ಹೊಸದುರ್ಗ: ತಾಲ್ಲೂಕಿನ ಮತ್ತೋಡು ಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ರೈತರೊಬ್ಬರ ಅಡಿಕೆ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 100ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮನಬಂದಂತೆ ಕಡಿದು ಹಾಕಿದ್ದಾರೆ.
ಸಣ್ಣಮ್ಮ ಮತ್ತು ಚಿತ್ತಪ್ಪ ಎಂಬ ದಂಪತಿ ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು 1200ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಇನ್ನೆರಡು ವರ್ಷಗಳಾಗಿದ್ದರೆ ಫಸಲು ಬರುತ್ತಿತ್ತು. ಆದರೆ, ಯಾರೋ ಕಿಡಿಗೇಡಿಗಳು 100ಕ್ಕೂ ಹೆಚ್ಚು ಗಿಡಗಳನ್ನು ನಾಶಪಡಿಸಿದ್ದಾರೆ. ರೈತ ಕುಟುಂಬ ಕಣ್ಣೀರು ಹಾಕುತ್ತಿದೆ.
‘ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ಬೋರ್‌ವೆಲ್ ಕೊರೆಸಿ, ಮೋಟಾರ್, ಪೈಪ್‌ಲೈನ್‌ಗಾಗಿ ₹ 10 ಲಕ್ಷಕ್ಕೂ ಅಧಿಕ ಖರ್ಚು ಮಾಡಿ, ಅಡಿಕೆ ಗಿಡಗಳನ್ನು ನೆಟ್ಟಿದ್ದೆವು. ಇದರಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ನಾವು ಕಷ್ಟಪಟ್ಟು ಬೆಳೆಸಿದ್ದೆವು. ಆದರೆ, ಕಿಡಿಗೇಡಿಗಳು ಮಚ್ಚುಗಳಿಂದ ಗಿಡಗಳನ್ನು ನೆಲಕ್ಕುರಳಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಮಗೆ ನ್ಯಾಯ ಒದಗಿಸಿಕೊಡಿ’ ಎಂದು ರೈತ ಪೂಜಾರಿ ಚಿತ್ತಪ್ಪ ಮನವಿ ಮಾಡಿದ್ದಾರೆ.
ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.