ಚಿತ್ರದುರ್ಗ: ಕಬ್ಬಿಣದ ಅದಿರು ತುಂಬಿದ ಸಾವಿರಾರು ಲಾರಿಗಳು ಹಳ್ಳಿಗಳ ನಡುವಿನ ಸಣ್ಣಪುಟ್ಟ ರಸ್ತೆಗಳಲ್ಲಿ ನುಗ್ಗುತ್ತಿರುವ ಕಾರಣ ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ 50ಕ್ಕೂ ಅಧಿಕ ಗ್ರಾಮಗಳ ಜನರಿಗೆ ನಿತ್ಯದ ಬದುಕು ನರಕಸದೃಶವಾಗಿದೆ.
ಅರೆಮಲೆನಾಡು ಪ್ರದೇಶವಾಗಿರುವ ಹೊಳಲ್ಕೆರೆ ತಾಲ್ಲೂಕಿನ ಗುಡ್ಡಗಳಲ್ಲಿ ಗುಣಮಟ್ಟದ ಕಬ್ಬಿಣದ ಅದಿರು ದೊರೆಯುತ್ತಿದೆ. ಇಲ್ಲಿ ಅಂದಾಜು 9 ಕಂಪನಿಗಳು ಗಣಿಗಾರಿಕೆ ನಡೆಸುತ್ತಿವೆ. ಅದಿರು ತುಂಬಿದ ಲಾರಿಗಳು ಸಾಲಾಗಿ ಹಳ್ಳಿಗಳ ಹಾದಿಯಲ್ಲಿ ಅದಿರು ಭರ್ತಿ ಕೇಂದ್ರದತ್ತ (ಡಂಪಿಂಗ್ ಯಾರ್ಡ್) ಸಾಗುತ್ತಿದ್ದು, ತೀವ್ರ ದೂಳಿನಿಂದಾಗಿ ಹಳ್ಳಿಗರು ಬಸವಳಿಯುವಂತಾಗಿದೆ.
ಭಾರಿ ಪ್ರಮಾಣದ ದೂಳಿನಿಂದಾಗಿ ಗ್ರಾಮೀಣರು ಆಸ್ತಮಾ, ಶ್ವಾಸನಾಳದ ಉರಿಯೂತ, ಕ್ಷಯ (ಟಿ.ಬಿ) ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಸ್ತೆಯಿಂದ 1 ಕಿ.ಮೀ.ವರೆಗೆ ಕೃಷಿ ಚಟುವಟಿಕೆ ನಾಶವಾಗುತ್ತಿದೆ. ಭೂಮಿಯ ಮೇಲ್ಮೈನಲ್ಲಿ ಖನಿಜಯುಕ್ತ ಮಣ್ಣು ಮೆತ್ತಿಕೊಳ್ಳುತ್ತಿದ್ದು, ಕಾಳು ಮೊಳಕೆಯೊಡೆಯುತ್ತಿಲ್ಲ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.
‘ನಮಗೆ ಪಶುಪಾಲನೆ, ಹೈನುಗಾರಿಕೆಯೇ ಪ್ರಧಾನವಾಗಿತ್ತು. ಗಟ್ಟಿ ಹಾಲು, ಮೊಸರಿಗೆ ನಮ್ಮ ಹಳ್ಳಿಗಳು ಹೆಸರುವಾಸಿಯಾಗಿದ್ದವು. ಆದರೆ, ಗಣಿ ಲಾರಿಗಳ ಹಾವಳಿಯಿಂದಾಗಿ ಹುಲ್ಲು ದೊರೆಯದಾಗಿದೆ. ಹೈನುಗಾರಿಕೆ ಕೊನೆಯಾಗುತ್ತಿದೆ’ ಎಂದು ಗಂಜಿಗಟ್ಟೆ ಗ್ರಾಮದ ಜಿ.ಸಿ. ಮಹೇಶ್ವರಪ್ಪ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ಕೆಲ ಲಾರಿಗಳು ಹೊಳಲ್ಕೆರೆ ತಾಲ್ಲೂಕಿನ ಸಾಸಲು ಗ್ರಾಮದ ರೈಲ್ವೆ ಸಾಗಾಣಿಕಾ ಕೇಂದ್ರಕ್ಕೆ ತೆರಳಿದರೆ, ಇನ್ನಷ್ಟು ಲಾರಿಗಳು ನಗರದ ಮೂಲಕ ಬಳ್ಳಾರಿಯತ್ತ ಸಾಗುತ್ತವೆ. ಎರಡೂ ಭಾಗದ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ಸ್ಥಳೀಯರಿಗೆ ನರಕ ತೋರಿಸುತ್ತಿವೆ. ಲಾರಿಗಳ ನಡುವೆ ಕಾರು, ಬೈಕ್, ಶಾಲಾ ವಾಹನಗಳ ಓಡಾಟ ಸವಾಲಾಗಿದೆ. ಅಪಘಾತದಿಂದ ಪ್ರಾಣ ಹಾನಿಯೂ ಹೆಚ್ಚಾಗುತ್ತಿದೆ.
