ಹಿರಿಯೂರು: ‘ಬಯಲುಸೀಮೆಯ ಪ್ರಮುಖ ಕೇಂದ್ರವಾಗಿರುವ ಹಿರಿಯೂರಿಗೂ ಮೈಸೂರಿನ ಒಡೆಯರ್ ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ’ ಎಂದು ಮೈಸೂರು –ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
‘ಇಂದಿಗೂ ಈ ಭಾಗದ ಜನರು ಹನಿ ನೀರಿಗಾಗಿ ಕಷ್ಟ ಅನುಭವಿಸುತ್ತಿದ್ದಾರೆ. ಕೆರೆಗಳು ಭರ್ತಿಯಾದರೆ ಮಾತ್ರ ರೈತರು ಉತ್ತಮ ಫಸಲು ಬೆಳೆಯಲು ಸಾಧ್ಯ. ನಾಲ್ವಡಿ ಕೃಷ್ಣರಾಜ ಒಡೆಯರು ವಾಣಿವಿಲಾಸ ಸನ್ನಿಧಾನ ಹೆಸರಿನಲ್ಲಿ ನಿರ್ಮಿಸಿರುವ ಈ ಅಣೆಕಟ್ಟು ಪ್ರತಿವರ್ಷ ತುಂಬುವಂತಾಗಲಿ. ರೈತರಿಗೆ ವರ್ಷಪೂರ್ತಿ ನೀರು ಸಿಗುವಂತಾಗಲಿ. ಜಲಾಶಯಕ್ಕೆ ಎರಡನೇ ಬಾರಿಗೆ ಬಾಗಿನ ಅರ್ಪಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ’ ಎಂದು ಯದುವೀರ್ ಒಡೆಯರ್ ತಿಳಿಸಿದರು.
ರಾಜಕೀಯ ಬೇಡ: ‘ಜ.23ರಂದು ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಜಲಾಶಯ ನಿರ್ಮಾಣಕ್ಕೆ ಕಾರಣೀಭೂತರಾದ ಒಡೆಯರ್ ವಂಶಸ್ಥರಿಗೆ ಆಹ್ವಾನ ನೀಡಿಲ್ಲ ಎಂದು ಪತ್ರಕರ್ತರು ಕೇಳಿದಾಗ, ‘ಅಧಿಕಾರ ಇದ್ದಾಗ ಯಾವ್ಯಾವ ಪ್ರಕ್ರಿಯೆ, ಪದ್ಧತಿ ಇರುತ್ತದೋ ಅದನ್ನು ಅನುಸರಿಸುತ್ತಾರೆ. ಹಿಂದೆಯೂ ನಮ್ಮನ್ನು ಆಹ್ವಾನಿಸಿದ್ದು ಸ್ಥಳೀಯ ರೈತರೇ ಹೊರತು, ಅಧಿಕಾರಸ್ಥರಲ್ಲ. ಅಧಿಕಾರದಲ್ಲಿ ಇರುವವರು ಬಾಗಿನ ಅರ್ಪಿಸುವುದು ಸಹಜ. ಇದರಲ್ಲಿ ರಾಜಕೀಯ ಮಾಡಬಾರದು’ ಎಂದರು.
ಬಿಜೆಪಿಯ ಬಣ ರಾಜಕೀಯದ ಬಗ್ಗೆ ಉತ್ತರಿಸಿದ ಒಡೆಯರ್, ‘ರಾಜಕೀಯ ನನಗೆ ಹೊಸದು. ಪಕ್ಷದ ಚಟುವಟಿಕೆಗಳನ್ನು ಹೈಕಮಾಂಡ್‌ನವರು ಗಮನಿಸುತ್ತಿದ್ದು, ಅವರೇ ಸಂಘರ್ಷವನ್ನು ಬಗೆಹರಿಸುತ್ತಾರೆ’ ಎಂದರು.
‘ಅಧಿಕಾರ ಎಲ್ಲರಿಗೂ ಬೇಕು. ಆದರೆ, ಕುರ್ಚಿಗಳು ಕಡಿಮೆ ಇವೆ. ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದಾಗ ಕಿತ್ತಾಟ ದೊಡ್ಡದಾಗಿ ಕಾಣುತ್ತದೆ. ಕಾಂಗ್ರೆಸ್ ಪಕ್ಷದಲ್ಲೂ ಕುರ್ಚಿ ಕಿತ್ತಾಟವಿದೆ. ಯಾರಿಗೆ ಸಾಮರ್ಥ್ಯ, ಯೋಗ್ಯತೆ, ಅದೃಷ್ಟ ಇರುತ್ತದೋ ಅಂತಹವರು ಕುರ್ಚಿಯಲ್ಲಿ ಕೂರುತ್ತಾರೆ. ಅಧಿಕಾರವನ್ನು ಯಾರ ಕೈಗೆ ಕೊಡಬೇಕೆಂದು ಮತದಾರರು ತೀರ್ಮಾನಿಸುತ್ತಾರೆ’ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
ಬಾಗಿನ ಅರ್ಪಣೆಗೂ ಮೊದಲು ಹಿರಿಯೂರು ನಗರಕ್ಕೆ ಆಗಮಿಸಿದ ಯದುವೀರ್ ಅವರನ್ನು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬರಮಾಡಿಕೊಂಡರು. ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಮೈಸೂರಿನ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಭಾವಚಿತ್ರಕ್ಕೆ ಒಡೆಯರ್ ಪುಷ್ಪ ಅರ್ಪಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ಅಭಿನಂದನ್, ಎ.ಮುರಳಿ, ಎಂ.ಎಸ್. ರಾಘವೇಂದ್ರ, ಎ.ರಾಘವೇಂದ್ರ, ಎಂ.ಜಯಣ್ಣ, ಡಿ.ಯಶೋಧರ, ಹನುಮಂತರಾಯಪ್ಪ, ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ಕೆ. ಶಂಕರಮೂರ್ತಿ, ರೈತಸಂಘದ ಕೆ.ಟಿ.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ರಂಗಸ್ವಾಮಿ, ಅರಳೀಕೆರೆ ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.