
ಚಳ್ಳಕೆರೆ: ‘ಸಾಲ ಸೂಲ ಮಾಡಿ ಲಾಭದ ನಿರೀಕ್ಷೆ ಇಲ್ಲದೆ ವರ್ಷವಿಡೀ ಶ್ರಮವಹಿಸಿ ಕೃಷಿ ಮಾಡಿ ತಾನು ಬೆಳೆದ ಬೆಳೆಯಿಂದ ಜಗತ್ತಿನ ಹಸಿವು ನೀಗಿಸುವ ರೈತರನ್ನು ಸದಾ ಕಾಲ ಗೌರವದಿಂದ ಕಾಣಬೇಕು’ ಎಂದು ಸಂಗೀತ ನಿರ್ದೇಶಕ ವಿ. ಮನೋಹರ್ ಹೇಳಿದರು.
ಪ್ರಗತಿಪರ ರೈತ ದೇವರಮರಿಕುಂಟೆ ಗ್ರಾಮದ ಆರ್.ಎ. ದಯಾನಂದಮೂರ್ತಿ ಅವರ ಜೀವನಾಧಾರಿತ ‘ಮಣ್ಣಿನ ಮಗ ಮಾರ್ಗದರ್ಶಿ’ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದಯಾನಂದ ಮೂರ್ತಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಇತ್ತೀಚೆಗೆ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಮಧ್ಯೆ ಎದೆಗುಂದದೆ ಒಂದೂವರೆ ಇಂಚು ಕೊಳವೆ ಬಾವಿ ನೀರಿನಲ್ಲಿ 10 ಎಕರೆ ಜಮೀನಿನಲ್ಲಿ 1,000 ಅಡಿಕೆ, 250 ತೆಂಗಿನ ಮರ, 200 ಮಾವಿನ ಮರಗಳು, 75 ಹುಣಸೆ ಮರ, 75 ನಿಂಬೆ, 80 ನೇರಳೆ ಮರ, 200 ಹೆಬ್ಬೇವು, 100 ಸಿಲ್ವರ್, 50 ಶ್ರೀಗಂಧ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಬೆಳೆದು ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಕೃಷಿಯಲ್ಲಿ ಹೀಗೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳ ಬಗ್ಗೆ ನಾವೆಲ್ಲರೂ ಭಾರಿ ಚರ್ಚೆ ನಡೆಸುತ್ತೇವೆ. ಆದರೆ ಕೃಷಿ ಮತ್ತು ರೈತರ ವಿಚಾರದಲ್ಲಿ ಕ್ರಿಯಾಶೀಲವಾಗಿ ಚರ್ಚೆ ನಡೆಯುವುದಿಲ್ಲ. ಅದ್ದರಿಂದ ನಾವೆಲ್ಲರೂ ಕೃಷಿಯನ್ನು ಪೋಷಿಸಿ, ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
‘ಈ ಸಾಕ್ಷ್ಯಚಿತ್ರಕ್ಕೆ ವೀಣಾ ಕಲ್ಮಠ, ಬಾಗಲಕೋಟೆ ಪ್ರವೀಣ ರಾಜು ಸೊನ್ನದ ಚಿತ್ರಕಥೆ ರಚಿಸಿದ್ದಾರೆ. ಚಿತ್ರಕ್ಕೆ ವಿಶ್ವನಾಥ ಬಾಡದ್ ಛಾಯಾಗ್ರಹಣ ಮಾಡಿದ್ದಾರೆ. ಗ್ರಾಫಿಕ್ಸ್ ಪ್ರಹ್ಲಾದ ಹೊನ್ಯಾಳ, ಸಂಕಲನ ಚಿತ್ರೇಶ್ ನಿರ್ವಹಿಸಿದ್ದಾರೆ. ಈಗಾಗಲೇ ಚಳ್ಳಕೆರೆ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರದುರ್ಗ ಕೋಟೆ, ರಂಗೇನಹಳ್ಳಿ ಹಿರಿಯೂರು, ದೇವರಮರಿಕುಂಟೆ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಚಿತ್ರ ನಿರ್ದೇಶಕ ಮಂಜು ಪಾಂಡವಪುರ ಹೇಳಿದರು.
ಪ್ರಗತಿಪರ ರೈತ ಆರ್.ಎ.ದಯಾನಂದ ಮೂರ್ತಿ, ನಟ ತಮ್ಮಣ್ಣ, ತಿಪ್ಪೇಸ್ವಾಮಿ, ಮಂಜುನಾಥ್, ಸೃಷ್ಟಿ ತಿಪ್ಪೇಶ್, ರೈತ ಮುಖಂಡ ಮಂಡ್ಯ ಮಹೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.