ಗಣಿ ಕಂಪನಿ ಹಾಗೂ ಲಾರಿಗಳಿಗೆ ನೇರ ಸಂಬಂಧವಿಲ್ಲ, ಸಾಗಣೆದಾರರಿಗೆ (ಟ್ರಾನ್ಸ್‌ಪೋರ್ಟರ್ಸ್) ಗುತ್ತಿಗೆ ನೀಡಲಾಗಿದೆ. ಸಾಗಣೆದಾರರು ಪ್ರಭಾವಿಗಳಾಗಿದ್ದು, ಸ್ಥಳೀಯರಿಗೆ ಉಚಿತವಾಗಿ ಲಾರಿ ಕೊಡಿಸಿದ್ದಾರೆ. ಸ್ಥಳೀಯರೇ ಲಾರಿ ಮಾಲೀಕರಾಗುತ್ತಿದ್ದು, ಆಗಾಗ ದೂಳಿನ ವಿರುದ್ಧ ಪುಟಿದೇಳುವ ಹೋರಾಟವನ್ನು ಅವರು ತಣ್ಣಗಾಗಿಸುತ್ತಾರೆ ಎಂಬ ಆರೋಪವೂ ಇದೆ.
ಅಡಿಕೆ ಬೆಳೆಗಾರರಿಂದಾಗಿ ಜಿಲ್ಲೆಯಲ್ಲಿ ‘ಶ್ರೀಮಂತರ ಊರು’ ಎಂದು ಪ್ರಸಿದ್ಧಿ ಪಡೆದಿರುವ ಭೀಮಸಮುದ್ರ ಲಾರಿಗಳಿಂದ ತೀವ್ರ ಪರಿಣಾಮ ಎದುರಿಸುತ್ತಿದೆ. ಇಲ್ಲಿ ಮಾಜಿ ಸಂಸದರು, ಶಾಸಕರು, ಎಂಎಲ್‌ಸಿಗಳು, ವಿವಿಧ ಪಕ್ಷಗಳ ರಾಜಕಾರಣಿಗಳಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಅವರೇ ಗಣಿ ಚಟುವಟಿಕೆಯ ಭಾಗವೂ ಆಗಿರುವ ಕಾರಣ ಸಮಸ್ಯೆಯ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸುತ್ತಾರೆ.
‘ಲಾರಿಗಳಿಗೆ ಟಾರ್ಪಲಿನ್ ಹೊದಿಸುತ್ತಿಲ್ಲ. ಗಣಿ ಪ್ರದೇಶ ಬಿಡುವುದಕ್ಕೂ ಮೊದಲು ಲಾರಿಗಳನ್ನು ಸ್ವಚ್ಛಗೊಳಿಸಬೇಕು (ವಾಟರ್ ವಾಶ್). ಅದಾವುದೂ ನಡೆಯುತ್ತಿಲ್ಲ. ಜೊತೆಗೆ ತೂಕದಲ್ಲಿ ವ್ಯತ್ಯಾಸವಿದ್ದು, ನಿಗದಿಗಿಂತ ಹೆಚ್ಚು ಅದಿರು ತುಂಬಿಸಿ ಓಡಿಸಲಾಗುತ್ತಿದೆ. ಗಣಿಬಾಧಿತ ಹಳ್ಳಿಗಳ ಸಂರಕ್ಷಣೆಗೆ ರಾಜ್ಯ ಗಣಿ ಪುನಶ್ಚೇತನ ನಿಗಮದಿಂದ ಕೋಟ್ಯಂತರ ರೂಪಾಯಿ ಹಣ ಬಂದರೂ ಅದು ನಿಗದಿತ ಉದ್ದೇಶಕ್ಕೆ ಸದ್ಬಳಕೆಯಾಗುತ್ತಿಲ್ಲ’ ಎಂದು ಗಣಿಬಾಧಿತ ಹೋರಾಟ ಸಮಿತಿ ಅಧ್ಯಕ್ಷ ಎಚ್.ರಮೇಶ್ ಆರೋಪಿಸಿದರು.
