ADVERTISEMENT

ಮಳೆ ಅಭಾವ ರೈತರಲ್ಲಿ ಆತಂಕ

ತಿಮ್ಮಯ್ಯ .ಜೆ ಪರಶುರಾಂಪುರ
Published 23 ಜೂನ್ 2019, 16:39 IST
Last Updated 23 ಜೂನ್ 2019, 16:39 IST
ಬಿತ್ತನೆಗೆ ಹೊಲ ಹದ ಮಾಡುತ್ತಿರುವ ರೈತ
ಬಿತ್ತನೆಗೆ ಹೊಲ ಹದ ಮಾಡುತ್ತಿರುವ ರೈತ   

ಪರಶುರಾಂಪುರ: ಮುಂಗಾರು ಮಳೆ ಅಭಾವದಿಂದ ಜೂನ್ ತಿಂಗಳು ಮುಗಿಯುತ್ತಿದ್ದರು ಬಿತ್ತನೆಯಾಗದೆ ಈ ಬಾರಿ ಇಳುವರಿಯ ಜತೆಗೆ ಮಳೆಯೂ ಕಡಿಮೆಯಾಗುವ ಆತಂಕದಲ್ಲಿದ್ದಾನೆ ಅನ್ನದಾತ.

ಪ್ರತಿ ವರ್ಷ ಮುಂಗಾರು ಮಳೆ ಮೇ ತಿಂಗಳಲ್ಲಿ ಬಿದ್ದು ರೈತರು ತಮ್ಮ ಜಮೀನುಗಳನ್ನು ಬಿತ್ತನೆ ಮಾಡಲು ಹದ ಮಾಡಿಕೊಂಡು ಜೂನ್ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡುವುದು ವಾಡಿಕೆ.

ಆದರೆ ಇದುವರೆಗೂ ರೈತರು ಬಿತ್ತನೆ ಬೀಜ ಹಾಗೂ ರಸಗೋಬ್ಬರ ಖರೀದಿಯಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಸತತ ಬರಗಾಲ ಪೀಡಿತ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿರುವ ಚಳ್ಳಕೆರೆ ತಾಲ್ಲೂಕು ಪ್ರತಿ ವರ್ಷ ಮಳೆಯ ಅಭಾವದಿಂದ ತತ್ತರಿಸಿ ಹೋಗಿದ್ದರೂ ಯಾವುದೇ ವಿಶೇಷ ಪ್ಯಾಕೆಜ್‌ನ್ನು ಸರ್ಕಾರ ಘೋಷಣೆ ಮಾಡುತ್ತಿಲ್ಲ ಎಂಬುದು ಈ ಬಾಗದ ರೈತರ ಅರೋಪ.

ADVERTISEMENT

ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಎಣ್ಣೆನಗರಿ ಎಂದೇ ಪ್ರಸಿದ್ಧಿ. ಇಲ್ಲಿ ಶೇಂಗಾ ಬೆಳೆಯನ್ನು ಬೆಳೆಯುವ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಮುಂಗಾರು ಮಳೆಯ ಕೊರೆತೆಯಿಂದ ಈ ಬಾರಿ ಅದಕ್ಕೂ ಗರ ಬಡಿದಂತಾಗಿದೆ ಎನ್ನುತ್ತಾರೆ ಈ ಭಾಗದ ರೈತರು.

ಕೃಷಿ ಇಲಾಖೆಯಿಂದ ಈ ಬಾರಿ ರೈತರಿಗೆ ಅನುಕೂಲವಾಗಲೆಂದು ಪರಶುರಾಂಪುರ ಹೋಬಳಿಯ 10 ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ದಿನಕ್ಕೆ 2 ಪಂಚಾಯಿತಿಯಂತೆ ವಿಂಗಡಿಸಿ ಶೇಂಗಾ ಬೀಜ ವಿತರಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರೋತ್ಸಾಹಧನ ಸೇರಿದಂತೆ 30 ಕೆಜಿಗೆ ₹1,380 ಹಾಗೂ ಸಾಮಾನ್ಯ ವರ್ಗದವರಿಗೆ ₹1,590ರಂತೆ ವಿತರಣೆ ಮಾಡುತ್ತಿದ್ದು, ಸೋಮವಾರದಿಂದ ಶನಿವಾರದ ವರೆಗೂ 600 ಕ್ವಿಂಟಾಲ್ ಶೇಂಗಾ ಬೀಜ 5 ಕ್ವಿಂಟಾಲ್ ತೋಗರಿ ಬೀಜ ಹಾಗೂ ಅಲ್ಪ, ಸ್ವಲ್ಪ ಹೆಸರುಕಾಳು ಮತ್ತು ಅಲಸಂದಿ ಬೀಜಗಳು ರೈತ ಸಂಪರ್ಕ ಕೇಂದ್ರದಿಂದ ಮಾರಾಟವಾಗಿವೆ’ ಎನ್ನುತ್ತಾರೆ ಕೃಷಿ ಅಧಿಕಾರಿ ಗಿರೀಶ್.

*
ಈ ಬಾರಿ ಇನ್ನೂ ಮಳೆ ಬೀಳದ ಕಾರಣ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿಲ್ಲ. ಅಲ್ಲಲ್ಲಿ ಬಿದ್ದ ಅಲ್ಪ ಮಳೆಗೆ ಕೇವಲ 10 ಹೆಕ್ಟೇರ್‌ಗಳಷ್ಟು ಮಾತ್ರ ಬಿತ್ತನೆಯಾಗಿದೆ.
-ಗಿರೀಶ್, ಕೃಷಿ ಅಧಿಕಾರಿ

*
ಮುಂಗಾರು ಮಳೆಯ ಅಭಾವದಿಂದ ಈ ಬಾರಿ ಜೂನ್ ತಿಂಗಳು ಮುಗಿಯುತ್ತಿದ್ದರೂ ರೈತರು ನೇಗಿಲು ಹಿಡಿದು ಹೊಲ ಮಾಗಿ ಉಳುಮೆ ಮಾಡಿಲ್ಲ.
-ರಾಮಣ್ಣ, ರೈತ, ವೃಂದಾವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.