ADVERTISEMENT

ಚಿತ್ರದುರ್ಗ | 'ಮುರಿಗೆ ಶಾಂತವೀರ ಶ್ರೀಗಳ ಬರಹದ ಮೇಲೆ ಬೆಳಕು'

ಶರಣ ಸಂಸ್ಕೃತಿ ಉತ್ಸವ; ಮುರುಘಾ ಮಠದ ಕರ್ತೃ ಗುರುವಿನ ಸಾಹಿತ್ಯ ಕೃತಿಗಳ ಅವಲೋಕನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 6:11 IST
Last Updated 27 ಸೆಪ್ಟೆಂಬರ್ 2025, 6:11 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಅಂಗವಾಗಿ ಗುರುವಾರ ನಡೆದ ಮುರಿಗೆ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತ ವಿಚಾರ ಸಂಕಿರಣದಲ್ಲಿ ಹಂಪಿ ಕನ್ನಡ ವಿವಿ ಮಾನ್ಯತಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು
ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಅಂಗವಾಗಿ ಗುರುವಾರ ನಡೆದ ಮುರಿಗೆ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತ ವಿಚಾರ ಸಂಕಿರಣದಲ್ಲಿ ಹಂಪಿ ಕನ್ನಡ ವಿವಿ ಮಾನ್ಯತಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು   

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಮುರಿಗೆ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತು ಗುರುವಾರ ವಿಚಾರ ಸಂಕಿರಣ ನಡೆಯಿತು. ವಿವಿಧ ಕ್ಷೇತ್ರಗಳ ತಜ್ಞರು, ಸಂಶೋಧಕರು ವಿವಿಧ ಸಾಹಿತ್ಯ ಕೃತಿಗಳ ವಸ್ತು, ವಿಷಯವನ್ನು ಸಾಹಿತ್ಯ ಪ್ರೇಮಿಗಳ ಮುಂದೆ ಅವಲೋಕನ ಮಾಡಿದರು.

ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ಅವರು ‘ಮುರಿಗೆ ತಾರಾವಳಿ’ ಕುರಿತು ಮಾತನಾಡಿ, ‘ಮುರಿಗೆ ತಾರಾವಳಿ ಕೃತಿಯು ಚಾರಿತ್ರಿಕ, ಸಾಂಸ್ಕೃತಿಕ, ಐತಿಹಾಸಿಕ ಅಂಶಗಳ ಅಮೂಲಾಗ್ರ ಕೃತಿಯಾಗಿದೆ. ಚಿತ್ರದುರ್ಗ ಮುರುಘಾಮಠ ಮತ್ತು ಪಾಳೇಗಾರರ ಸಂಸ್ಥಾನಗಳ ಮೇಲೆ ವಿಶೇಷವಾದ ಬೆಳಕು ಚೆಲ್ಲುತ್ತದೆ. ಐತಿಹಾಸಿಕ ಅಂಶಗಳನ್ನು ಪರಿಷ್ಕರಿಸುವ ಈ ತಾರಾವಳಿ ಕೃತಿಯು ಅಪೂರ್ವವಾದದ್ದು. ಈ ಕೃತಿಯು ಐತಿಹಾಸಿಕ ಮಹತ್ವದ ಅಂಶಗಳನ್ನು, 17, 18ನೇ ಶತಮಾನದ ವಾಸ್ತವ ಚಿತ್ರಣವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