‘ದೂಳಿನಿಂದ ಶಾಶ್ವತ ಪರಿಹಾರ ಬೇಕು. ಇಲ್ಲದಿದ್ದರೆ ದಯಾಮರಣಕ್ಕಾಗಿ ಒತ್ತಾಯಿಸಿ ರಾಷ್ಟ್ರಪತಿಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ’ ಎಂದು ಗಣಿ ಬಾಧಿತ ಹಳ್ಳಿಗಳ ಜನರು ಹೇಳಿದರು.
ಹೊಳಲ್ಕೆರೆ ತಾಲ್ಲೂಕು ನೀರ್ತಡಿ ಮೀಸಲು ಅರಣ್ಯದಲ್ಲಿ ಕಬ್ಬಿಣದ ಅದಿರು ಅನ್ವೇಷಣೆಗೆ ಅರಣ್ಯ ಇಲಾಖೆ ಅನುಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಅದಿರಿನ ದೂಳಿನಿಂದ ಮಕ್ಕಳಿಗೆ ಗಂಟಲುಬೇನೆ ಸಾಮಾನ್ಯವಾಗಿದೆ. ನಿರಂತರವಾಗಿ ಕಾಡಿದರೆ ಅದು ಮುಂದೆ ಕ್ಸಾನ್ಸರ್‌ಗೆ ಕಾರಣವಾಗುತ್ತದೆ. ಗಣಿಭಾದಿತ ಪ್ರದೇಶದಲ್ಲಿ ಟಿ.ಬಿ ಸಮಸ್ಯೆ ಹೆಚ್ಚುತ್ತಿದೆಡಾ.ಸುಹೇಲ್ ವೈದ್ಯಾಧಿಕಾರಿ ಪಿಎಚ್‌ಸಿ ಮುತ್ತುಗದೂರು
ಗಣಿ ಲಾರಿಗಳ ಓಡಾಟದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಗೆ ಲಾರಿಗಳು ರಸ್ತೆ ಓಡಾಟದ ಬದಲಿಗೆ ಪರ್ಯಾಯ ಮಾರ್ಗ ಅನುಸರಿಸಬೇಕಾದ ಅವಶ್ಯಕತೆ ಇದೆ. ಈ ಕುರಿತು ಕೇಂದ್ರ ಕಚೇರಿಗೆ ಶಿಫಾರಸು ಮಾಡಿದ್ದೇವೆಆಸಿಫ್ ಖಾನ್ ಜಿಲ್ಲಾ ಪರಿಸರ ಅಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿ
‘ಗಣಿ ಲಾರಿಗಳಿಂದ ರೈತರನ್ನು ರಕ್ಷಿಸುವಂತೆ ಕೋರಿ ಜಿಲ್ಲೆಯ ಹಲವು ಮಠಾಧೀಶರನ್ನು ಕೋರಿಕೊಂಡಿದ್ದೆವು. ಗಣಿ ಅಧಿಕಾರಿಗಳು ಹಾಗೂ ಲಾರಿ ಮಾಲೀಕರನ್ನು ಕರೆಸಿ ಸ್ವಾಮೀಜಿಗಳು ಮಾತನಾಡಿದರು. ಸಮಸ್ಯೆ ಬಗೆಹರಿಯುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಆದರೆ ಆಗಿದ್ದೇ ಬೇರೆ. ಸ್ವಾಮೀಜಿಗಳು ಮಠಕ್ಕೆ ಕಪ್ಪಕಾಣಿಕೆ ಪಡೆದು ಲಾರಿ ಓಡಾಡಲು ಬಿಟ್ಟಿದ್ದಾರೆ’ ಎಂದು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಭೀಮಸಮುದ್ರ ಗ್ರಾಮಸ್ಥರೊಬ್ಬರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.