ಚಿತ್ರದುರ್ಗ: ‘ಬಸವಾದಿ ಶರಣರು ನೀಡಿದ ಸಮ ಸಮಾಜದ ಪರಿಕಲ್ಪನೆ, ತತ್ವ ಸಿದ್ಧಾಂತ, ಅವರ ನಡೆನುಡಿ ಸಮಾಜಕ್ಕೆ ಆದರ್ಶವಾಗಬೇಕು. ಯುವಜನಾಂಗಕ್ಕೆ ಶರಣರ ತತ್ವಗಳು ಮಾರ್ಗದರ್ಶಿ ಸೂತ್ರಗಳಾಗಬೇಕು’ ಎಂದು ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇಲ್ಲಿ ಶನಿವಾರ ನಡೆದ ಮುರಿಗೆ ಶಾಂತವೀರ ಸ್ವಾಮೀಜಿ ಕೃತಿಗಳ ವಿಚಾರಗೋಷ್ಠಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮುರಿಗೆ ಶಾಂತವೀರ ಸ್ವಾಮೀಜಿ ಸಾಮಾಜಿಕ ಸೇವೆ ಜೊತೆಗೆ ಮಠದ ಬೆಳವಣಿಗೆಗೆ ಶ್ರಮಿಸಿದರು. ಅವರು ಕೇವಲ ಮಠಾಧೀಶರಾಗದೇ ಕವಿಗಳಾಗಿ ಹತ್ತಾರು ವೈವಿಧ್ಯಪೂರ್ಣವಾದ ಕೃತಿಗಳ ರಚನೆಗೆ ಕಾರಣೀಭೂತರಾದರು’ ಎಂದರು.
‘ವೀರಶೈವ ಲಿಂಗಾಯತ ಧರ್ಮದ ವರ್ತಮಾನದ ಬಿಕ್ಕಟ್ಟುಗಳನ್ನು ಮುರಿಗೆ ಶಾಂತವೀರರ ವಿಚಾರಧಾರೆ ಮತ್ತು ತತ್ವ–ಸಿದ್ಧಾಂತಗಳ ಹಿನ್ನೆಲೆಯಲ್ಲಿ ಬಗೆಹರಿಸಿಕೊಳ್ಳಲು ನಾವು ಚಿಂತಿಸಬೇಕಾಗಿದೆ. ಮುರಿಗೆ ಶಾಂತವೀರರು ಚರಿತ್ರೆಯನ್ನು ಯಾವ ಆಯಾಮಗಳಲ್ಲಿ ಅಧ್ಯಯನಕ್ಕೆ ಒಳಪಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಕೃತಿಗಳನ್ನು ಸಮಕಾಲೀನ ಕವಿಗಳ ಕೃತಿಗಳ ಮೂಲಕ ತೌಲನಿಕ ಅಧ್ಯಯನ ಮಾಡುವ ಮೂಲಕ ಸತ್ಯಾನ್ವೇಷಣೆಯ ಒಳನೋಟಗಳನ್ನು ಗ್ರಹಿಸಬಹುದು’ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನ ಅಧ್ಯಕ್ಷ ಬೈರಮಂಗಲ ರಾಮೇಗೌಡ ಹೇಳಿದರು.
‘ಮುರುಘಾಮಠವು ದಾಸೋಹ, ಶಿಕ್ಷಣ, ಧರ್ಮ ಪ್ರಸಾರ ಮತ್ತು ಧಾರ್ಮಿಕ ವಿಚಾರಗಳನ್ನು ನಾಡಿಗೆ ಸಾರುತ್ತಿದೆ. ಮುರಿಗೆ ಶಾಂತವೀರರು ಕನ್ನಡ ಮತ್ತು ಸಂಸ್ಕೃತಗಳಲ್ಲಿ ಅಪಾರ ಪಾಂಡಿತ್ಯ ಹೊಂದಿ ಕಾವ್ಯ ರಚಿಸಿದ್ದಾರೆ. ಸಂಗೀತದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದರು. ಕರ್ನಾಟಕದಲ್ಲಿ ವೀರಶೈವ ಧರ್ಮದ ಪುನರುತ್ಥಾನಕ್ಕೆ ಕಾರಣೀಭೂತರಾಗಿದ್ದಾರೆ’ ಎಂದು ಸಾಹಿತಿ ಸಿ.ವಿ.ಮಂಜುನಾಥ್ ತಿಳಿಸಿದರು.
‘ವೀರಶೈವ ಸಾಹಿತ್ಯ ಪ್ರಕಾರದಲ್ಲಿ ಮುರಿಗೆ ಶಾಂತವೀರರ ತಾರಾವಳಿ ಪ್ರಕಾರ ಬಳಕೆಯಾಗಿದೆ. ತಾರೆ ಮತ್ತು ಅವಳಿ ಎಂಬ ಎರಡು ಪದಗಳು ಸೇರಿ ತಾರಾವಳಿ ಎಂದಾಗಿದೆ. ತಾರಾವಳಿ ಎಂದರೆ ನಕ್ಷತ್ರಗಳ ಸಾಲು ಎಂದರ್ಥ. ಕೇವಲ 27 ಪದ್ಯಗಳಲ್ಲಿ ಪೂಜ್ಯವಸ್ತುವಿನ ಸಮಗ್ರ ವಿಚಾರವನ್ನು ಸಂಕ್ಷಿಪ್ತವಾಗಿ ಅಣಿಮುತ್ತುಗಳಂತಹ ಸುಶ್ರಾವ್ಯ ತಾಳಬದ್ಧ ಕಾವ್ಯವಾಣಿಯಲ್ಲಿ ರೂಪಿಸಲಾಗಿದೆ’ ಎಂದು ವಿದ್ವಾಂಸ ಸಿ.ನಾಗಭೂಷಣ ವಿವರಿಸಿದರು.
