ನೀರಿನ ಕ್ಯಾನ್‌ಗೆ ಬಾಟಲಿಗಳಿಂದ ಮದ್ಯ ಸುರಿಯುತ್ತಿರುವುದು
ಚಿತ್ರದುರ್ಗ: ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಮದ್ಯ ಸೇವನೆ ಹಾಗೂ ಪಾರ್ಟಿ ಮಾಡಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಕಚೇರಿ ಅಧೀಕ್ಷಕ ಸುನೀಲ್ ಕುಮಾರ್, ಪ್ರಥಮ ದರ್ಜೆ ಸಹಾಯಕ ಸ್ವಾಮಿ, ಡಿ.ದರ್ಜೆ ನೌಕರ ತಿಪ್ಪೇಸ್ವಾಮಿ, ವಾಹನ ಚಾಲಕ ರವಿ ಅಮಾನತುಗೊಂಡ ಸಿಬ್ಬಂದಿ. ಕಚೇರಿಯಲ್ಲಿ ಪಾರ್ಟಿ ಮಾಡಿದ ವಿಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿದ ಡಿಡಿಪಿಐ ಎಂ.ಆರ್.ಮಂಜುನಾಥ್ ಸಿಬ್ಬಂದಿಯ ಅಮಾನತಿಗೆ ಶಿಫಾರಸು ಮಾಡಿದ್ದರು.
ಕಚೇರಿಯಲ್ಲಿ 20 ಲೀಟರ್ ನೀರಿನ ಕ್ಯಾನ್‌ಗೆ ಬಾಟಲಿಗಳಿಂದ ಮದ್ಯ ಸುರಿಯುವ, ಅದಕ್ಕೆ ನೀರು ತುಂಬಿಸುವ, ಕೆಲವರು ಅಲ್ಲೇ ಮದ್ಯ ಸೇವಿಸುವ, ನಂತರ ಕಾರ್‌ನಲ್ಲಿ ಕ್ಯಾನ್ ಇಟ್ಟುಕೊಂಡು ಬೇರೆ ಸ್ಥಳಕ್ಕೆ ತೆರಳುವ ದೃಶ್ಯಗಳು ವಿಡಿಯೊದಲ್ಲಿವೆ.
‘ಅ.7ರಂದು ವಾಲ್ಮೀಕಿ ಜಯಂತಿಯ ದಿನ ಘಟನೆ ನಡೆದಿದೆ. ನನ್ನ ಗಮನಕ್ಕೆ ಬಂದ ಕೂಡಲೇ ನಾಲ್ವರು ಸಿಬ್ಬಂದಿಯ ಅಮಾನತಿಗೆ ಶಿಫಾರಸು ಮಾಡಿದ್ದೆ. ಜಿಲ್ಲಾಧಿಕಾರಿಗಳನ್ನು ಅವರನ್ನು ಅಮಾನತು ಮಾಡಿದ್ದಾರೆ’ ಎಂದು ಡಿಡಿಪಿಐ ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.