ಚಿತ್ರದುರ್ಗ: ‘ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಈ ಕಾರಣದಿಂದಾಗಿ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ರಾಜೀನಾಮೆ ನೀಡಬೇಕು’ ಎಂದು ಮೊಳಕಾಲ್ಮುರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
‘ಶ್ರೀರಾಮುಲು ಹಾಗೂ ಅವರ ಆಪ್ತ ಕಾರ್ಯದರ್ಶಿ ಅವರ ಭ್ರಷ್ಟಾಚಾರದಿಂದ ಬೇಸರಗೊಂಡಿದ್ದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವದಿಸಿದ್ದಾರೆ. ಇದರಿಂದಾಗಿ ಅಧಿಕ ಸ್ಥಾನಗಳೊಂದಿಗೆ ಬಹುಮತ ಗಳಿಸಿದೆ. ಸಚಿವರ ದುರಾಡಳಿತ ಗಮನಿಸಿ ಮುಖ್ಯಮಂತ್ರಿ ಅವರು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದು ಶುಕ್ರವಾರ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.
‘ನಾನು ಶಾಸಕನಾಗಿದ್ದ ವೇಳೆ ರಸ್ತೆಯಲ್ಲಿ ನಿಂತು ಜನರ ಸಮಸ್ಯೆ ಆಲಿಸಿದ್ದೇನೆ. ಆದರೆ, ಸಚಿವರ ಆಪ್ತ ಕಾರ್ಯದರ್ಶಿಗಳು ಹಣವಿಲ್ಲದೆ ಯಾವ ಕೆಲಸನ್ನೂ ಮಾಡಿಕೊಡುವುದಿಲ್ಲ. ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿರುವವರಿಗೆ ನಾಚಿಕೆ ಆಗಬೇಕು’ ಎಂದು ಛೇಡಿಸಿದ್ದಾರೆ.
‘ಬಿಜೆಪಿಯ ದುರಾಡಳಿತ, ಬೆಲೆ ಏರಿಕೆ ನೀತಿ, ಲೋಕಸಭೆ–ವಿಧಾನಸಭೆ ಚುನಾವಣೆಗೂ ಮುನ್ನ ಅಭಿವೃದ್ಧಿ ವಿಚಾರದಲ್ಲಿ ಘೋಷಿಸಿರುವುದನ್ನು ಅನುಷ್ಠಾನಗೊಳಿಸುವಿಲ್ಲಿ ವಿಫಲ ಆಗಿರುವುದನ್ನು ಮನಗಂಡ ಮತದಾರರು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವದಿಸಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಬಾಲಕೃಷ್ಣಸ್ವಾಮಿ ಯಾದವ್ ತಿಳಿಸಿದ್ದಾರೆ.
ಜನರನ್ನು ಮೋಡಿ ಮಾಡಿ ಚುನಾವಣೆಗಳಲ್ಲಿ ಹೇಗಾದರೂ ಗೆಲುವು ಸಾಧಿಸಬಹುದು ಎಂಬ ಬಿಜೆಪಿ ಮುಖಂಡರಿಗೆ ಈ ಫಲಿತಾಂಶದಿಂದ ಭ್ರಮನಿರಸನ ಉಂಟಾಗಿದೆ. ಕೂಡಲೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಿಸಲು ಮುಂದಾಗಬೇಕು. ಭಯ ಬಿದ್ದು, ಮುಂದೂಡಬಾರದು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.