
ಚಿತ್ರದುರ್ಗ: ‘ಸಮಾಜ ಹಾಗೂ ದೇಶದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅಪಾರ ಕಳಕಳಿ ಹೊಂದಿದ್ದರು. ಏನೇ ಆದರೂ ಸಹ ದೇಶದ ಮೊದಲು ಎನ್ನುತ್ತಿದ್ದರು’ ಎಂದು ಸಂಸದ ಗೋವಿಂದ ಕಾರಜೋಳ ಸ್ಮರಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ‘ಅಟಲ್ ವಿರಾಸತ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ಅಧಿಕಾರಕ್ಕಾಗಿ ಎಂದಿಗೂ ಅಡ್ಡದಾರಿ ತುಳಿಯಲಿಲ್ಲ. ನ್ಯಾಯಯುತ ಹಾದಿಯಲ್ಲಿ ಸಾಗಿ ಅಧಿಕಾರ ಹಿಡಿದು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಮಹತ್ತ ಕೊಡುಗೆ ನೀಡಿದರು’ ಎಂದು ತಿಳಿಸಿದರು.
‘ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಅಧಿಕಾರದ ಅವಧಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸಿದರು. ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಕ್ರಾಂತಿಯನ್ನೇ ಮಾಡಿದರು’ ಎಂದರು.
‘ಅತ್ಯಂತ ಶಿಸ್ತಿನಿಂದ ಪಕ್ಷ ಕಟ್ಟಿದ ಫಲವಾಗಿ ಇಂದು ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಇದು ಹೀಗೆ ಮುಂದುವರಿಯಬೇಕು. ಆಗ ಮಾತ್ರ ಅವರ ಶ್ರಮವನ್ನು ಗೌರವಿಸಿದಂತಾಗುತ್ತದೆ’ ಎಂದು ತಿಳಿಸಿದರು.
‘ವಾಜಪೇಯಿ ಕಠಿಣ ತತ್ವಗಳ ಜತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡಿದ ನಾಯಕ. ರಾಜಕಾರಣದಲ್ಲಿ ವಿರೋಧವಿದ್ದರೂ ದ್ವೇಷ ಇರಬಾರದು ಎಂಬ ನಂಬಿಕೆ ಹೊಂದಿದ್ದರು. ಪ್ರಾಮಾಣಿಕತೆ ಮತ್ತು ಶಿಸ್ತು ಜೀವನದ ಆಧಾರ ಎಂಬುದನ್ನು ತಾವು ಪಾಲಿಸುವ ಮೂಲಕ ಎಲ್ಲರಿಗೂ ತಿಳಿಸಿದರು’ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
‘ವಾಜಪೇಯಿ ಕೇವಲ ರಾಜಕಾರಣಿಯಲ್ಲ, ಒಬ್ಬ ಯುಗಪುರುಷ. ಅವರ ಜೀವನ ಮತ್ತು ಸಂದೇಶಗಳು ಇಂದಿಗೂ ಯುವಪೀಳಿಗೆಗೆ ಮಾರ್ಗದರ್ಶಕವಾಗಿವೆ. ಭಾರತವನ್ನು ಬಲಿಷ್ಠ, ಶಾಂತಿಪೂರ್ಣ ಮತ್ತು ಏಕತೆಯ ರಾಷ್ಟ್ರವನ್ನಾಗಿಸಲು ಅವರ ಕೊಡುಗೆ ಅನನ್ಯವಾಗಿದೆ’ ಎಂದು ತಿಳಿಸಿದರು.
‘ಅಟಲ್ ಜೀ ರವರು ಶ್ಯಾಮಪ್ರಸಾದ್ ಮುಖರ್ಜಿ ಅವರ ಪ್ರಭಾವದಲ್ಲಿ ರಾಜಕೀಯ ಪ್ರವೇಶ ಮಾಡಿದರು. ಪಕ್ಷವನ್ನು ರಾಷ್ಟ್ರೀಯ ಮಟ್ಟಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದಶಕಗಳ ಕಾಲ ಲೋಕಸಭೆ-ರಾಜ್ಯಸಭೆಗಳಲ್ಲಿ ಪ್ರಭಾವಿ ಧ್ವನಿಯಾಗಿದ್ದರು’ ಎಂದು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸ್ಮರಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.