ADVERTISEMENT

ಭರಮಸಾಗರ: ಜಾತ್ರೆಗಾಗಿ ಯಳಗೋಡಿನಿಂದ ಇಸಾಮುದ್ರಕ್ಕೆ ಬಂದ ಮಾರಿಕಾಂಬಾ ದೇವಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 4:34 IST
Last Updated 1 ಫೆಬ್ರುವರಿ 2023, 4:34 IST
ಭರಮಸಾಗರ ಹೋಬಳಿ ಇಸಾಮುದ್ರ ಗ್ರಾಮದ ಮಾರಿಕಾಂಬದೇವಿ ಜಾತ್ರೆ ಅಂಗವಾಗಿ ಮಂಗಳವಾರ ಯಳಗೋಡು ಗ್ರಾಮದಿಂದ ಮಾರಿಕಾಂಬದೇವಿ ಮೂರ್ತಿಯನ್ನು ಮಂಗಳವಾದ್ಯದೊAದಿಗೆ ಮೆರವಣಿಗೆ ಮೂಲಕ ಇಸಾಮುದ್ರಕ್ಕೆ ಕರೆತರಲಾಯಿತು.
ಭರಮಸಾಗರ ಹೋಬಳಿ ಇಸಾಮುದ್ರ ಗ್ರಾಮದ ಮಾರಿಕಾಂಬದೇವಿ ಜಾತ್ರೆ ಅಂಗವಾಗಿ ಮಂಗಳವಾರ ಯಳಗೋಡು ಗ್ರಾಮದಿಂದ ಮಾರಿಕಾಂಬದೇವಿ ಮೂರ್ತಿಯನ್ನು ಮಂಗಳವಾದ್ಯದೊAದಿಗೆ ಮೆರವಣಿಗೆ ಮೂಲಕ ಇಸಾಮುದ್ರಕ್ಕೆ ಕರೆತರಲಾಯಿತು.   

ಭರಮಸಾಗರ: ಹೋಬಳಿಯ ಇಸಾಮುದ್ರ ಗ್ರಾಮದಲ್ಲಿ ಮಂಗಳವಾರ ಮಾರಿಕಾಂಬಾದೇವಿ ಜಾತ್ರೆ ಆರಂಭವಾಯಿತು.

ಮೂರು ವರ್ಷಕ್ಕೊಮ್ಮೆ ದೇವಿ ಜಾತ್ರೆ ನಡೆಯುವುದು ವಾಡಿಕೆ. ಕೆಲವೊಮ್ಮೆ ಕಾರಣಾಂತರಗಳಿಂದ ವಿಳಂಬವಾಗುತ್ತದೆ. ಈ ಬಾರಿ 9 ವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಇಸಾಮುದ್ರ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರು ದೂರದ ಊರುಗಳಿಂದ ಬಂಧು– ಬಳಗ ಕರೆಸಿಕೊಂಡು ಅದ್ಧೂರಿಯಾಗಿ ಜಾತ್ರೆ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಎಲ್ಲೆಡೆ ಸಂಭ್ರಮದ ವಾತಾವರಣವಿದೆ.

ಮಂಗಳವಾರ ಬೆಳಿಗ್ಗೆ ಯಳಗೋಡು ಗ್ರಾಮಸ್ಥರು ಸಂಪ್ರದಾಯದಂತೆ ಮಾರಿಕಾಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಮೂರ್ತಿಯನ್ನು ಮಡಿವಸ್ತ್ರಗಳಿಂದ ಮುಚ್ಚಿ ಜಾತ್ರೆ ನಡೆಸುವುದಕ್ಕಾಗಿ ಕರೆದುಕೊಂಡು ಹೋಗಲು ಇಸಾಮುದ್ರ ಗ್ರಾಮಸ್ಥರಿಗೆ ಅನುಮತಿ ನೀಡಿದರು. ಮಡಿಯುಟ್ಟ ಭಕ್ತರು ದೇವಿ ಮೂರ್ತಿಯನ್ನು ಹೊತ್ತು ಬರಿಗಾಲಿನಲ್ಲಿ ನಡೆಯುತ್ತ ಮಂಗಳವಾದ್ಯದೊಂದಿಗೆ ಗ್ರಾಮಕ್ಕೆ ಕರೆತಂದರು. ದೇವರ ಮೂರ್ತಿ ಬರುವ ದಾರಿಯನ್ನು ನೀರು ಹಾಕಿ ಶುದ್ಧಗೊಳಿಸಲಾಗಿತ್ತು.

ADVERTISEMENT

ತಮ್ಮೂರಿಗೆ ಬಂದ ದೇವಿಯನ್ನು ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಂಡು ಹೊಳೆಪೂಜೆ ನೆರವೇರಿಸಿ ಮೂರ್ತಿಯನ್ನು ಚೌಕಿಮನೆಯಲ್ಲಿ ಕೂರಿಸಿ ಅದಕ್ಕೆ ಮುಚ್ಚಿದ್ದ ವಸ್ತ್ರಗಳನ್ನು ತೆಗೆದು ಒಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಿ ಮದಲಿಂಗಿತ್ತಿ ಶಾಸ್ತ್ರ ಮಾಡಿ ಎಡೆ ಅರ್ಪಿಸಿದರು.

ಬಳಿಕ ರಾತ್ರಿ ಭವ್ಯ ಮೆರವಣಿಗೆಯೊಂದಿಗೆ ದೇವಿಯ ಮೂರ್ತಿಯನ್ನು ಕರೆತಂದು ಮಹಾಮಂಟಪದಲ್ಲಿ ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.