
ಮೊಳಕಾಲ್ಮುರು: ತಾಲ್ಲೂಕಿನಲ್ಲಿ ನೂತನವಾಗಿ 15 ಜನವಸತಿ ಪ್ರದೇಶಗಳನ್ನು ‘ಕಂದಾಯ ಗ್ರಾಮ’ಗಳನ್ನಾಗಿ ಘೋಷಿಸಲು ಅನುಮೋದನೆ ಸಿಕ್ಕಿದೆ. ಇದರೊಂದಿಗೆ ಜನವಸತಿ ಪ್ರದೇಶಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
ಕಾಟನಾಯಕನಹಳ್ಳಿಯ ಮೇಗಳಹಟ್ಟಿ, ಗುಡ್ಡದಹಳ್ಳಿಯ ಕೆಳಗಳಹಟ್ಟಿ, ಮಾಚೇನಹಳ್ಳಿಯ ಹೊಸೂರು, ಬಾಂಡ್ರಾವಿಯ ಬಿ. ಹನುಮಾಪುರ, ಬಾಂಡ್ರಾವಿಯ ಬಿ. ಹನುಮನಗುಡ್ಡ, ಸಿದ್ದಾಪುರದ ಎಸ್. ಹನುಮಾಪುರ, ಸಿದ್ದಾಪುರದ ರೊಪ್ಪ, ಕೋನಸಾಗರದ ಊಡೇವು, ಹಾನಗಲ್‌ನ ಕೊಮ್ಮನಪಟ್ಟಿ, ನಾಗಸಮುದ್ರದ ಹುಚ್ಚಂಗಿದುರ್ಗ, ರಾಯಾಪುರದ ಪದಿನಾಮ ದೇವರಹಟ್ಟಿ, ನೇರ್ಲಹಳ್ಳಿಯ ಜಂಗಲಿ ಸೂರಯ್ಯನಹಟ್ಟಿಗಳನ್ನು ಹೊಸ ಕಂದಾಯ ಗ್ರಾಮಗಳಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
‘ನಮ್ಮ ಊರುಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಬೇಕು ಎಂದು ಹಲವು ವರ್ಷಗಳಿಂದ ಗ್ರಾಮಸ್ಥರಿಂದ ಬೇಡಿಕೆ ಇತ್ತು. ಇದೀಗ ಅನುಮೋದನೆ ಸಿಕ್ಕಿರುವುದು ಆಯಾ ಗ್ರಾಮಸ್ಥರಲ್ಲಿ ಸಂತಸ ತಂದಿದೆ.
ಇಲ್ಲಿಯವರೆಗೂ ತಾಲ್ಲೂಕಿನಲ್ಲಿ 92 ಜನವಸತಿ ಪ್ರದೇಶಗಳಿದ್ದವು. ಇದೀಗ ಅವುಗಳ ಸಂಖ್ಯೆ 107ಕ್ಕೆ ಹೆಚ್ಚಿದೆ. ಇನ್ನೂ 3 ಜನವಸತಿಗಳನ್ನು ಕಂದಾಯ ಗ್ರಾಮಗಳ ಸ್ಥಾನಮಾನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅನುಮೋದನೆ ದೊರೆತಲ್ಲಿ ಜನವಸತಿಗಳ ಸಂಖ್ಯೆ 110ಕ್ಕೆ ಏರಿಕೆಯಾಗಲಿದೆ.
‘ಹಿರೇಕೆರೆಹಳ್ಳಿಯ ಜಯಂತಿಗನರ, ಚಿಕ್ಕೋಬನಹಳ್ಳಿಯ ವಡ್ಡರಪೆಂಟೆ ಮತ್ತು ಹಿರೇಕೆರೆಹಳ್ಳಿಯ ಎ.ಕೆ. ಕಾಲೊನಿಗಳು ಕಂದಾಯ ಗ್ರಾಮವಾಗಿ ಅನುಮತಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹೊಸ ಕಂದಾಯ ಗ್ರಾಮಗಳಿಗೆ ಪ್ರತ್ಯೇಕವಾಗಿ ಪಹಣಿ, ಇ–ಸ್ವತ್ತು, ಗ್ರಾಮಠಾಣೆ ಸೌಲಭ್ಯ, ವಿದ್ಯುತ್, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿ ಎಲ್ಲ ಸೌಲಭ್ಯಗಳು ಸಿಗಲಿವೆ. ಅಲ್ಲಿನ ನಿವಾಸಿಗಳಿಗೆ ಹೆಚ್ಚಿನ ಚೈತನ್ಯ ನೀಡಲಿದೆ’ ಎಂದು ತಹಶೀಲ್ದಾರ್ ಟಿ. ಜಗದೀಶ್ ಹೇಳಿದರು.
‘ಹೊಸದಾಗಿ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿರುವ ಎಲ್ಲ ಜನವಸತಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿವಾಗಿ ತೀರಾ ಹಿಂದುಳಿದಿವೆ. ಇಲ್ಲಿನ ಸರ್ಕಾರಿ ಶಾಲೆಗಳು ಕೊಠಡಿ, ಶಿಕ್ಷಕರಂಥ ಮೂಲಸೌಕರ್ಯದಿಂದ ವಂಚಿತವಾಗಿವೆ. ಬಡಾವಣೆಗಳಲ್ಲಿ ಚರಂಡಿ, ವಿದ್ಯುತ್ ವ್ಯವಸ್ಥೆ, ರಸ್ತೆಗಳು ಇಲ್ಲ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇವುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ‘ಕಂದಾಯ ಗ್ರಾಮ’ ಘೋಷಣೆಗೆ ಹೆಚ್ಚಿನ ಅರ್ಥ ಕೊಡಲು ಮುಂದಾಗಬೇಕು’ ಎಂದು ಚಿಕ್ಕೋಬನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಡಿ.ಒ. ಕರಿಬಸಪ್ಪ ಮನವಿ ಮಾಡಿದರು.
‘ಚಿತ್ರದುರ್ಗ ಜಿಲ್ಲೆಯಲ್ಲಿ ಬ್ರಾಂಡ್ರಾವಿ ಹೆಚ್ಚು ಹಿಂದುಳಿದ ಪ್ರದೇಶವಾಗಿದೆ. ಈ ಪಂಚಾಯಿತಿಯ 2 ಜನ ವಸತಿಗಳು ಕಂದಾಯ ಗ್ರಾಮವಾಗಿ ಅನುಮೋದನೆಗೊಂಡಿವೆ. ಈ ಭಾಗದ ಅಭಿವೃದ್ಧಿಗೆ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಐ ತಾಲ್ಲೂಕು ಘಟಕದ ಸಂಚಾಲಕ ಡಿ. ಪೆನ್ನಯ್ಯ ಆಗ್ರಹಿಸಿದರು.
‘ಇಲ್ಲಿನ ಸರ್ಕಾರಿ ಶಾಲೆಗಳು ಕಾಯಂ ಶಿಕ್ಷಕರಿಲ್ಲದೇ ಸೊರಗುತ್ತಿವೆ. ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾಯಂ ಶಿಕ್ಷಕರ ನೇಮಕದ ಮೂಲಕ ಸದೃಢ ಗ್ರಾಮಗಳಾಗಿಸಲು ಸಹಕಾರಿಸಬೇಕು’ ಎಂದು ತಾಲ್ಲೂಕು ಕಸಾಪ ಮಾಜಿ ಖಜಾಂಚಿ ಎನ್. ಶ್ರೀರಾಮುಲು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.