ADVERTISEMENT

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು: ಶಾಸಕ ಎಂ.ಚಂದ್ರಪ್ಪ

ಒನಕೆ ಓಬವ್ವ ಜಯಂತಿಯಲ್ಲಿ ಶಾಸಕ ಎಂ.ಚಂದ್ರಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:56 IST
Last Updated 24 ನವೆಂಬರ್ 2025, 4:56 IST
ಹೊಳಲ್ಕೆರೆಯಲ್ಲಿ ಭಾನುವಾರ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ ಛಲವಾದಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು
ಹೊಳಲ್ಕೆರೆಯಲ್ಲಿ ಭಾನುವಾರ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ ಛಲವಾದಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು   

ಹೊಳಲ್ಕೆರೆ: ‘ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಗಳಿವೆ’ ಎಂದು ಶಾಸಕ ಎಂ.ಚಂದ್ರಪ್ಪ ಅಭಿಪ್ರಾಯಪಟ್ಟರು. 

ಪಟ್ಟಣದ ಸಂವಿಧಾನಸೌಧದಲ್ಲಿ ಭಾನುವಾರ ಛಲವಾದಿ ಮಹಾಸಭಾದ ತಾಲ್ಲೂಕು ಘಟಕ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

‘ಛಲವಾದಿ ಜನಾಂಗದಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರು. ಜಾತಿ ವ್ಯವಸ್ಥೆಯಲ್ಲಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಕೆ.ಎಚ್.ರಂಗನಾಥ್, ಬಸವಲಿಂಗಪ್ಪನಂತವರು ಛಲವಾದಿ ಜನಾಂಗದಲ್ಲಿ ಜನಿಸಿದ್ದು, ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ’ ಎಂದು ತಿಳಿಸಿದರು.  

ADVERTISEMENT

‘ಛಲವಾದಿ ಸಮುದಾಯಕ್ಕೆ ಸೇರಿದ ಒನಕೆ ಓಬವ್ವ ಶಕ್ತಿ, ಸಾಮರ್ಥ್ಯ, ಸಾಹಸದಿಂದ ಹೈದರಾಲಿಯ ಸೈನ್ಯವನ್ನು ಸದೆಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದರು. ಅವರ ಜಯಂತಿಯನ್ನು ಸರ್ಕಾರ ಪ್ರತಿ ವರ್ಷವೂ ಆಚರಿಸುವ ಮೂಲಕ ಸ್ಮರಣೆ ಮಾಡುತ್ತಿರುವುದು ಸಂತೋಷದ ಸಂಗತಿ. ನಮ್ಮ ಸಮುದಾಯಕ್ಕೆ ಅಂತಹ ದಿಟ್ಟ ಮಹಿಳೆಯರ ಅಗತ್ಯವಿದೆ’ ಎಂದರು. 

ಛಲವಾದಿ ಗುರುಪೀಠದ ಬಸವನಾಗಿ ದೇವಸ್ವಾಮೀಜಿ, ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಬಸವಲಿಂಗಾನಂದ ಸ್ವಾಮೀಜಿ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎಚ್.ಶೇಷಪ್ಪ, ಡಿ.ಎಚ್.ನಟರಾಜ್, ತಹಶೀಲ್ದಾರ್ ವಿಜಯಕುಮಾರ್, ಡಿ.ಆರ್.ರವೀಂದ್ರ, ನರಸಿಂಹಮೂರ್ತಿ, ಹಾಲಮ್ಮ ನಟರಾಜ್, ಶರಣಪ್ಪ, ಟಿ.ನರಸಿಂಹಮೂರ್ತಿ, ಹನುಮಂತಪ್ಪ ಮಾರಪ್ಪ ಚೀಳಂಗಿ, ತಿಮ್ಮರಾಯಪ್ಪ, ಎಚ್.ಅಣ್ಣಪ್ಪಸ್ವಾಮಿ, ಗೋವರ್ಧನ, ಹನುಮಂತಪ್ಪ, ಸುವರ್ಣಮ್ಮ, ದೇವರಾಜ್, ಎಚ್.ರಾಮಚಂದ್ರಪ್ಪ, ವಕೀಲ ರಂಗಸ್ವಾಮಿ, ರವಿ ಭಾಗವಹಿಸಿದ್ದರು. 

ಛಲವಾದಿ ಸಮುದಾಯದವರು ಸಂಘಟಿತರಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಹೋರಾಟದ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು
ಬಸವನಾಗಿ ದೇವಸ್ವಾಮೀಜಿ ಛಲವಾದಿ ಗುರುಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.