ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಬೇಕು ಎಂಬ ದಾಳವನ್ನು ಕಾಂಗ್ರೆಸ್ ಮತ್ತು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಉರುಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಧ್ವನಿ ಇನ್ನಷ್ಟು ಜೋರಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಹಾಗೂ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಲೋಕಸಭಾ ಕ್ಷೇತ್ರವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದಾರೆ. ‘ಹತ್ತು ವರ್ಷಗಳಿಂದ ಕ್ಷೇತ್ರವನ್ನು ಹೊರಗಿನವರು ಪ್ರತಿನಿಧಿಸುತ್ತಿದ್ದಾರೆ’ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಪ್ರತಿನಿಧಿಸುತ್ತಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಮಾತ್ರ ಬಿಜೆಪಿ ಹಿಡಿತದಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿರುವ ಉಮೇದಿನಲ್ಲಿರುವ ರಾಜ್ಯದ ಆಡಳಿತಾರೂಢ ಪಕ್ಷ ಕ್ಷೇತ್ರವನ್ನು ‘ಕೈ’ವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಬಿಜೆಪಿ– ಜೆಡಿಎಸ್ ಮೈತ್ರಿ ಕಮಲ ಪಾಳೆಯದ ಹುಮ್ಮಸ್ಸು ಹೆಚ್ಚಿಸಿದೆ.
‘ಭ್ರಷ್ಟಾಚಾರದಿಂದ ಬೇಸತ್ತು ರಾಜಕಾರಣದಿಂದ ದೂರ ಉಳಿಯುವ ಬಗ್ಗೆ ಆಲೋಚಿಸಿದ್ದೇನೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ’ ಎಂದು ಸಚಿವ ಎ.ನಾರಾಯಣಸ್ವಾಮಿ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಮೂಲತಃ ಆನೇಕಲ್‌ನ ಸಚಿವರು ಚುನಾವಣಾ ರಾಜಕಾರಣದಿಂದ ದೂರ ಉಳಿಯಬಹುದು ಎಂಬ ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
‘ಲೋಕಸಭಾ ಚುನಾವಣೆಗೆ ನಾರಾಯಣಸ್ವಾಮಿ ಮತ್ತೆ ಸ್ಪರ್ಧೆ ಮಾಡುತ್ತಾರೆಯೇ?’ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರೇ ಉತ್ತರ ನೀಡಬೇಕಿದೆ. 2009ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದ ಜನಾರ್ದನಸ್ವಾಮಿ ಇದೀಗ ಮತ್ತೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಸ್ಥಳೀಯರಾಗಿದ್ದು 2014ರಲ್ಲಿ ಪರಾಭವಗೊಂಡಿದ್ದ ಇವರು, 2019ರಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಬಾಬಾ ಅಣು ಸಂಶೋಧನಾ ಕೇಂದ್ರಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ತಂದು ವಿಜ್ಞಾನ ನಗರಿ ನಿರ್ಮಿಸಿದ ಹಿರಿಮೆಯನ್ನು ಬೆನ್ನಿಗೆ ಇಟ್ಟುಕೊಂಡಿರುವ ಇವರು ಟಿಕೆಟ್ ನಿರೀಕ್ಷಿಸುತ್ತಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಕಾರಿಗಳಾದ ಲಕ್ಷ್ಮಿನಾರಾಯಣ, ಎಂ.ಕೆ. ಶ್ರೀರಂಗಯ್ಯ, ಮಾಯಕೊಂಡದ ಮಾಜಿ ಶಾಸಕ ಪ್ರೊ.ಲಿಂಗಪ್ಪ, ಹರಪನಹಳ್ಳಿಯ ವೈದ್ಯ ಡಾ.ರಮೇಶ್, ಸೂರನಹಳ್ಳಿ ವಿಜಯಕುಮಾರ್, ಎಂ.ಸಿ. ರಘುಚಂದನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆಯ ಮೂಡಿಗೆರೆಯ ನರೇಂದ್ರ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅಚ್ಚರಿಯ ಅಭ್ಯರ್ಥಿ ಬರುವ ಕೌತುಕ ಕೂಡ ಬಿಜೆಪಿಯಲ್ಲಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರಿಗೆ ಹೆಚ್ಚು ಮಣೆ ಹಾಕಲಾಗಿದೆ ಎಂಬ ಅಸಮಾಧಾನ ಸ್ಥಳೀಯ ನಾಯಕರಲ್ಲಿದೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ವಾದವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಮುಂದಿಡಲಾಗುತ್ತಿದೆ. ಎರಡು ರಾಜಕೀಯ ಪಕ್ಷಗಳಿಗೆ ಇದು ಬಿಸಿತುಪ್ಪವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
‘ಕೈ’ ಟಿಕೆಟ್‌ಗೆ ಪೈಪೋಟಿ
ಕಾಂಗ್ರೆಸ್ ಟಿಕೆಟ್ ಕೋರಿ 24 ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ 2014ರಲ್ಲಿ ಕ್ಷೇತ್ರ ಪ್ರತಿನಿಧಿಸಿದ್ದ ಬಿ.ಎನ್. ಚಂದ್ರಪ್ಪ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ಎಂ.ರಾಮಪ್ಪ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಪುತ್ರ ವಿನಯ್ ತಿಮ್ಮಾಪುರ ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ ಅವರ ಪುತ್ರ ಕುಮಾರಸ್ವಾಮಿ ಹೆಸರು ಪ್ರಮುಖವಾಗಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಿ.ಎನ್.ಚಂದ್ರಪ್ಪ ಈಗ ಮತ್ತೆ ಟಿಕೆಟ್ ನಿರೀಕ್ಷೆಯಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಟಿಕೆಟ್ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸದಿದ್ದರೂ ಮಾಜಿ ಸಚಿವ ಎಚ್.ಆಂಜನೇಯ ಹೆಸರು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಟಿಕೆಟ್‌ಗಾಗಿ ಅಂದಾಜು 8 ಜನ ಆಕಾಂಕ್ಷಿಗಳಿರುವುದು ಪಕ್ಷದ ಗಮನಕ್ಕೆ ಬಂದಿದೆ. ಗೆಲುವನ್ನು ಮಾನದಂಡವಾಗಿಸಿ ಟಿಕೆಟ್ ಹಂಚಿಕೆ ಮಾಡುವುದು ಪಕ್ಷದ ನೀತಿ.ಕೆ.ಎಸ್.ನವೀನ್, ಬಿಜೆಪಿ ರಾಜ್ಯ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.