‘ಮುರಿಗೆ ಶಾಂತವೀರ ಸ್ವಾಮೀಜಿ ಸಂಸ್ಕೃತದಲ್ಲಿ ಬರೆದ ಷಡ್ವಕ್ತ್ರಸ್ತೋತ್ರ ಸ್ತೋತ್ರಕಾವ್ಯ ಲಭ್ಯವಿದೆ. ಇದು ಷಣ್ಮುಖನ ಸ್ತೋತ್ರವಾಗಿರದೆ, ಆತನ ಜನಕನಾದ ಪರಮೇಶ್ವರನ ಆರು ಮುಖಗಳನ್ನು ಕುರಿತು ಇದೆ’ ಎಂದು ಸಂಸ್ಕೃತ ವಿದ್ವಾಂಸ ಸಿ.ಶಿವಕುಮಾರ ಸ್ವಾಮಿ ಹೇಳಿದರು.
‘ಹಲವು ವಿದ್ವಾಂಸರು ವಿವೇಚಿಸಿದ್ದ ಮುರಿಗೆ ಪದದ ನಿಷ್ಪತ್ತಿಯನ್ನು ದೇವನೆಲೆಯಲ್ಲಿ ಗುರುತಿಸಿದ್ದನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಈ ವಿಚಾರ ಸಂಕಿರಣದ ವಿಶೇಷತೆಯಾಗಿದೆ. ಶಿವಪುತ್ರನಾದ ಷಣ್ಮುಖನಿಗೆ ಪರ್ಯಾಯವಾಗಿ ತಮಿಳಿನಲ್ಲಿರುವ ಮುರುಗನ್ ಎಂಬುದರಿಂದ ಮುರಿಗೆ ಶಬ್ಧ ನಿಷ್ಪನ್ನಗೊಂಡಿದೆ ಎಂಬ ಅಭಿಪ್ರಾಯಕ್ಕೆ ಮನ್ನಣೆ ಸಿಗದಿರುವುದು ಪ್ರಮುಖವಾದ ಶೋಧವಾಗಿದೆ’ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ ತಿಳಿಸಿದರು.
‘ಕರ್ನಾಟಕದ ಮಠಗಳಲ್ಲಿ ಮುರುಘಾಮಠವು ಅತ್ಯಂತ ವೈಶಿಷ್ಟ್ಯ ಪೂರ್ಣವಾದದ್ದು. ಮುರುಗಿ ಶಾಂತವೀರರ ಕೃತಿಗಳ ಆಶಯವನ್ನು ವಿಚಾರ ಸಂಕಿರಣದಲ್ಲಿ ಅವಲೋಕ ಮಾಡಿರುವುದು ಶ್ರೇಷ್ಠ ವಿಚಾರವಾಗಿದೆ’ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪ ಹೇಳಿದರು. ಎಸ್.ಜೆ.ಎಂ ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯ ಬಸವಕುಮಾರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದರು.
‘ಆಂತರಿಕ ಬದಲಾವಣೆ ಅವಶ್ಯ
’ ‘ಮನುಷ್ಯ ಆಂತರಿಕವಾಗಿ ಬದಲಾದರೆ ಕಾಯಕದಲ್ಲಿ ತೊಡಗಲು ಸಹಾಯಕವಾಗುತ್ತದೆ. ಶರಣರು ಶಿವಯೋಗಿಗಳು ಆಂತರಿಕವಾಗಿ ತಮ್ಮ ಮನಸ್ಸನ್ನು ಪರಿವರ್ತಿಸಿಕೊಳ್ಳುತ್ತಾರೆ. ಏನನ್ನಾದರೂ ಸಾಧಿಸಬೇಕಾದರೆ ಅಂತಹ ಪರಿವರ್ತನೆ ಅಗತ್ಯ’ ಎಂದು ಎಂದು ಗುರುಮಠಕಲ್ ಖಾಸಾ ಮುರುಘಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ‘ಸಹಜ ಶಿವಯೋಗ’ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು ‘ನರಜನ್ಮದಿಂದ ಪರಿವರ್ತನೆ ಆಗಬೇಕಾದರೆ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು. ಮೋಕ್ಷ ಹೊಂದುವುದು ನಮ್ಮ ಕೈಯಲ್ಲಿಯೇ ಇದೆ. ಏನನ್ನಾದರೂ ಸಾಧಿಸಬಹುದು ಮನಸ್ಸನ್ನು ನಿಯಂತ್ರಿಸುವುದು ಕಠಿಣ. ಮನಸ್ಸು ಒಂದು ರೀತಿಯಲ್ಲಿ ಮರ್ಕಟ ನಾನಾ ರೀತಿಯಲ್ಲಿ ಅದು ಸದಾ ಬದಲಾವಣೆ ಮತ್ತು ಚಟುವಟಿಕೆಯಿಂದ ತೊಡಗಿರುತ್ತದೆ’ ಎಂದರು. ಹಿರೇಮಾಗಡಿ ವಿರಕ್ತಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ನಿಪ್ಪಾಣಿ ಶ್ರೀಮುರುಘೇಂದ್ರ ಮಠದ ಬಸವ ಮಲ್ಲಿಕಾರ್ಜುನ ಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.