
ದಾವಣಗೆರೆ: ‘ಜಿಲ್ಲೆಯಲ್ಲಿ ಮಾದಿಗ ಮಹಾಸಂಸ್ಥಾನ ಗುರುಪೀಠವನ್ನು ಸ್ಥಾಪಿಸುತ್ತೇವೆ, ಯಾವುದೇ ಮಠದ ಶಾಖಾ ಮಠವನ್ನಲ್ಲ’ ಎಂದು ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಸ್ಪಷ್ಟಪಡಿಸಿದರು.
ಇಲ್ಲಿನ ಶಿವಯೋಗಿ ಮಂದಿರದಲ್ಲಿ ಶನಿವಾರ ನಡೆದ ಮಾದಿಗ ಸಮುದಾಯದ ಸಮಾಲೋಚನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಗುರುಪೀಠ ಸ್ಥಾಪಿಸುವ ಕುರಿತು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ. ಹರಿಹರ ಅಥವಾ ದಾವಣಗೆರೆಯಲ್ಲಿ ಗುರುಪೀಠ ಸ್ಥಾಪನೆಯಾಗಲಿದೆ. ಆಗಸ್ಟ್ 15 ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ 25 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುತ್ತೇವೆ. ನೂತನ ಸ್ವಾಮೀಜಿಗೆ ಪಟ್ಟಾಭಿಷೇಕ ನೆರವೇರಿಸುತ್ತೇವೆ’ ಎಂದು ತಿಳಿಸಿದರು.
‘ಮರಿ ಸ್ವಾಮಿ ಆಯ್ಕೆ ವಿಚಾರದ ಬಗ್ಗೆ ಚರ್ಚಿಸಲು ಸೋಮವಾರ ಸಾಣೇಹಳ್ಳಿ ಮಠಕ್ಕೆ ಹೋಗುತ್ತೇವೆ. ಸಾಣೇಹಳ್ಳಿ ಶ್ರೀಗಳು ಭೇಟಿಗಾಗಿ ಸಮಯ ನೀಡಿದಾರೆ. ಗುರುಪೀಠ ಸ್ಥಾಪನೆಗೆ ಮುರುಘಾಮಠದ ಶಿವಮೂರ್ತಿ ಶರಣರ ಒಪ್ಪಿಗೆಯೂ ಇದೆ’ ಎಂದು ಹೇಳಿದರು.
‘ಗುರುಪೀಠ ಸ್ಥಾಪಿಸುವ ವಿಚಾರದಲ್ಲಿ 6 ತಿಂಗಳಿಂದ ಸುತ್ತಾಟ ನಡೆಸಿದ್ದೇವೆ. ಪ್ರಮುಖರಾದ ಕೆ.ಎಚ್. ಮುನಿಯಪ್ಪ, ಎಚ್.ಆಂಜನೇಯ, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದೇವೆ. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಕೋಡಿಹಳ್ಳಿಯ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿಯವರು ಮಠ ಸ್ಥಾಪನೆಗೆ ಒಪ್ಪಿದ್ದರು’ ಎಂದು ಹೇಳಿದರು.
‘ಕರಪತ್ರಗಳು, ಬ್ಯಾನರ್‌ಗಳಲ್ಲಿ ಸ್ವಾಮೀಜಿಗಳ ಹೆಸರು ಹಾಗೂ ಭಾವಚಿತ್ರ ಬಳಸಬಾರದು ಎನ್ನುವ ಅಧಿಕಾರ ಯಾರಿಗೂ ಇಲ್ಲ. ಅವರು ಸಮುದಾಯದ ಶ್ರೀಗಳು. ಸಮುದಾಯದ ಒಳಿತಿಗಾಗಿ ಮಾಡುತ್ತಿರುವ ಕಾರ್ಯಕ್ಕೆ ಬಳಸಿಕೊಂಡರೆ ತಪ್ಪೇನು’ ಎಂದು ಪ್ರಶ್ನಿಸಿದರು.
ಐರಣಿ ಮನಿಮಠದ ಗಜದಂಡ ಸ್ವಾಮೀಜಿ, ಮುಖಂಡರಾದ ಎಲ್.ಎಂ.ಹನುಮಂತಪ್ಪ, ಶಂಭುಲಿಂಗಪ್ಪ, ಎಚ್.ಮಲ್ಲೇಶ್, ನಲ್ಲೂರು ಶೇಖರಪ್ಪ, ಸಿ.ಬಸವರಾಜ್, ರುದ್ರೇಶ್, ಮೋಹನ್ ಹಿರೇಮನಿ, ಎ.ಕೆ.ಶಿವರಾಮ್, ಆದಾಪುರ ನಾಗರಾಜ್, ಶಿವಳ್ಳಿ ಗಂಗಾಧರ್, ಕೋಗನೂರು ಪ್ರಕಾಶ್, ಸಾಗರ್, ದೇವೇಂದ್ರಪ್ಪ, ಜಿ.ರಾಕೇಶ್, ತಮ್ಮಣ್ಣ, ಸಿ.ವರದರಾಜ್, ಮಾದಿಗ ಮಹಾಸಭಾದ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.
ಮುಖಂಡರಾದ ಹೆಗ್ಗೆರೆ ರಂಗಪ್ಪ, ಎಲ್.ಡಿ.ಗೋಣೆಪ್ಪ ಮಾತನಾಡಿದರು.
ಗುರುಪೀಠ ಸ್ಥಾಪಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವೇನು ಮದ್ಯದ ಅಂಗಡಿಯನ್ನು ಕೇಳುತ್ತಿಲ್ಲ. ಬೇಡ ಎನ್ನುವ ಅಧಿಕಾರ ಯಾರಿಗೂ ಇಲ್ಲ. ಕರೆ ಮಾಡಿ ಅಲ್ಲಿಗೆ ಹೋಗಬೇಡಿ ಇಲ್ಲಿಗೆ ಹೋಗಬೇಡಿ ಎನ್ನುವುದನ್ನು ನಿಲ್ಲಿಸಲಿಬಿ.ಎಚ್. ವೀರಭದ್ರಪ್ಪ ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ
ಒಳಮೀಸಲಾತಿ ಹೋರಾಟದಲ್ಲಿ ಸಮುದಾಯಗಳ ಸ್ವಾಮೀಜಿಗಳ ಪಾತ್ರ ಎಷ್ಟಿತ್ತು? ಸಮುದಾಯದ ಸ್ವಾಮೀಜಿಗಳು ಮೊದಲು ಧ್ವನಿ ಎತ್ತಬೇಕಿತ್ತು. ಆದರೆ ಸಂಘಟನೆಗಳೇ ಹೋರಾಟ ನಡೆಸಿದವು. ಸಮುದಾಯಕ್ಕೆ ಗುರು ಮತ್ತು ಗುರಿ ಅವಶ್ಯವಾಗಿದೆಎಲ್.ಎಂ.ಎಚ್. ಸಾಗರ್ ಪಾಲಿಕೆ ಮಾಜಿ ಸದಸ್ಯ
‘ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಸಮುದಾಯದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ಪಡೆದು ಗುರುಪೀಠ ಸ್ಥಾಪಿಸಿ. ಈ ವಿಚಾರದಲ್ಲಿ ಎಲ್ಲರನ್ನೂ ಒಳಗೊಂಡಂತಹ ನಿರ್ಧಾರಕ್ಕೆ ನಮ್ಮ ಸಹಕಾರ ಇರುತ್ತದೆ. ಸಮುದಾಯಕ್ಕೆ ಒಳ್ಳೆಯದಾಗಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.