ADVERTISEMENT

ಮೊಳಕಾಲ್ಮುರು: ಶವ ಸಂಸ್ಕಾರಕ್ಕೆ ಬಹುದೂರ ಸಾಗುವ ಸವಾಲು!

ಕೊಂಡ್ಲಹಳ್ಳಿ ಜಯಪ್ರಕಾಶ
Published 25 ಜುಲೈ 2025, 4:02 IST
Last Updated 25 ಜುಲೈ 2025, 4:02 IST
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ವೀರಶೈವ ಸಮಾಜದವರು ಸ್ವಂತ ಖರ್ಚಿನಲ್ಲಿ ಖರೀದಿಸಿರುವ ಮುಕ್ತಿವಾಹನ 
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ವೀರಶೈವ ಸಮಾಜದವರು ಸ್ವಂತ ಖರ್ಚಿನಲ್ಲಿ ಖರೀದಿಸಿರುವ ಮುಕ್ತಿವಾಹನ    

ಮೊಳಕಾಲ್ಮುರು: ‘ಅನೇಕ ಗ್ರಾಮಗಳಲ್ಲಿ ರುದ್ರಭೂಮಿಯು ಊರಿನಿಂದ ಸಾಕಷ್ಟು ದೂರವಿದ್ದು, ಶವ ಹೊರಲು ಜನ ಮುಂದೆ ಬಾರದ ಸ್ಥಿತಿ ಇದೆ. ಗ್ರಾಮ ಪಂಚಾಯಿತಿಗಳಲ್ಲಿ ಮುಕ್ತಿ ವಾಹನ ವ್ಯವಸ್ಥೆ ಕಲ್ಪಿಸುವ ಮೂಲಕ ಸರ್ಕಾರ ನೆರವಿಗೆ ಬರಬೇಕು’ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಗ್ರಾಮಗಳೂ ಬೆಳವಣಿಗೆ ಕಾಣುತ್ತಿವೆ. ಜಮೀನುಗಳು ನಿವೇಶನಗಳಾಗಿ ಅಲ್ಲಿ ಮನೆಗಳು ತಲೆ ಎತ್ತಿವೆ. ಅನೇಕ ಗ್ರಾಮಗಳ ಸುತ್ತಳತೆ 4 ಕಿ.ಮೀ.ವರೆಗೂ ವಿಸ್ತರಿಸಿದೆ. ಪರಿಣಾಮ ಗ್ರಾಮದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅಂತ್ಯಕ್ರಿಯೆಗಾಗಿ ರುದ್ರಭೂಮಿವರೆಗೆ ಹೊತ್ತುಕೊಂಡು ಹೋಗುವುದು ಸವಾಲಿನ ಕೆಲಸವಾಗುತ್ತಿದೆ.  

ತಾಲ್ಲೂಕಿನ ರಾಂಪುರ, ನಾಗಸಮುದ್ರ, ಕೋನಸಾಗರ, ಕೊಂಡ್ಲಹಳ್ಳಿ, ಬಿ.ಜಿ.ಕೆರೆ ಗ್ರಾಮಗಳು ಹೆಚ್ಚು ಅಭಿವೃದ್ಧಿ ಹೊಂದಿದ್ದು, ಇಲ್ಲಿನ ಪಂಚಾಯಿತಿಗಳು ‘ಎ’ ಗ್ರೇಡ್‌ನೊಂದಿಗೆ ಗುರುತಿಸಿಕೊಂಡಿವೆ. ಜನಸಂಖ್ಯೆ ತಲಾ 10,000ಕ್ಕೂ ಹೆಚ್ಚಿದೆ. ರಾಂಪುರ, ಕೊಂಡ್ಲಹಳ್ಳಿಯಲ್ಲಿ ಇನ್ನೂ ಹೆಚ್ಚಿದೆ. ಇಲ್ಲಿ ರುದ್ರಭೂಮಿಗಳು ದೂರವಿರುವ ಪರಿಣಾಮ ಕಿ.ಮೀ.ಗಟ್ಟಲೆ ಶವ ಹೊತ್ತು ನಡೆಯಬೇಕಿದೆ. ಅಷ್ಟೊಂದು ದೂರ ನಡೆಯಲು ಸಾಧ್ಯವಾಗುವುದಿಲ್ಲ ಎಂದೇ ಅನೇಕರು ಶವ ಹೊರಲು ಮುಂದೆ ಬರುತ್ತಿಲ್ಲ. ಇದರಿಂದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ADVERTISEMENT

