ADVERTISEMENT

ಪತಿ ಕೊಲೆ: ಪತ್ನಿ, ಪ್ರಿಯಕರ ಬಂಧನ

ಅಕ್ರಮ ಸಂಬಂಧಕ್ಕೆ ಅಡ್ಡಿ, ಮದ್ಯ ಕುಡಿಸಿ ಕೃಷಿ ಹೊಂಡಕ್ಕೆ ತಳ್ಳಿದ ಸ್ನೇಹಿತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 13:51 IST
Last Updated 21 ಜೂನ್ 2021, 13:51 IST
ಬಸವರಾಜ
ಬಸವರಾಜ   

ಚಿತ್ರದುರ್ಗ: ಪ್ರಿಯತಮೆಯ ಪತಿಗೆ ಮದ್ಯ ಕುಡಿಸಿ ಕೃಷಿ ಹೊಂಡಕ್ಕೆ ತಳ್ಳಿ ಕೊಲೆ ಮಾಡಿದ ಸ್ನೇಹಿತನೊಬ್ಬ ಕೃತ್ಯ ನಡೆದ ಮೂರೇ ದಿನಗಳಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ಪತ್ನಿ ಸಹ ಜೈಲು ಸೇರಿದ್ದಾಳೆ.

ಚಿತ್ರದುರ್ಗ ತಾಲ್ಲೂಕಿನ ಹಳವುದರ ಗ್ರಾಮದ ಮುರುಗೇಶ್ (38) ಕೊಲೆಯಾದ ವ್ಯಕ್ತಿ. ಇತನ ಪತ್ನಿ ನಾಗಮ್ಮ (32) ಹಾಗೂ ಇವಳ ಪ್ರಿಯಕರ ಅರಭಗಟ್ಟ ಗ್ರಾಮದ ಬಸವರಾಜ ಬಂಧಿತರು. ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ನೀರತಡಿ ಗ್ರಾಮದ ನಾಗಮ್ಮ ಹಾಗೂ ಮುರುಗೇಶ ದಂಪತಿ 11 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಹತ್ತು ವರ್ಷದ ಪುತ್ರ ಇದ್ದಾನೆ. ಪತಿ–ಪತ್ನಿ ಇಬ್ಬರೂ ಅನೋನ್ಯವಾಗಿದ್ದರು. ಫೆಬ್ರುವರಿ ತಿಂಗಳಲ್ಲಿ ಬಸವರಾಜ ಪರಿಚಯವಾದ ಬಳಿಕ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪತಿ ನಿತ್ಯ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದ ಎಂದು ನಾಗಮ್ಮ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ADVERTISEMENT

ಮುರುಗೇಶ ಹಾಗೂ ಬಸವರಾಜ ಪರಿಚಿತರು. ಇಬ್ಬರ ಜಮೀನು ಸಮೀಪದಲ್ಲೇ ಇವೆ. ಟ್ರ್ಯಾಕ್ಟರ್ ಹೊಂದಿರುವ ಬಸವರಾಜ ಈಚೆಗೆ ಮುರುಗೇಶನ ಜಮೀನು ಉಳಿಮೆ ಮಾಡಿಕೊಟ್ಟಿದ್ದನು. ಇದರ ಹಣ ಪಾವತಿಸುವುದು ಬಾಕಿ ಉಳಿದಿತ್ತು. ಆಗಾಗ ಮುರುಗೇಶನಿಗೆ ಸಾಲವನ್ನೂ ನೀಡುತ್ತಿದ್ದನು. ಸಾಲ ಮರಳಿ ಪಡೆಯುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದನು. ಈ ವೇಳೆ ನಾಗಮ್ಮ ಹಾಗೂ ಬಸವರಾಜ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಲ ಮರುಪಾವತಿ ಮಾಡುವಂತೆ ಮುರುಗೇಶಗೆ ಆರೋಪಿ ಒತ್ತಡ ಹೇರುತ್ತಿರಲಿಲ್ಲ. ಆಗಾಗ ಇಬ್ಬರು ಸೇರಿ ಮದ್ಯ ಸೇವಿಸಿ ಹರಟೆ ಹೊಡೆಯುತ್ತಿದ್ದರು. ಪತ್ನಿ ಹಾಗೂ ಸ್ನೇಹಿತನ ನಡುವಿನ ಅಕ್ರಮ ಸಂಬಂಧದ ಮಾಹಿತಿ ಮುರುಗೇಶಗೆ ತಿಳಿದು ದಂಪತಿಯ ನಡುವೇ ಗಲಾಟೆ ನಡೆಯುತ್ತದೆ. ಇದರಿಂದ ಮನನೊಂದ ನಾಗಮ್ಮ ಪತಿಯನ್ನು ಕೊಲೆ ಮಾಡುವಂತೆ ಪ್ರಿಯಕರನಿಗೆ ಪ್ರಚೋದನೆ ನೀಡಿದ್ದಳು.

‘ಜೂನ್ 18 ರಂದು ಮುರುಗೇಶಗೆ ಫೋನ್ ಮಾಡಿದ ಆರೋಪಿ ಮದ್ಯ ಸೇವಿಸಲು ಆಹ್ವಾನಿಸುತ್ತಾನೆ. ಅಂದು ರಾತ್ರಿ ಹೆಗ್ಗೆರೆ ರಸ್ತೆಗೆ ಹೊಂದಿಕೊಂಡ ಜಮೀನಿನಲ್ಲಿ ಇಬ್ಬರು ಕುಡಿಯುತ್ತಾರೆ. ಬಳಿಕ ಮುರುಗೇಶನನ್ನು ಆರೋಪಿ ಕೃಷಿ ಹೊಂಡಕ್ಕೆ ತಳ್ಳುತ್ತಾನೆ. ಆಳವಾದ ಹಾಗೂ ಪಾಚಿಕಟ್ಟಿದ ಹೊಂಡದಿಂದ ಮೇಲೆ ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.

