
ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿಯಲ್ಲಿ ಕೆಡಿಪಿ ಸಭೆ ನಡೆಯಿತು
ಮೊಳಕಾಲ್ಮುರು: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸಿದ್ದು ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಕೆಲವೆಡೆ ವಿದ್ಯಾರ್ಥಿಗಳು ಶಾಲೆಗೆ ನಿರಂತರ ಗೈರಾಗುತ್ತಿರುವುದು ಆತಂಕ ತಂದಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ನಿರ್ಮಲಾದೇವಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಡಳಿತಾಧಿಕಾರಿ ಸೈಯದ್ ನಯೀಮ್ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
‘ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಗೈರು ಹೆಚ್ಚಿದೆ. ಅಂದಾಜು 486 ವಿದ್ಯಾರ್ಥಿಗಳು ಕೆಲ ದಿನಗಳಿಂದ ನಿರಂತರ ಗೈರಾಗುತ್ತಿದ್ದಾರೆ. ಈ ಪೈಕಿ 185 ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ, ಇವರು ಪಾಲಕರ ಜೊತೆ ಗುಳೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಈ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವುದು ಸಾಧ್ಯವೇ ಎಂಬ ಆತಂಕ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಸ್ಥಳೀಯರಿಂದ ಪಾಲಕರ ಮೊಬೈಲ್ ಸಂಖ್ಯೆ ಪಡೆದುಕೊಂಡು ಮನವೊಲಿಸಿ ಪರೀಕ್ಷೆ ಬರೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ ಸೂಚಿಸಿದರು.
‘ಕಳೆದ ವರ್ಷ 36,000 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಕೊರತೆಯಿಂದ ಸಂಪೂರ್ಣ ಹಾನಿಯಾಗಿದೆ. ಶೇಂಗಾವನ್ನು ಏಕಬೆಳೆ ಪದ್ಧತಿಯಂತೆ ಅನುಸರಿಸುತ್ತಿರುವುದು ಬೆಳೆ ನಷ್ಟಕ್ಕೆ ಒತ್ತು ನೀಡಿದೆ. ಕಡಿಮೆ ಮಳೆ ಬಿದ್ದರೂ ಕೈಹಿಡಿಯುವ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಸರ್ಕಾರ ಪ್ರತಿ ರೈತನಿಗೆ ಪ್ರತಿ ಎಕರೆಗೆ ₹ 5,000 ಪ್ರೋತ್ಸಾಹಧನ ನೀಡುತ್ತಿದ್ದು, ಸದುಪಯೋಗ ಮಾಡಿಕೊಂಡು ಅಧಿಕ ಬಿತ್ತನೆ ಮಾಡಬೇಕು’ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಜಿ. ಮಂಜುನಾಥ್ ಹೇಳಿದರು.
‘ಶೇಂಗಾ ದರ ಹೆಚ್ಚಳವಾಗಿರುವ ಕಾರಣ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದ್ದು, ಅಗತ್ಯದಷ್ಟು ಬಿತ್ತನೆ ಬೀಜಕ್ಕಾಗಿ ಸರ್ಕಾರಕ್ಕೆ ಮನ್ನೆಚ್ಚರಿಕೆಯಿಂದ ಪತ್ರ ಬರೆಯುವಂತೆ‘ ಇಒ ಹನುಮಂತಪ್ಪ ಸೂಚಿಸಿದರು.
ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಸಕರ ಸಭೆಯಲ್ಲೂ ಈ ಬಗ್ಗೆ ತಿಳಿಸಲಾಗಿದೆ ಎಂದು ಸೂಚಿಸಿದರು.
‘ಗ್ರಾಮ ಪಂಚಾಯಿತಿಗಳು ಸಹಕಾರ ನೀಡಿದಲ್ಲಿ ಕಾರ್ಯಾಚರಣೆಗೆ ಅನುಕೂಲವಾಗಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಗಿರೀಶ್ ಹೇಳಿದರು.
ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.