ADVERTISEMENT

ಸಂಘಟನೆ ಸಂಘರ್ಷಕ್ಕಲ್ಲ, ಸಮುದಾಯ ಪ್ರಗತಿಗೆ

ಜಿಲ್ಲಾ ಮಡಿವಾಳರ ಮಹಿಳಾ ಸಮಾವೇಶ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 16:30 IST
Last Updated 9 ಡಿಸೆಂಬರ್ 2018, 16:30 IST
ಚಿತ್ರದುರ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಡಿವಾಳರ ಮಹಿಳಾ ಸಮಾವೇಶವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು. ಬಸವ ಮಡಿವಾಳ ಮಾಚೀದೇವ ಸ್ವಾಮೀಜಿ ಇದ್ದರು
ಚಿತ್ರದುರ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಡಿವಾಳರ ಮಹಿಳಾ ಸಮಾವೇಶವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು. ಬಸವ ಮಡಿವಾಳ ಮಾಚೀದೇವ ಸ್ವಾಮೀಜಿ ಇದ್ದರು   

ಚಿತ್ರದುರ್ಗ: ಸಂಘಟನೆ ಎನ್ನುವುದು ಯಾವುದೇ ಜನಾಂಗದ ವಿರುದ್ಧವಲ್ಲ. ಸಮುದಾಯ ಸಮಸ್ಯೆ ನಿವಾರಿಸಿಕೊಂಡು ಸರ್ಕಾರದಿಂದ ದೊರಕುವ ಸವಲತ್ತುಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆ ಅವಶ್ಯಕ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

ಇಲ್ಲಿನ ತರಾಸು ರಂಗಮಂದಿರಲ್ಲಿ ಭಾನುವಾರ ರಾಜ್ಯ ಮಡಿವಾಳರ ಸಂಘ, ಜಿಲ್ಲಾ ಮಡಿವಾಳರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಡಿವಾಳರ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಮತ್ತು ಶೋಷಿತ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲಿಷ್ಠರಾಗಬೇಕಾದರೆ ಸಂಘಟಿತರಾಗಬೇಕು ಎಂದು ಹೇಳಿದರು.

ADVERTISEMENT

ಮಹಿಳೆಯರು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಸ್ಪರ್ಧಿಸಲು ಶೇ 33ರಷ್ಟು ಮಹಿಳಾ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇದೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಷ್ಟೆ ಅಲ್ಲ, ಎಸ್‌.ಸಿ, ಎಸ್‌.ಟಿ. ಹಾಗೂ ಇತರೆ ಹಿಂದುಳಿದ ವರ್ಗಗಳ ಮಹಿಳೆಯರು ಸ್ಪರ್ಧಿಸಬೇಕಾದರೆ ಕಡ್ಡಾಯವಾಗಿ ಒಳ ಮೀಸಲಾತಿ ಜಾರಿಗೆ ತರುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಸಂಸದ ಬಿ.ಎನ್.ಚಂದ್ರಪ್ಪ, ‘ಹೆಣ್ಣಿನ ಸಹಕಾರವಿಲ್ಲದೇ ಪುರುಷರು ಸಾಧನೆ ಮಾಡಲು ಆಗುವುದಿಲ್ಲ. ಸಮಾಜದಲ್ಲಿ ಹೆಣ್ಣು ಗೌರವಕ್ಕೆ ಒಳಪಡಬೇಕು. ದೈನಂದಿನ ಜೀವನದಲ್ಲಿ ಹೆಣ್ಣನ್ನು ಗೌರವಿಸಬೇಕು’ ಎಂದು ಹೇಳಿದರು.

‘ಮಡಿವಾಳ ಮಾಚಿದೇವರು ಬಸವಣ್ಣ ಅವರ ಸಮಕಾಲೀನರು. ಮಡಿವಾಳ ಸಮುದಾಯದವರು ಶರಣ ಪರಂಪರೆಗೆ ಸೇರಿದವರು. ಅದಕ್ಕಾಗಿ ಕುಲಕಸುಬನ್ನು ಕೀಳೆಂದು ಭಾವಿಸಬಾರದು. ಕಾಯಕದಲ್ಲಿ ಭಗವಂತನನ್ನು ಕಾಣಬೇಕು’ ಎಂದು ಹೇಳಿದರು.

‘ಹಿಂದುಳಿದ ಮಡಿವಾಳ ಸಮುದಾಯಕ್ಕೆ ಪರಂಪರೆ, ಇತಿಹಾಸ, ಭಕ್ತಿ, ನಂಬಿಕೆ ಕಾಯಕ ಸಂಸ್ಕೃತಿ ಇದೆ. ಮೇಲ್ಜಾತಿ ಜತೆಗೆ ಸಂಘರ್ಷ ಮಾಡಿಕೊಳ್ಳದೇ ಬೆಳೆಯಬೇಕು. ಜಾತಿಯ ಕೀಳರಿಮೆ ಬಿಟ್ಟು ಸ್ವಾವಲಂಬಿಗಳಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.

ಮಡಿವಾಳ ಗುರುಪೀಠದ ಬಸವ ಮಡಿವಾಳ ಮಾಚಿದೇವಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಅಂಜಿನಪ್ಪ, ನಗರಸಭೆ ಸದಸ್ಯೆ ಅನಿತಾ ಟಿ. ರಮೇಶ್, ಮಡಿವಾಳರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ರಮೇಶ್, ಮುಖಂಡರಾದ ವೆಂಕಟರಾಮ್, ಆರ್.ವಿ. ರಾಜಣ್ಣ, ಎಸ್.ವಿ. ವಿಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.