‘ಮರುದಿನ ಕೃಷಿ ಹೊಂಡದಲ್ಲಿ ಪತ್ತೆಯಾದ ಶವವನ್ನು ಕುಟುಂಬದ ಸದಸ್ಯರು ಅಂತ್ಯಕ್ರಿಯೆ ಮಾಡಲು ಮುಂದಾಗುತ್ತಾರೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದೇ ಭಾವಿಸಿರುತ್ತಾರೆ. ಆದರೆ, ಮೃತ ವ್ಯಕ್ತಿಯ ಜೇಬಿನಲ್ಲಿ ಸಿಕ್ಕ ಚೀಟಿಯೊಂದು ಅನುಮಾನ ಮೂಡಿಸುತ್ತದೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮುರುಗೇಶ ಚೀಟಿ ಬರೆದು ಇಟ್ಟುಕೊಂಡಿದ್ದನು’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮುರುಗೇಶ ತಂದೆ ನೀಡಿದ ದೂರು ಆಧರಿಸಿ ಭರಮಸಾಗರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಎಸ್‌ಐ ಟಿ.ರಾಜು ಹಾಗೂ ಎಂ.ಟಿ.ಶ್ರೀನಿವಾಸ್‌ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅಸ್ವಾಭಾವಿಕ ಸಾವಿನಂತೆ ಬಿಂಬಿತ ಆಗಿದ್ದ ಪ್ರಕರಣದ ಹಿಂದಿನ ಸತ್ಯ ಬೆಳಕಿಗೆ ಬಂದಿದೆ. ಅರೋಪಿಗಳು ಏಪ್ರಿಲ್‌ ತಿಂಗಳಿಂದ ನಿರಂತರವಾಗಿ ಫೋನ್ ಸಂಭಾಷಣೆ ನಡೆಸಿದ್ದು ತನಿಖೆಯಿಂದ ಗೊತ್ತಾಗಿದೆ.

ಮೊದಲ ಯತ್ನ ವಿಫಲ

ನಾಗಮ್ಮ ಹಾಗೂ ಪ್ರಿಯಕರ ಬಸವರಾಜ ಸೇರಿ ಈ ಮೊದಲೇ ಮುರುಗೇಶ ಕೊಲೆಗೆ ಯತ್ನಿಸಿದ್ದರು. ಆ ಪ್ರಯತ್ನ ವಿಫಲವಾಗಿದ್ದ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಮೇ 27ರಂದು ರಾತ್ರಿ 8ಕ್ಕೆ ನಾಗಮ್ಮ ಹೊಟ್ಟೆನೋವಿನ ನೆಪ ಹೇಳಿ ಭರಮಸಾಗರ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಳು. ರಾತ್ರಿ 8.45ರ ಸುಮಾರಿನಲ್ಲಿ ಹೆಗ್ಗೆರೆ ಗ್ರಾಮದ ಮಟ್ಟಿಯ ಬಳಿ ದ್ವಿಚಕ್ರ ವಾಹನ ನಿಲುಗಡೆ ಮಾಡುವಂತೆ ಸೂಚಿಸಿದ್ದಳು. ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಬೈಕ್ ಇಳಿದು ಪೊದೆಯ ಹಿಂದೆ ಕುಳಿತಿದ್ದಳು. ಮೊದಲೇ ರೂಪಿಸಿದ ಸಂಚಿನಂತೆ ಬಸವರಾಜ ಅಲ್ಲಿರಬೇಕಿತ್ತು. ಆದರೆ, ನಿಗದಿತ ಸ್ಥಳಕ್ಕೆ ಬರುವುದು ವಿಳಂಬವಾಗಿತ್ತು.

ಸಂಚು ವಿಫಲವಾದ ಬೇಸರದಲ್ಲಿ ನಾಗಮ್ಮ ಪತಿಯ ಬೈಕಿನ ಬಳಿಗೆ ಹೋಗಿದ್ದಾಳೆ. ಈ ವೇಳೆ ಮಾಸ್ಕ್ ಧರಿಸಿ ಬಂದ ಬಸವರಾಜ, ಮುರುಗೇಶನ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ನಾಗಮ್ಮ ಕೂಡ ಗಾಯಗೊಂಡಿದ್ದಳು. ಇದೇ ವೇಳೆಗೆ ಮತ್ತೊಂದು ವಾಹನ ಸ್ಥಳಕ್ಕೆ ಬಂದಿದ್ದರಿಂದ ಅರೋಪಿ ಪರಾರಿ ಆಗಿದ್ದನು. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

***

ಕೊಲೆಯಾದ ವ್ಯಕ್ಯಿಯ ಬಳಿ ಪತ್ತೆಯಾದ ಪತ್ರ ಕೊಲೆಯ ಸುಳಿವು ನೀಡಿತು. ಅಕ್ರಮ ಸಂಬಂಧದ ಬಗ್ಗೆ ಖಚಿತವಾಯಿತು. ಮುರುಗೇಶ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು.

ಜಿ.ರಾಧಿಕಾ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.