ಮೊಳಕಾಲ್ಮುರು: ತಾಲ್ಲೂಕಿನ ಬ್ರಹ್ಮಗಿರಿ ಬೆಟ್ಟದಲ್ಲಿ ಬುಧವಾರ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಸಮೀಪದ ಜಟ್ಟಂಗಿ ರಾಮೇಶ್ವರ ಬೆಟ್ಟ, ಕೋತಿಗುಡ್ಡ, ಮಾಚೇನಹಳ್ಳಿ, ದೇವಸಮುದ್ರ, ವೆಂಕಟಾಪುರ, ದೇವಸಮುದ್ರ ಸುತ್ತಮುತ್ತಲ ಗ್ರಾಮಗಳಲ್ಲಿ ವರ್ಷದಿಂದ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು.
ಬ್ರಹ್ಮಗಿರಿ ಬೆಟ್ಟದಲ್ಲಿರುವ ಗೋಶಾಲೆಯಲ್ಲಿ 10 ದಿನಗಳ ಹಿಂದೆ 2 ಹಸುಗಳ ಮೇಲೆ ದಾಳಿ ಮಾಡಿತ್ತು. ಹೊಲಗಳಿಗೆ ಮೇಯಲು ಹೋಗುವ ಕುರಿ, ದನಗಳ ಮೇಲೆ ದಾಳಿ ನಡೆಸಿತ್ತು. ಚಿರತೆ ಸೆರೆ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿತ್ತು.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ 3 ತಿಂಗಳ ಹಿಂದೆ ಬೆಟ್ಟದಲ್ಲಿ ಬೋನು ಇರಿಸಿದ್ದರು. ಆದರೆ, ಸೆರೆಯಾಗಿರಲಿಲ್ಲ. ಈಗ ಚಿರತೆ ಸೆರೆಯಾಗಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸೆರೆಯಾಗಿರುವ ಗಂಡು ಚಿರತೆಗೆ 5 ವರ್ಷ ವಯಸ್ಸಾಗಿದ್ದು, ಆರೋಗ್ಯವಾಗಿದೆ. ಮುಂದಿನ ಕ್ರಮಕ್ಕಾಗಿ ಚಿತ್ರದುರ್ಗದ ಆಡು ಮಲ್ಲೇಶ್ವರ ಮೃಗಾಲಯಕ್ಕೆ ಸಾಗಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.