ಮೊಳಕಾಲ್ಮುರು: ಬುಡಕಟ್ಟು ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನʼ ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗಿದ್ದು, ಇಲಾಖೆಗಳ ಸಮನ್ವಯ ಮತ್ತು ಪ್ರಚಾರದ ಕೊರತೆ ಎದುರಿಸುತ್ತಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕಿದೆ. ಕೇಂದ್ರದ ಪ್ರಮುಖ ಯೋಜನೆಗಳು ಅದರಲ್ಲೂ ಆರ್ಥಿಕ, ಕೃಷಿ, ಸಾಮಾಜಿಕ ಯೋಜನೆಗಳಲ್ಲಿ ಬುಡಕಟ್ಟು ಜನಾಂಗದ ಫಲಾನುಭವಿಗಳನ್ನು ನೋಂದಣಿ ಮಾಡುವುದು ಮುಖ್ಯ ಉದ್ದೇಶವಾಗಿದೆ.
‘ಜನ್‌ಧನ್, ಆಯುಷ್ಮಾನ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಕಿಸಾನ್ ಸಮ್ಮಾನ್ ಪತ್ರ ನೋಂದಣಿ ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹೆಸರು ನೋಂದಾಯಿಸಿದಲ್ಲಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಜಾರಿಗೆ ತರಲಿರುವ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ’ ಎಂದು ಪರಿಶಿಷ್ಟ ವರ್ಗಗಳ ತಾಲ್ಲೂಕು ಅಧಿಕಾರಿ ನಾಸೀರ್ ಹುಸೇನ್ ಮಾಹಿತಿ ನೀಡಿದರು.
‘ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಮತ್ತು ಅಂಚೆ ಇಲಾಖೆ ಜಂಟಿಯಾಗಿ ಇದನ್ನು ನಿರ್ವಹಿಸಬೇಕಿದೆ. ಯೋಜನೆ ಅನುಷ್ಠಾನ ವಿಳಂಬವಾಗಿದೆ, ಬೇರೆ ಇಲಾಖೆಗಳು ಕೈಜೋಡಿಸದ ಪರಿಣಾಮ ಪರಿಶಿಷ್ಟ ವರ್ಗಗಳ ಇಲಾಖೆ ತನ್ನ ಸಿಬ್ಬಂದಿ ಮೂಲಕ ಜಾಗೃತಿ ಮೂಡಿಸುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.
‘ತಾಲ್ಲೂಕಿನ ಬಾಂಡ್ರಾವಿ, ಮೇಲಿನಕಣಿವೆ, ಬೊಮ್ಮದೇವರಹಳ್ಳಿ, ಕಣಕುಪ್ಪೆ, ಕೋನಾಪುರ, ಉರ್ಥಾಳ್, ರಾಮಸಾಗರ, ನಾಗಸಮುದ್ರ, ಕಾಟನಾಯಕನಹಳ್ಳಿ, ಹಾನಗಲ್, ಸೂಲೇನಹಳ್ಳಿ, ಗುಡ್ಡದಹಳ್ಳಿ, ತಳವಾರಹಳ್ಳಿ, ರಾಯಾಪುರ, ಯರೇನಹಳ್ಳಿ, ತುಮಕೂರ್ಲಹಳ್ಳಿ, ಚಿಕ್ಕುಂತಿ, ಮರ್ಲಹಳ್ಳಿ, ನೇರ್ಲಹಳ್ಳಿ, ಸೂರಮ್ಮನಹಳ್ಳಿ, ಮುತ್ತಿಗಾರಹಳ್ಳಿ, ಮಾರಮ್ಮನಹಳ್ಳಿ, ನೇತ್ರನಹಳ್ಳಿ ಗ್ರಾಮಗಳು ಯೋಜನೆಗೆ ಆಯ್ಕೆಯಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 80 ಗ್ರಾಮಗಳನ್ನು ಗುರುತಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಈ ಕಾರ್ಯಕ್ರಮ ತಾಲ್ಲೂಕಿನಲ್ಲಿ ನಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಂಬಂಧಪಟ್ಟವರು ನಮ್ಮ ಗಮನಕ್ಕೂ ತಂದಿಲ್ಲ’ ಎಂದು ತಹಶೀಲ್ದಾರ್ ಟಿ. ಜಗದೀಶ್ ಮತ್ತು ತಾಲ್ಲೂಕು ಪಂಚಾಯಿತಿ ಇಒ ಎಚ್. ಹನುಮಂತಪ್ಪ ಸ್ಪಷ್ಟಪಡಿಸಿದರು.
ಹೊಣೆ ಹೊತ್ತಿರುವ ಜಿಲ್ಲಾಡಳಿತ ಇತ್ತ ಗಮನಹರಿಸಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಯೋಜನೆಯ ಮೂಲ ಉದ್ದೇಶ ಸಾಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಾರೆ.
ಬುಡಕಟ್ಟು ಜನರಿಗೆ ದಾರಿದೀಪವಾಗಬೇಕಾದ ಇಂತಹ ಯೋಜನೆ ಬಗ್ಗೆ ನಿರ್ಲಕ್ಷ್ಯ ಸಲ್ಲದು ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮತ್ತು ಕೇಂದ್ರ ಸಚಿವರಿಗೆ ಪತ್ರ ಬರೆದು ದೂರು ಸಲ್ಲಿಸಲಾಗುವುದು.ಕೆ.ಜೆ. ಜಯಲಕ್ಷ್ಮಿ ನಾಯಕ್ ಸೆನೆಟ್ ಸದಸ್ಯೆ ಬಳ್ಳಾರಿ ವಿ.ವಿ.
ಸಿಬ್ಬಂದಿಯು ಆಯ್ಕೆಯಾದ ಗ್ರಾಮಗಳಿಗೆ ಹೋಗಿ ಸಿಕ್ಕ ಜನರ ಕೈಗೆ ಬ್ಯಾನರ್ ನೀಡಿ ಫೋಟೊ ಕ್ಲಿಕ್ಕಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಯೋಜನೆಗಳ ಮಾಹಿತಿ ನೋಂದಣಿ ಪ್ರಕ್ರಿಯೆ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ದಾಖಲೆಗೆ ಮಾತ್ರ ಅಭಿಯಾನ ಸೀಮಿತವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ ಎಂದು ಬುಡಕಟ್ಟು ಜನಾಂಗದ ಮುಖಂಡರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.