ಇತಿಹಾಸ ತಜ್ಞ ಬಿ.ರಾಜಶೇಖರಪ್ಪ ಅವರು ‘ಹಮ್ಮೀರ ಕಾವ್ಯ’ (ರಾಜೇಂದ್ರ ವಿಜಯ) ಕುರಿತು ಮಾತನಾಡಿ, ‘ಇದೊಂದು ಚಂಪೂ ಕೃತಿಯಾಗಿದ್ದು ಪಂಪ, ಪೊನ್ನ, ರನ್ನ, ಜನ್ನ ಕಾವ್ಯದ ಓದನ್ನು ಮತ್ತು ಶಬ್ದ ಸಾಮರ್ಥ್ಯವನ್ನು ಮುರಿಗೆ ಶಾಂತವೀರರಲ್ಲಿ ಕಾಣುತ್ತೇವೆ. ಈ ಕೃತಿಯು ಚಿತ್ರದುರ್ಗದ ಕೆಲವೊಂದು ಐತಿಹಾಸಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಚಾಮರಸನ ಪ್ರಭುಲಿಂಗಲೀಲೆಯು ಹಮ್ಮೀರ ಕಾವ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿರುವುದನ್ನು ವಿವರಿಸಿದ್ದಾರೆ’ ಎಂದರು.

‘ಶಾಂತವೀರರು ಪ್ರೌಢಭಾಷಾ ಸಂಸ್ಕೃತದ ಆಳವಾದ ಜ್ಞಾನವನ್ನು ತಿಳಿದಿದ್ದರು. ಇವರ ಈ ಕೃತಿಯಲ್ಲಿ ಹಲವು ಛಂದೋ ವೈವಿಧ್ಯತೆಗಳಾದ ಕಂದ, ವೃತ್ತಗಳಿವೆ. ದೇಸಿ ಛಂದೋಮಟ್ಟುಗಳನ್ನು ತಂದಿರುವುದನ್ನು ನೋಡಬಹುದು. ಸಂಗೀತಜ್ಞಾನವನ್ನು ಮುರಿಗೆ ಶಾಂತವೀರರು ಹೊಂದಿರುವುದಕ್ಕೆ ಈ ಕೃತಿಯಲ್ಲಿ ಬರುವ ರಾಗಗಳೇ ಸಾಕ್ಷಿಯಾಗಿವೆ’ ಎಂದರು.

ಹಸ್ತಪ್ರತಿ ತಜ್ಞ ಬಿ.ನಂಜುಂಡಸ್ವಾಮಿ ಅವರು ‘ಪ್ರಭುಲಿಂಗಕಂದ’ ಕುರಿತು ಮಾತನಾಡಿ, ‘ಕೃತಿಯಲ್ಲಿ ಇಷ್ಟಲಿಂಗವನ್ನು ಕುರಿತು ಮಹತ್ವಪೂರ್ಣವಾಗಿ ಚರ್ಚಿಸಿದ್ದಾರೆ. ಈ ಕೃತಿಗೆ ಎರಡು ಟೀಕುಗಳನ್ನು ಬರೆದಿದ್ದಾರೆ. ಬಹಳ ಮುಖ್ಯವಾಗಿ ಈ ಕೃತಿಯಲ್ಲಿ ಇಷ್ಟಲಿಂಗದ ಪೂಜೆಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಹಾಗೆಯೇ ಪೂಜೆಗೆ ಬಳಸುವ ಹಲವು ಪುಷ್ಪಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ’ ಎಂದರು.

ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಎಸ್.ಜೆ.ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಬಸವಕುಮಾರ ಸ್ವಾಮೀಜಿ, ಹೆಗ್ಗುಂದ ವನಕಲ್ಲು ಮಲ್ಲೇಶ್ವರ ಸಂಸ್ಥಾನಮಠದ ಬಸವ ರಮಾನಂದ ಸ್ವಾಮೀಜಿ, ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಇದ್ದರು.

