ADVERTISEMENT

ಮುತ್ತಿಗಾರಹಳ್ಳಿ: ಗೋಶಾಲೆಯಲ್ಲಿ ಮರೀಚಿಕೆಯಾದ ‘ನೆರಳಿನ ವ್ಯವಸ್ಥೆʼ

ಜಾರಿಯಾಗದ ಜಿಲ್ಲಾಧಿಕಾರಿ ಸೂಚನೆ, ಬಿಸಿಲಿನ ಬೇಗೆ ಅನಿವಾರ್ಯ

ಕೊಂಡ್ಲಹಳ್ಳಿ ಜಯಪ್ರಕಾಶ
Published 2 ಏಪ್ರಿಲ್ 2024, 5:25 IST
Last Updated 2 ಏಪ್ರಿಲ್ 2024, 5:25 IST
ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗೋಶಾಲೆಯಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬಿರು ಬಿಸಿಲಿನಲ್ಲಿ ಹುಲ್ಲು ತಿನ್ನುತ್ತಿರುವ ಜಾನುವಾರುಗಳು
ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗೋಶಾಲೆಯಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬಿರು ಬಿಸಿಲಿನಲ್ಲಿ ಹುಲ್ಲು ತಿನ್ನುತ್ತಿರುವ ಜಾನುವಾರುಗಳು   

ಮೊಳಕಾಲ್ಮುರು: ಸುತ್ತಲೂ ಬಿರುಬಿಸಿಲು, ಅಲ್ಲಲ್ಲಿ ಕಾಣಸಿಗುವ ಮುಳ್ಳುಗಿಡಗಳ ಕೆಳಗಡೆ ಪ್ರಾಯಾಸಪಟ್ಟು ಮೇವು ತಿನ್ನುವ ಜಾನುವಾರುಗಳು, ನೆರಳಿಗಾಗಿ ಹುಡುಕಾಟ ನಡೆಸುವ ಜಾನುವಾರು ಪಾಲಕರು..

ಇದು ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗೋಶಾಲೆಯಲ್ಲಿ ಕಂಡ ಚಿತ್ರಣ.

ಬರ ಆವರಿಸಿರುವ ಹಿನ್ನೆಲೆಯಲ್ಲಿ ಜಾನುವಾರಗಳನ್ನು ಪೋಷಿಸಲು ಜಿಲ್ಲಾಡಳಿತ ಗೋಶಾಲೆ ಆರಂಭಿಸಿದ್ದರೂ ಪ್ರಯೋಜನ ಅಷ್ಟಾಗಿ ಸಿಗುತ್ತಿಲ್ಲ ಎಂಬ ಆರೋಪ ಸ್ಥಳೀಯರದ್ದು. ಕಳೆದ ಬಾರಿಗೆ ಹೋಲಿಸಿದಲ್ಲಿ ಸಾಕಷ್ಟು ಲೋಪಗಳು ಕಾಣ ಸಿಗುತ್ತಿವೆ ಎಂದು ಜಾನುವಾರು ಪಾಲಕರು ದೂರಿದ್ದಾರೆ.

ADVERTISEMENT

ಪೌಳಿ ಬಳಿ ಸಲಹುತ್ತಿರುವ ದೇವರ ಎತ್ತುಗಳು ಸೇರಿದಂತೆ ಈ ಗೋಶಾಲೆಗೆ ನಿತ್ಯ 1,400ರಿಂದ 1,500 ಜಾನುವಾರುಗಳು ಬರುತ್ತಿವೆ. 2018ರಲ್ಲಿ 3,000ಕ್ಕೂ ಹೆಚ್ಚು ಜಾನುವಾರುಗಳು ಬರುತ್ತಿದ್ದವು.
ಅಂದರೆ, ಜಾನುವಾರು ಸಾಕಣೆ ಕಡಿಮೆಯಾಗಿದೆ ಎಂಬ ಅನುಮಾನ ಮೂಡಿದೆ. ಗೋಶಾಲೆಯಲ್ಲಿ ಒಂದು ಶಾಶ್ವತ ಶೆಡ್‌, 2 ತಾತ್ಕಾಲಿಕ ಶೆಡ್‌ ಹೊರತುಪಡಿಸಿದರೆ ಬೇರೆ ನೆರಳಿನ ವ್ಯವಸ್ಥೆಯಿಲ್ಲ. ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಗೋಶಾಲೆಗೆ ಈಚೆಗೆ ಭೇಟಿ ನೀಡಿದ್ದಾಗ ಜನರು ನೆರಳಿನ ವ್ಯವಸ್ಥೆಗೆ ಮನವಿ ಮಾಡಿದ್ದರು.

