ADVERTISEMENT

ಸತ್ಯ ಒಪ್ಪಿಕೊಳ್ಳಲು ಸಚಿವರು ಸಿದ್ಧರಿಲ್ಲ

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಜಿ.ಬಿ. ಬಾಲಕೃಷ್ಣಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 16:22 IST
Last Updated 3 ಜುಲೈ 2021, 16:22 IST
ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್
ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್   

ಚಿತ್ರದುರ್ಗ: ‘ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ, ಇದನ್ನು ಒಪ್ಪಿಕೊಳ್ಳದ ಸಚಿವರು ನನ್ನ ಸಹಾಯಕನಲ್ಲ ಎನ್ನುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಜಿ.ಬಿ. ಬಾಲಕೃಷ್ಣಸ್ವಾಮಿ ಯಾದವ್ ಆರೋಪಿಸಿದರು.

‘ರಾಜಣ್ಣ ಎಂಬುವವರು ಬಿಜೆಪಿ ರಾಜ್ಯ ಘಟದಕ ಉಪಾಧ್ಯಕ್ಷ ವಿಜಯೇಂದ್ರ ಅವರ ಹೆಸರು ಹೇಳಿಕೊಂಡು ಕೋಟಿಗಟ್ಟಲೇ ಹಣ ದೋಚಿದ್ದಾರೆ. ಸಿಸಿಬಿ ಈ ಸಂಬಂಧ ಮಾಹಿತಿ ಕಲೆಹಾಕುತ್ತಿದೆ. ಪ್ರಕರಣದ ಕುರಿತು ಕಾಂಗ್ರೆಸ್‌ ಕಾರ್ಯಕರ್ತರ‍್ಯಾರು ದೂರು ನೀಡಿಲ್ಲ. ಸ್ವತಃ ವಿಜಯೇಂದ್ರ ಅವರೇ ಅವರದೇ ಪಕ್ಷದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರಾಜ್ಯದ ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವರು, ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಕುರಿತು ಅದೇ ಪಕ್ಷದ ಮುಖಂಡ ಎಚ್‌. ವಿಶ್ವನಾಥ್ ಈಚೆಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ, ಸರ್ಕಾರ ಮಾತ್ರ ತನಿಖೆಗೆ ಮುಂದಾಗುತ್ತಿಲ್ಲ. ಭ್ರಷ್ಟಾಚಾರದ ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತಿರುವ ಕಾರಣ ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತಪಟ್ಟವರ ಅಂಕಿ–ಅಂಶವನ್ನು ಸರಿಯಾಗಿ ನೀಡುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಅಭಿಯಾನ ಕೈಗೊಂಡಿದ್ದು, ನಿಖರ ಮಾಹಿತಿಯನ್ನು ಕೆಲವೇ ತಿಂಗಳಲ್ಲಿ ಬಹಿರಂಗಪಡಿಸಲಿದೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ‘ಪಕ್ಷ ಸಂಘಟನೆಗೆ ಹಣದ ಕೊರತೆ ಇಲ್ಲ. ಪಕ್ಷದ ವರಿಷ್ಠರು ನೀಡುವಂಥ ಕಾರ್ಯಕ್ರಮಗಳನ್ನು ಆಡಂಬರ ಇಲ್ಲದೆಯೇ ಮಾಡಿದ್ದೇವೆ. ಪಕ್ಷದ ಜಿಲ್ಲಾ ಘಟಕದಲ್ಲಿ ಹಣವಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದುದು’ ಎಂದರು.

ಮುಖಂಡರಾದ ಕೆ.ಎಂ. ಹಾಲೇಶ್, ಎನ್‌.ಡಿ. ಕುಮಾರ್, ಅಶೋಕ್‌ನಾಯ್ಡು, ಕೆ.ಪಿ.ಸಂಪತ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.