ADVERTISEMENT

ಮುರಿಗೆಯ ಶಾಂತವೀರ ಶ್ರೀ ಎಂದೆಂದಿಗೂ ಪ್ರಸ್ತುತ

ಮುರುಘಾ ಮಠದಲ್ಲಿ ವಚನಾಭಿಷೇಕ – ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:16 IST
Last Updated 26 ಜುಲೈ 2025, 5:16 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ವಚನಾಭಿಷೇಕ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್‌ ಉದ್ಘಾಟಿಸಿದರು
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ವಚನಾಭಿಷೇಕ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್‌ ಉದ್ಘಾಟಿಸಿದರು   

ಚಿತ್ರದುರ್ಗ: ‘ದನಗಾಹಿ ಹುಡುಗನೊಬ್ಬ ದುರ್ಗದ ದೊರೆಯಾಗುವುದಕ್ಕೆ ಮುರಿಗೆಯ ಶಾಂತವೀರರ ಆಶೀರ್ವಾದದ ಬಲವೇ ಕಾರಣ. ಮುಂದೆ ಆ ಹುಡುಗ ದುರ್ಗದ ದೊರೆ ಭರಮಣ್ಣನಾಯಕನಾಗಿ ಆಶೀರ್ವದಿಸಿದ ಗುರುಗಳಿಗೆ ಮಠಕಟ್ಟಿದ ಪ್ರಸಂಗಗಳು ಸ್ಮರಣೀಯ’ ಎಂದು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್‌ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಶುಕ್ರವಾರ ಶ್ರಾವಣಮಾಸದ ಅಂಗವಾಗಿ ಆಯೋಜಿಸಿದ್ದ ವಚನಾಭಿಷೇಕ ಹಾಗೂ ಮುರಿಗಾ ಪರಂಪರೆಯಲ್ಲಿ ಸಾಗಿ ಬಂದ ಗುರುಪರಂಪರೆಯ ಸ್ವಾಮೀಜಿಗಳ ಜೀವನದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚಿತ್ರದುರ್ಗಕ್ಕೆ ಕಳಶಪ್ರಾಯವಾದ ಇಲ್ಲಿನ ಚಿನ್ಮೂಲಾದ್ರಿ ಮುರುಘರಾಜೇಂದ್ರ ಮಠವು ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಯಿಂದ ಪ್ರಾರಂಭವಾಗಿ ಇಂದು ಹೆಮ್ಮರವಾಗಿ ಬೆಳೆದಿದೆ’ ಎಂದರು.

‘ಆಧ್ಯಾತ್ಮ, ಸಾಹಿತ್ಯಿಕ ಸಿದ್ಧಿಯಿಂದ ಶಿಷ್ಯರ ಸಮೂಹ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಐತಿಹಾಸಿಕ ಕಾನಾಮಡುಗುವಿನ ಶರಣಾರ್ಯರಿಗೆ ಮುರುಘಾ ಶಾಂತವೀರರು ಜಂಗಮದೀಕ್ಷೆ ನೀಡಿದ್ದು ಉಲ್ಲೇಖನೀಯ. ಸಮಾಜಮುಖಿ ಕಾರ್ಯಗಳ ಮೂಲಕ ಇಂದಿಗೂ ಎಂದೆಂದಿಗೂ ಅವರು ಪ್ರಸ್ತುತರು. ಸ್ಮರಣೀಯ ಕೆಲಸ ಅವರಿಂದ ಸಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮುರುಘಾ ಪರಂಪರೆಯ ಸ್ವಾಮೀಜಿಗಳಲ್ಲಿ ಮುರಿಗೆಯ ಶಾಂತವೀರರ ಐತಿಹ್ಯದ ಬಗ್ಗೆ ಲಾವಣಿ, ತಾರಾವಳಿ, ಜನಪದರು ಕಟ್ಟಿರುವ ಹಾಡುಗಳಲ್ಲಿ ಹಾಗೆಯೇ ರಾಜಾಬಿಚ್ಚುಗತ್ತಿ ಭರಮಣ್ಣ ನಾಯಕರ ಇತಿಹಾಸದ ಜತೆಗೆ ಶ್ರೀಗಳ ಚಾರಿತ್ರಿಕ ಘಟನೆಗಳು ಬರುತ್ತವೆ. ಶಾಂತವೀರ ಮಹಾಕರ್ತೃಗಳು ಗುರು–ವಿರಕ್ತ ಪರಂಪರೆಯಾಚೆಗಿನ ಭಕ್ತವರ್ಗ ಪರಂಪರೆಯನ್ನು ಕಟ್ಟಬಯಸಿ ಆ ಮೂಲಕ ಶ್ರೇಷ್ಠತೆಯನ್ನು ಮೆರೆದರು’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.

‘ನಮ್ಮಲ್ಲಿನ್ನೂ ಗುರು– ವಿರಕ್ತರೆನ್ನುವ ದ್ವಂದ್ವದ ತಾಕಲಾಟಗಳಿವೆ. ಅವರು ಶ್ರೇಷ್ಠ ಇವರು ಕನಿಷ್ಠ ಎನ್ನುತ್ತ ಮಹಾತ್ಮರ ವಿಚಾರ, ಅವರು ನಡೆದುಬಂದ ದಾರಿಯ ಅವಲೋಕನ ಮಾಡದೆ ಅವರನ್ನು ಕಳೆದುಕೊಳ್ಳುತ್ತಿದ್ದೆ ಎಂಬ ಆತಂಕದಲ್ಲಿದ್ದೇವೆ. ಬುದ್ಧ, ಅಂಬೇಡ್ಕರ್ ಅವರೊಟ್ಟಿಗೆ ಬಸವಣ್ಣನವರನ್ನು ನೋಡಬಹುದಾಗಿದೆ. ನಮ್ಮ ಅಂತರಂಗದಲ್ಲಿ ಯಾರಿಗೆ ಎಷ್ಟು ಮೌಲ್ಯ ಕೊಡಬೇಕೆನ್ನುವ ಆಲೋಚನೆ ಅಗತ್ಯ’ ಎಂದು ತಿಳಿಸಿದರು.

ರೈತ ಮುಖಂಡ ಪ್ರಕಾಶ್‌, ಮುರುಘಾಮಠದ ಸಾಧಕರಾದ ಮುರುಘೇಂದ್ರ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.