
ಚಳ್ಳಕೆರೆ: ಇ–ಸ್ವತ್ತು ನೀಡುವ ವಿಚಾರದಲ್ಲಿ ದಾಖಲೆಗಳ ಕೊರತೆಯ ನೆಪ ಹೇಳಿ ಸಾರ್ವಜನಿಕರನ್ನು ಪದೇಪದೇ ನಗರಸಭೆಗೆ ಅಲೆದಾಡುವಂತೆ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಎಚ್ಚರಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
‘ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಕಚೇರಿಗೆ ಬರುತ್ತಿಲ್ಲ. ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಸರಿಯಾಗಿ ಕರ್ತವ್ಯ ನಿರ್ವಹಿಸಲು ಆಗದಿದ್ದರೆ ವರ್ಗ ಮಾಡಿಸಿಕೊಂಡು ಹೋಗಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ವಾಣಿಜ್ಯ ಮಳಿಗೆಗಳ ತೆರಿಗೆ ವಸೂಲಾತಿ ವೇಳೆ ಕಿರಿಕಿರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸರಿಯಾಗಿ ತೆರಿಗೆ ಕಟ್ಟುವವರಿಗೆ ಯಾಕೆ ತೊಂದರೆ ನೀಡುತ್ತೀರಿ? ಆದರೆ ಆರ್ಥಿಕವಾಗಿ ಸಧೃಡ ಆಗಿರುವವರಿಂದ ಮುಲಾಜಿಲ್ಲದೆ ತೆರಿಗೆ ವಸೂಲಿ ಮಾಡಿ’ ಎಂದು ಸೂಚಿಸಿದರು.
‘ನಗರದ ಹಲವೆಡೆ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ದೂರು ದಾಖಲಿಸಿ ದಂಡ ಹಾಕಿಬೇಕು. ಬಿಡಾಡಿ ದನಗಳು, ಬೀದಿ ನಾಯಿಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ನಗರದಲ್ಲಿರುವ ಉದ್ಯಾನ, ಚರಂಡಿ, ರಸ್ತೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರದ ಅಭಿವೃದ್ಧಿಯಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ಮುಖ್ಯವಾಗಿದ್ದು, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು.
ನಗರಸಭೆ ಆಯುಕ್ತೆ ನಾಗವೇಣಿ, ಅಧಿಕಾರಿಗಳಾದ ಭೂತಯ್ಯ, ಶ್ರೀನಿವಾಸ, ಮಂಜುನಾಥ್, ವಿನಯ್ ಕುಮಾರ್, ನರೇಂದ್ರಬಾಬು, ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.