‘ಬಿ.ಜಿ.ಕೆರೆ ಬಸವೇಶ್ವರ ಬಡಾವಣೆಯಲ್ಲಿ ಯಾರಾದರೂ ಮೃತರಾದಲ್ಲಿ 3 ಕಿ.ಮೀ. ದೂರದಲ್ಲಿರುವ ರಾವಲಕುಂಟೆ ಬಳಿಗೆ ಶವ ಹೊತ್ತೊಯ್ಯಬೇಕು. ಕೊಂಡ್ಲಹಳ್ಳಿಯ  ಹೊಸಗೊಲ್ಲರಹಟ್ಟಿ, ಬಿಳೇಬಂಡೆ, ಎಸ್‌ಸಿ ಕಾಲೊನಿಯಿಂದ ರುದ್ರಭೂಮಿ 3 ಕಿ.ಮೀ. ದೂರವಿದೆ. ಕೆಲವರು ಆಟೊಗಳಲ್ಲಿ ಸಾಗಿಸಿ ಸಂಸ್ಕಾರ ಮಾಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳ್ಯಾರೂ ಶವ ಸಾಗಿಸಲು ತಮ್ಮ ವಾಹನಗಳನ್ನು ನೀಡುವುದಿಲ್ಲ. ಇದರಿಂದ ಶೋಕದ ಮನೆಯಲ್ಲಿ ನೋವು ಹೆಚ್ಚುವಂತಾಗಿದೆ. ಬಡವರ ಕಷ್ಟ ಹೇಳತೀರದಾಗಿದೆ’ ಎಂದು ಗ್ರಾಮಸ್ಥ ಮಂಜುನಾಥ್‌ ಹೇಳಿದರು.

‘ತಾಲ್ಲೂಕಿನ ಅತೀ ದೊಡ್ಡ ಗ್ರಾಮವಾದ ರಾಂಪುರದಲ್ಲಿ ಇದೇ ಸಮಸ್ಯೆ ಇದೆ. ಸಮಸ್ಯೆ ಅರಿತ ವೀರಶೈವ ಸಮಾಜ ಸ್ವಂತಕ್ಕೆ ಮುಕ್ತಿ ವಾಹನ ವ್ಯವಸ್ಥೆ ಮಾಡಿಕೊಂಡಿದೆ. ಬೇರೆ ಜಾತಿಯವರಿಗೆ ಸಮಸ್ಯೆ ಮುಂದುವರಿದಿದೆ. ಹಾಗಾಗಿ ಮುಕ್ತಿವಾಹನ ವ್ಯವಸ್ಥೆ ಮಾಡಿದಲ್ಲಿ ಅನುಕೂಲ’ ಎಂದು ಒತ್ತಾಯಿಸುತ್ತಾರೆ.

ಮೊದಲ ಹಂತದಲ್ಲಿ ‘ಎ’ ಗ್ರೇಡ್‌ ಪಂಚಾಯಿತಿಗಳಲ್ಲಿ ಲಭ್ಯವಿರುವ ಅನುದಾನ ಬಳಕೆ ಮಾಡಿಕೊಳ್ಳಬೇಕು. ವಾಹನಕ್ಕೆ ಶುಲ್ಕ ನಿಗದಿ ಮಾಡಿದಲ್ಲಿ ಅಗತ್ಯವಿರುವವರು ವಾಹನ ಪಡೆಯುತ್ತಾರೆ. ಇದರ ಸಾಧಕ– ಬಾಧಕ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ಗ್ರಾಮ ಪಂಚಾಯಿತಿಯಲ್ಲಿ ಮುಕ್ತಿವಾಹನದ ವ್ಯವಸ್ಥೆ ಮಾಡಿದಲ್ಲಿ ತುಂಬಾ ಅನುಕೂಲವಾಗುತ್ತದೆ. ಸಣ್ಣ ಸಮುದಾಯಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನ ಆಗಲಿದೆ
ತಿಪ್ಪೇಶ್‌ ಗ್ರಾ.ಪಂ. ಸದಸ್ಯ ರಾಂಪುರ
ಅಂತ್ಯಕ್ರಿಯೆಗಾಗಿ ಬಹುದೂರ ನಡೆಯಬೇಕು ಎಂಬ ಕಾರಣಕ್ಕೆ ಬಹುತೇಕ ಸಂದರ್ಭಗಳಲ್ಲಿ ಜನ ಸಂಸ್ಕಾರಕ್ಕೂ ಹೋಗುವುದಿಲ್ಲ. ಮುಕ್ತಿ ವಾಹನ ವ್ಯವಸ್ಥೆ ಮಾಡಿದಲ್ಲಿ ತುಂಬಾ ಅನುಕೂಲವಾಗಲಿದೆ
ಎಚ್.ಟಿ. ನಾಗರೆಡ್ಡಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮೊಳಕಾಲ್ಮುರು

ತೊಂದರೆ ಗಮನಕ್ಕೆ ಬಂದಿದೆ

15ನೇ ಹಣಕಾಸು ಯೋಜನೆಯಲ್ಲಿ ಈಗ ಮುಕ್ತಿವಾಹನ ಖರೀದಿಗೆ ಅವಕಾಶವಿಲ್ಲ. ಆದರೆ ಶಾಸಕರ ಶಿಫಾರಸ್ಸು ಪತ್ರ ಅಥವಾ ಜಿಲ್ಲಾ ಪಂಚಾಯಿತಿ ಸಿಇಒ ಅನುಮತಿ ಮೇರೆಗೆ ವಾಹನ ಖರೀದಿಸಬಹುದು. ಅನೇಕ ಕಡೆ ರುದ್ರಭೂಮಿ ದೂರ ಇರುವುದರಿಂದ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ಸ್ಥಳೀಯ ಸಂಸ್ಥೆ ಮುತುವರ್ಜಿ ವಹಿಸಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಹನುಮಂತಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.