
ಚಿತ್ರದುರ್ಗ: ‘ಬುದ್ದ, ಬಸವಣ್ಣನವರ ಕಾಲದಿಂದಲೂ ಧ್ಯಾನಕ್ಕೆ ಮಹತ್ವವಿದೆ. ಆದ್ದರಿಂದ ಯುವ ಸಮುದಾಯ ಬೇರೆ ಬೇರೆ ಮಾರ್ಗಗಳಲ್ಲಿ ಸಾಗುವ ಬದಲು ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಆರೋಗ್ಯಕರ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರದಿಂದ ವಿಶ್ವಧ್ಯಾನ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸಂಗೀತ ಧ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವೈಜ್ಞಾನಿಕ ಯುಗದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಒತ್ತಡಕ್ಕೆ ಸಿಲುಕುವುದು ಸಾಮಾನ್ಯವಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅನಾರೋಗ್ಯಕ್ಕೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದರ ಜೊತೆ ಧ್ಯಾನಕ್ಕೆ ಮೊರೆ ಹೋಗುವುದು ಉತ್ತಮ. ಆಗ ಮಾನಸಿಕ, ದೈಹಿಕವಾಗಿ ಸದೃಢರಾಗಿರಬಹುದು’ ಎಂದು ಹೇಳಿದರು.
‘ಭೌತಿಕ ಮತ್ತು ಆಧ್ಯಾತ್ಮಿಕ ಜೀವನದ ಮಹತ್ವ ತಿಳಿದುಕೊಳ್ಳಬೇಕಾದರೆ ಧ್ಯಾನ ಅಗತ್ಯ. ಬಸವೇಶ್ವರ, ವಿಘ್ನೇಶ್ವರ, ಯೋಗೇಶ್ವರ, ವೆಂಕಟೇಶ್ವರ ಎಲ್ಲಾ ಪದಗಳಲ್ಲಿಯೂ ಈಶ್ವರ ಇದ್ದಾನೆ. ದೇಹಕ್ಕೆ ಆಹಾರ, ಮನಸ್ಸಿಗೆ ನೆಮ್ಮದಿ ಬೇಕು. ಜೀವನದಲ್ಲಿ ಆನಂದ ಅನುಭವಿಸಬೇಕಾದರೆ ಆರೋಗ್ಯ ಮುಖ್ಯ. ಆರೋಗ್ಯಕ್ಕಿಂತ ಸಂಪತ್ತು ಬೇರೆ ಯಾವುದೂ ಇಲ್ಲ. ಧ್ಯಾನದಿಂದ ಮಾನಸಿಕ ಒತ್ತಡ ನಿವಾರಿಸಿಕೊಂಡು ಕಾಯಿಲೆಯಿಂದ ದೂರವಿರಬಹುದು’ ಎಂದು ಬ್ರಹ್ಮಶ್ರೀ ಪ್ರೇಮನಾಥ ತಿಳಿಸಿದರು.
‘ಉತ್ತಮ ಆರೋಗ್ಯ, ಮನಸ್ಸಿಗೆ ಶಾಂತಿ ಎಲ್ಲರಿಗೂ ಬೇಕು. ಧ್ಯಾನದಿಂದ ಜ್ಞಾನ ಸಿಗುತ್ತದೆ. ಆಧ್ಯಾತ್ಮಿಕತೆ ಎನ್ನುವುದು ವಿಜ್ಞಾನ. ಧ್ಯಾನಕ್ಕಾಗಿ ಮೊದಲು ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು. ಚಿಕ್ಕಂದಿನಿಂದಲೇ ಧ್ಯಾನ ಮಾಡಿದರೆ ಒಳ್ಳೆಯದು. ಧ್ಯಾನದಿಂದ ಒತ್ತಡ ಮುಕ್ತ ಜೀವನ ನಡೆಸಬಹುದು’ ಎಂದು ಡಾ.ಹರಿಕೃಷ್ಣ ತಿಳಿಸಿದರು.
‘ಧ್ಯಾನದಿಂದ ಅಂತರಂಗದ ಶಕ್ತಿ ವೃದ್ಧಿಯಾಗುತ್ತದೆ. ಧ್ಯಾನದಿಂದ ಪರಮೇಶ್ವರನ ಜೊತೆ ಸಂಪರ್ಕವಿಟ್ಟುಕೊಳ್ಳಬಹುದು. ಸ್ವಪರಿವರ್ತನೆ, ಸ್ವಶಕ್ತರಾಗಲು ಧ್ಯಾನ ಮುಖ್ಯ’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್ ಕುಮಾರ್, ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರದ ಅಧ್ಯಕ್ಷೆ ಮಧುಶ್ರೀ, ನಿವೃತ್ತ ಶಿಕ್ಷಕ ಗೌರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.