‘ನಾಳೆಯಿಂದಲೇ ಶೆಡ್‌ ಹಾಕಿಸಿ’ ಎಂದು ಸೂಚಿಸಿದ್ದರು. ಆದರೆ ಒಂದು ಶೆಡ್‌ ಅನ್ನು ಅರೆಬರೆಯಾಗಿ ಹಾಕಿದ್ದು ಬಿಟ್ಟಲ್ಲಿ ಬೇರೆ ನೆರಳಿನ ವ್ಯವಸ್ಥೆ ಮಾಡಿಲ್ಲ. ಕನಿಷ್ಠ 6-8 ಶೆಡ್‌ ಅಗತ್ಯವಿದ್ದು, ದನಗಳನ್ನು ಆವರಣದಲ್ಲಿನ ಜಾಲಿಗಿಡಗಳ ಕೆಳಗಡೆ ಕಟ್ಟಿಕೊಂಡು ಪೋಷಣೆ ಮಾಡಲಾಗುತ್ತಿದೆ ಎಂದು ಪಾಲಕರು ದೂರಿದರು. ನೂರಾರು ಜಾನುವಾರುಗಳು ಬಿರುಬಿಸಿಲಿನಲ್ಲಿ ನಿಂತಿದ್ದು ಕಾಣಿಸಿತು. 

‘ಒಂದು ದಿನ ಭತ್ತದ ಹುಲ್ಲು, ಮತ್ತೊಂದು ದಿನ ಮೆಕ್ಕೆಜೋಳ ಸಪ್ಪೆ ನೀಡಲಾಗುತ್ತಿದೆ. ನಮ್ಮ ಜಾನುವಾರುಗಳಿಗೆ ಭತ್ತದ ಹುಲ್ಲು ತಿನ್ನುವ ಅಭ್ಯಾಸವಿಲ್ಲದ ಕಾರಣ ಹಾಗೇ ಬಿಡುತ್ತಿದೆ. ಮೆಕ್ಕೆಜೋಳದ ಸಪ್ಪೆ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಮೇವು ನೀಡಲು ಸಿಬ್ಬಂದಿ ಇಲ್ಲದ ಕಾರಣ ಮುಗಿಬಿದ್ದು ನಾವೇ ತೆಗೆದುಕೊಂಡು ಬರಬೇಕು. ಶಕ್ತಿವಂತರಿಗೆ ಹೆಚ್ಚು ಮೇವು ಸಿಗುತ್ತಿದೆ, ವೃದ್ಧರ ಪಾಡು ಕಷ್ಟ‘ ಎಂದು ಪಾಲಕ ಮಂಜಣ್ಣ ದೂರಿದರು.

ಕಳೆದ ಬಾರಿ ಈ ಗೋಶಾಲೆಯಲ್ಲಿ ಮೆಕ್ಕೆಜೋಳ ಸಪ್ಪೆಯನ್ನು ಮಷಿನ್‌ಗೆ ಹಾಕಿ ತುಂಡು ಮಾಡಿ ಬೆಲ್ಲ ಹಾಗೂ ಪೋಶಕಾಂಶಯುಕ್ತ ನೀರಿನಲ್ಲಿ ನೆನೆಸಿ ನೀಡಲಾಗುತ್ತಿತ್ತು. ಅದಕ್ಕಾಗಿಯೇ ಹೆಚ್ಚು ಜಾನುವಾರುಗಳನ್ನು ಹೊಡೆದುಕೊಂಡು ಬರುತ್ತಿದ್ದರು. ಆರೋಗ್ಯದಲ್ಲೂ ಸುಧಾರಣೆಯಾಗಿದ್ದವು. ಈ ಬಾರಿ ನಿರ್ವಹಣೆಗೆ ಸಿಬ್ಬಂದಿ ಇಲ್ಲದಂತಾಗಿದೆ. ಅಧಿಕಾರಿಗಳು ಯಾವಾಗಲೋ ಒಮ್ಮೆ ಬಂದು ಹೋಗುತ್ತಾರೆ ಎಂದು ದೂರಿದರು.

ಜಿಲ್ಲಾಡಳಿತ ತಕ್ಷಣವೇ ಗಮನಹರಿಸಿ ನೆರಳಿನ ವ್ಯವಸ್ಥೆ ಜತೆಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಗೋ ಪಾಲಕರು ಮನವಿ ಮಾಡಿದರು.