ಮಧ್ಯಾಹ್ನ ನಡೆದ ವಿಚಾರ ಸಂಕಿರಣದಲ್ಲಿ ಹಸ್ತಪ್ರತಿ ತಜ್ಞರಾದ ಎಫ್.ಟಿ.ಹಳ್ಳಿಕೇರಿ ಅವರು ‘ವೈರಾಗ್ಯನಿಧಿ’ ಕೃತಿ ಕುರಿತು ಮಾತನಾಡಿ, ‘ಕರ್ನಾಟಕದ ಪ್ರಮುಖ ಸಂಸ್ಥಾನ ಮಠಗಳಲ್ಲಿ ಚಿತ್ರದುರ್ಗ ಮಠವು ಪ್ರಮುಖವಾದುದು. ಭಾಷೆ, ಸಾಹಿತ್ಯ ಸಮಾಜಧರ್ಮ ಸಂಸ್ಕೃತಿಗಳ ಘೋಷಣೆಯಲ್ಲಿ ಮಠದ ಕೊಡುಗೆ ಅನನ್ಯವಾಗಿದೆ. ಈ ಮಠದ ಗುರು ಪರಂಪರೆಯಲ್ಲಿ ಮೊದಲಿಗರು ಶಾಂತವೀರ ಮಹಾಸ್ವಾಮಿಗಳು. ಅವರ ಬದುಕಿನ ಅನುಭವಗಳನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಜಾನಪದ ತಜ್ಞ ಮೀರಾಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಸಿ.ಕೆ ಜಗದೀಶ್‌, ಹಸ್ತಪ್ರತಿ ತಜ್ಞರಾದ ವೀರೇಶ್ ಬಡಿಗೇರ, ಸಂಶೋಧಕಿ ಪಿ.ಯಶೋದಾ ರಾಜಶೇಖರಪ್ಪ ವಿಷಯ ಮಂಡಿಸಿದರು. ಉಮೇಶ್ ಪತ್ತಾರ್, ಎನ್‌.ಎಸ್‌.ಮಹಾಂತೇಶ್‌ ಇದ್ದರು.

ಕನ್ನಡ ವಿವಿ ಮಾನ್ಯತಾ ಕೇಂದ್ರ ಉದ್ಘಾಟನೆ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಮಾತನಾಡಿ ‘ಕನ್ನಡ ವಿ.ವಿ. ಪ್ರಾರಂಭವಾಗಿ 34 ವರ್ಷಗಳು ಕಳೆದಿವೆ. ಕನ್ನಡ ನಾಡು ನುಡಿಗಾಗಿ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ. ಸಂಶೋಧನಾ ಕ್ಷೇತ್ರವನ್ನು ವಿಸ್ತಾರ ಮಾಡುವುದಕ್ಕಾಗಿ ರಾಜ್ಯದ ಅನೇಕ ಕಡೆ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆಯನ್ನು ನೀಡುತ್ತಿದ್ದೇವೆ’ ಎಂದರು. ‘ಮುರುಘಾ ಮಠದಲ್ಲಿ ಸಾಕಷ್ಟು ಇತಿಹಾಸದ ಆಲೋಚನೆಗಳು ಇರುವುದರಿಂದ ಮಠಕ್ಕೆ ಸಂಶೋಧನಾ ಕೇಂದ್ರದ ಮಾನ್ಯತೆ ನೀಡಿದ್ದೇವೆ. ಇದು ಸಂಶೋಧನಾ ಆಸಕ್ತರಿಗೆ ಅನುಕೂಲವಾಗಲಿದೆ’ ಎಂದರು. ಹಂಪಿ ಕನ್ನಡ ವಿವಿ ಅಧ್ಯಯನಾಂಗ ನಿರ್ದೇಶಕ ಅಮರೇಶ್ ಯತಗಲ್ ಮಾತನಾಡಿ ‘ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಭಿನ್ನ ಸಂಶೋಧನೆಗಳು ನಡೆಯುತ್ತವೆ. ಜನ ಸಮುದಾಯ ಬುಡಕಟ್ಟು ಸಂಸ್ಕೃತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದೆ. ಪ್ರತಿ ವರ್ಷ 200 ರಿಂದ 250 ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಪಡೆಯುತ್ತಿದ್ದಾರೆ. ನಾಡಿನ 24 ಕಡೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.