ADVERTISEMENT

ಸದ್ಬುದ್ಧಿಯಿಂದ ಯಶಸ್ಸು, ಸಾರ್ಥಕತೆ ಸಾಧ್ಯ: ಶಿವಮೂರ್ತಿ ಮುರುಘಾ ಶರಣರ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 10:48 IST
Last Updated 5 ಅಕ್ಟೋಬರ್ 2021, 10:48 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.   

ಚಿತ್ರದುರ್ಗ: ಮಾನವ ದುರ್ಬುದ್ಧಿಯಿಂದ ಹಾಳಾಗುತ್ತಿದ್ದಾನೆ. ಕೆಟ್ಟ ವಿಚಾರಗಳಿಂದ ಮನುಷ್ಯ ಅಂತರ ಕಾಯ್ದುಕೊಳ್ಳಲು ಸದ್ಬುದ್ಧಿ ಬೆಳೆಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಹಾಗೂ ಸಾರ್ಥಕತೆ ಸಾಧ್ಯವಾಗುತ್ತದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ಅನುಭವ ಮಂಟಪದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ನಡೆದ 31ನೇ ವರ್ಷ 10ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ತಾಳಿ ಕಟ್ಟಿಸಿಕೊಂಡವರು ಮತ್ತು ಕಟ್ಟಿದವರು ಸಾಂಸಾರಿಕ ಜೀವನದಲ್ಲಿ ತಾಳ್ಮೆಯನ್ನು ವಹಿಸಿದಾಗ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸಂಸಾರದ ರಥವೇರಿರುವವರು ನಿರಾತಂಕವಾಗಿ ಜೀವನ ಸಾಗಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಗದಗ ಜಿಲ್ಲೆ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಮಾತನಾಡಿ, ‘ಜಗತ್ತಿನ ಮೊಟ್ಟಮೊದಲ ಸಾಮೂಹಿಕ ವಿವಾಹ ಪ್ರಾರಂಭ ಆಗಿದ್ದು 12ನೇ ಶತಮಾನದಲ್ಲಿ. ಬಸವಾದಿ ಶರಣರು ಇದನ್ನು ಪ್ರಾರಂಭಿಸಿದರು. ಮಾತೃಹೃದಯದ ಶರಣರು 31ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತ ಬಂದಿರುವುದು ವಿಶೇಷ. ಈ ಸೇವೆಗೆ ನೊಬೆಲ್ ಪ್ರಶಸ್ತಿ ನೀಡಿದರೂ ಕಡಿಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ದಾಸೋಹಿಗಳಾದ ನಾಗರತ್ನಮ್ಮ ಎಸ್.ರುದ್ರಪ್ಪ, ಎಸ್.ವಿ.ನಾಗರಾಜಪ್ಪ ವೇದಿಕೆಯಲ್ಲಿದ್ದರು. ಎಂಟು ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಆದಿದ್ರಾವಿಡ ಮತ್ತು ಒಕ್ಕಲಿಗ ಸಮುದಾಯದ ಜೋಡಿಯ ಅಂತರ್ಜಾತಿ ವಿವಾಹ ವಿಶೇಷವಾಗಿತ್ತು. ಜಮುರಾ ಕಲಾವಿದರು ವಚನ ಗೀತೆಗಳನ್ನು ಹಾಡಿದರು.

***

ಸರ್ಕಾರ ಕೂಡ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿತ್ತು. ಆದರೆ, ಅದು ಮಧ್ಯದಲ್ಲೆ ಸ್ಥಗಿತವಾಗಿದೆ. ಶ್ರೀಮಠವು 31ವರ್ಷಗಳಿಂದ ಪ್ರತಿ ತಿಂಗಳು ಸಾಮೂಹಿಕ ಕಲ್ಯಾಣ ನಡೆಸಿಕೊಂಡು ಬರುತ್ತಿದೆ.

ಶಿವಮೂರ್ತಿ ಮುರುಘಾ ಶರಣರು,ಮುರುಘಾ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.