ಆಂಧ್ರಪ್ರದೇಶದಿಂದ ಮೇವು ಹೊತ್ತು ತರುತ್ತಿರುವ ಲಾರಿಗಳು

ಸ್ವಚ್ಛತೆ ಗೋಶಾಲೆ ಸಿಬ್ಬಂದಿ ಸಂಬಳ ಮೇವು ಕತ್ತರಿಸಿ ನೀಡುವ ವೆಚ್ಚಗಳನ್ನು ಮೇವು ಸರಬರಾಜಿನ ಜೊತೆ ಸೇರಿಸಿದ್ದರೆ ಸಮಸ್ಯೆ ಎದುರಾಗುವುದಿಲ್ಲ. ನಮ್ಮ ಜಾನುವಾರುಗಳು ತಿನ್ನುವಂತಹ ಮೇವು ನೀಡಿದರೆ ಅನುಕೂಲ -ಜಾಫರ್‌ ಷರೀಫ್‌ ಸಿಪಿಐ ಕಾರ್ಯದರ್ಶಿ

ಸಗಣಿ ಎತ್ತೋರು ಯಾರು..?

ಗೋಶಾಲೆ ಸ್ವಚ್ಛತಾ ಸಿಬ್ಬಂದಿಗೆ ಕೂಲಿ ಯಾರು ನೀಡಬೇಕು ಎಂಬ ಗೊಂದಲ ಎದುರಾಗಿದ್ದು ಗೋಶಾಲೆ ಆರಂಭದಿಂದ 25 ದಿನ 8 ಮಂದಿ ಕೆಲಸ ಮಾಡಿದ್ದು ಅವರನ್ನು ಕೆಲಸಕ್ಕೆ ಬರಬೇಡಿ ಎಂದು ಭಾನುವಾರ ಸೂಚಿಸಲಾಗಿದೆ. ಇನ್ನು ಮುಂದೆ ಆವರಣದಲ್ಲಿ ಹಾಗೂ ಶೆಡ್‌ನಲ್ಲಿ ಬೀಳುವ ಸಣಿ ತೆಗೆಯುವವರು ಯಾರು? ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ ‘ಇಲಾಖೆ ಸಿಬ್ಬಂದಿಯೇ ಸಗಣಿ ಬಾಚುತ್ತೇವೆ ನೋಡುವಿರಂತೆ’ ಎಂಬ ಹಾರಿಕೆ ಉತ್ತರ ನೀಡಿದರು.

ನಷ್ಟಕ್ಕೆ ಹೊಣೆ ಯಾರು..?

ತಾಲ್ಲೂಕಿನ ಗೋಶಾಲೆಗಳಿಗೆ ಮೇವು ಸರಬರಾಜು ಮಾಡುವ ಗುತ್ತಿಗೆಯನ್ನು ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಆನ್‌ಲೈನ್‌ ಟೆಂಡರ್‌ನಲ್ಲಿ ಪಡೆದುಕೊಂಡಿದ್ದಾರೆ. ಇವರು ಜಿಲ್ಲೆಯ ಇನ್ನೂ 2 ತಾಲ್ಲೂಕುಗಳ ಗುತ್ತಿಗೆ ಪಡೆದುಕೊಂಡಿದ್ದಾರೆ. ಬೇರೆ ತಾಲ್ಲೂಕುಗಳಿಗೆ ಪ್ರತಿ ಟನ್‌ ಮೇವು ಪೂರೈಸಲು ₹4800ಕ್ಕೆ ಟೆಂಡರ್‌ ಪಡೆದಿದ್ದರೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪ್ರತಿ ಟನ್‌ಗೆ ₹1800ಕ್ಕೆ ಟೆಂಡರ್ ಆಗಿದೆ. ಅಪ್‌ಲೋಡ್‌ ಮಾಡುವಾದ ತಪ್ಪಾಗಿದ್ದು ಇಷ್ಟು ಕಡಿಮೆ ದರಕ್ಕೆ ಮೇವು ಪೂರೈಸಲು ಆಗುವುದಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಆದರೂ ಗುತ್ತಿಗೆದಾರರ ಮನವೊಲಿಸಿ ಪೂರೈಕೆ ಮಾಡಿಸಿಕೊಳ್ಳುತ್ತಿದ್ದೇವೆ. ಇನ್ನೂ ಕತ್ತರಿಸಿ ಬೆಲ್ಲದ ಪಾನಕ ಜೊತೆ ನೀಡುವುದು ಸಾಧ್ಯವಿಲ್ಲ ಎಂದು ಕಂದಾಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.