
ಹೊಸದುರ್ಗ: ಪಟ್ಟಣದ ಶಾಲಾ ಕಾಲೇಜುಗಳ ಸಮೀಪ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ಕೆಲ ಯುವಕರು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಚುಡಾಯಿಸುವ, ಪುಂಡ ಯುವಕರ ಗುಂಪಿನ ಉಪಟಳ ಹೆಚ್ಚಾಗಿದ್ದು, ಈ ಬಗ್ಗೆ ಪೋಲಿಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಒತ್ತಾಯಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಸೋಮವಾರ ಭೇಟಿ ನೀಡಿ, ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹಾಗೂ ಇನ್‌ಸ್ಪೆಕ್ಟರ್ ರಮೇಶ್ ಅವರೊಂದಿಗೆ ಮಾತನಾಡಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ನಿರಂತರವಾಗಿ ಕಳ್ಳತನ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಇವುಗಳ ತಡೆಗೆ ಪೊಲೀಸ್ ಇಲಾಖೆ ಇನ್ನಷ್ಟು ಎಚ್ಚರ ವಹಿಸಬೇಕು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಜಾಗೃತಿ ಸಭೆ ನಡೆಸಿ, ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಪಿ ಶಿವಕುಮಾರ್ ಅವರು, ‘ಸಾರ್ವಜನಿಕರಿಗೆ ತೊಂದರೆ ಕೊಡುವ ಪ್ರಕರಣಗಳು ತಿಳಿದರೆ ತಕ್ಷಣ ಹೊಸದುರ್ಗ ಪಿ.ಐ 9480803134 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು’ ಎಂದರು.
ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿಯೇ ಪೊಲೀಸ್ ಇಲಾಖೆ ಸದಾ ಜಾಗೃತವಾಗಿದೆ. ಕಳ್ಳತನ, ಕೊಲೆ, ಬೆದರಿಕೆ, ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತಿದೆ. ಕೆಲವು ಶಾಲಾ ಕಾಲೇಜುಗಳಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಅಪರಾಧ ಪ್ರಕರಣಗಳು ಬೇಧಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡುವುದೇ ಇಲಾಖೆಯ ಉದ್ದೇಶ’ ಎಂದು ತಿಳಿಸಿದರು.
ಈ ವೇಳೆ ಪಿಐ ರಮೇಶ್, ಪಿಎಸ್ಐ ಮಹೇಶ್, ಹೊಸದುರ್ಗ ಬಿಜೆಪಿ ಮಂಡಲ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಮುಖಂಡರಾದ ವಸಂತಕುಮಾರ್, ಪ್ರದೀಪ್ ಡಿ.ಎಸ್., ಜಗದೀಶ್ ರಾಮಯ್ಯ, ಶಿವು ಮಠ, ಕಲ್ಲೇಶ್, ವರುಣ್, ಅರುಣ್ ರಾಮಗಿರಿ, ಸಿದ್ದಲಿಂಗ ಸ್ವಾಮಿ ಸೇರಿದಂತೆ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.