಯಲ್ಲಿ ಬೀಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕು’ ಎಂದು ಸಿಪಿಐ ಗುಡ್ಡಪ್ಪ ತಿಳಿಸಿದರು.
‘ಬಾಲ್ಯವಿವಾಹ, ವರದಕ್ಷಿಣೆ ಪಿಡುಗು, ಬಾಲ ಕಾರ್ಮಿಕ ಪದ್ಧತಿ, ರಸ್ತೆ ಅಪಘಾತ, ಮೊಬೈಲ್ ಬಳಕೆ ಜಾಸ್ತಿಯಾಗಿದೆ. ಜೊತೆಗೆ ಯುವಕರು ಮದ್ಯಪಾನ ಸೇವನೆಯ ದಾಸರಾಗಿದ್ದಾರೆ. ಕುಟುಂಬಗಳಲ್ಲಿ ಉತ್ತಮ ವಾತಾವರಣ ಇಲ್ಲದೆ ಕಲುಷಿತವಾಗಿದೆ’ ಎಂದು ಪಿಎಸ್ಐ ದೇವರಾಜು ತಿಳಿಸಿದರು.
ಪ್ರಾಂಶುಪಾಲ ಪ್ರೊ.ವಿ.ವೀರಣ್ಣ, ರಂಗಸ್ವಾಮಿ ಮಾತನಾಡಿದರು. ಭೀಮಂತರಾಮ್ ಅವರ ಥಿಯೇಟರ್ ಪೋರ್ಟ್ ಕಲಾ ತಂಡದಿಂದ ಕಾನೂನು ಜಾಗೃತಿ ಜಾತ್ರೆ ನಾಟಕ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್‌ಜಾನ್ ಅಮಾನುಲ್ಲಾ, ಕೆಡಿಪಿ ಸದಸ್ಯ ತಿಮ್ಮಯ್ಯ, ಧರ್ಮಪುರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಎಂ.ಶಿವಣ್ಣ, ಈಶ್ವರಪ್ಪ, ಲಕ್ಷ್ಮಿದೇವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.