ADVERTISEMENT

ದೂರದೃಷ್ಟಿಯ ಕನಸುಗಾರ, ಸಮರ್ಥ ಆಡಳಿತಗಾರ

ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:56 IST
Last Updated 27 ಜೂನ್ 2025, 15:56 IST
ಕೆಂಪೇಗೌಡ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ‍ನಮನ ಸಲ್ಲಿಸಿದರು
ಕೆಂಪೇಗೌಡ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ‍ನಮನ ಸಲ್ಲಿಸಿದರು   

ಚಿತ್ರದುರ್ಗ: ‘ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿಯುಳ್ಳ ಕನಸುಗಾರರಾಗಿದ್ದರು. ಸಮರ್ಥ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದ್ದ ಅವರು ರಾಜಧಾನಿ ಬೆಂಗಳೂರಿಗೆ ಹೊಸ ರೂಪ ನೀಡಿದರು. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಳ್ಳುವಲ್ಲಿ ಕೆಂಪೇಗೌಡರ ಕನಸುಗಳು ಪ್ರಮುಖ ಕಾರಣವಾಗಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಕೆಂಪೇಗೌಡರು ಕೇವಲ ನಾಡಪ್ರಭು ಮಾತ್ರವಲ್ಲದೇ ಧರ್ಮಪ್ರಭುವೂ ಆಗಿದ್ದರು. ಬೆಂಗಳೂರು ಎಲ್ಲಾ ಧರ್ಮಗಳಿಗೆ, ಎಲ್ಲಾ ಭಾಷಿಕರಿಗೆ ಸುರಕ್ಷಿತ ಸ್ಥಳ. ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿಯೂ ವಿಶ್ವ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಜಗತ್ತಿಗೆ ಸಿಲಿಕ್ಯಾನ್ ವ್ಯಾಲಿಯಾಗಿರುವ ಬೆಂಗಳೂರು ಕೆಂಪೇಗೌಡರ ಕನಸಿನ ನಗರವಾಗಿತ್ತು’ ಎಂದರು.

ADVERTISEMENT

‌‌ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಸಿ. ಶಿವಲಿಂಗಪ್ಪ ಉಪನ್ಯಾಸ ನೀಡಿ ‘ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಧೀರೋದಾತ್ತ ನಾಯಕರಾಗದ್ದರು. ದೂರದರ್ಶಿತ್ವವುಳ್ಳ ರಾಜಕೀಯ ಮುತ್ಸದ್ಧಿ ಹಾಗೂ ಆರ್ಥಿಕ ಚಿಂತಕರೂ ಆಗಿದ್ದರು. 16ನೇ ಶತಮಾನದಲ್ಲಿ ಅತ್ಯುನ್ನತ ಮಾದರಿಯ ಯೋಜನಾ ಬದ್ಧ ಶೈಲಿ ನಗರವಾಗಿ ಬೆಂಗಳೂರು ನಗರವನ್ನು ರೂಪಿಸಿದರು’ ಎಂದು ತಿಳಿಸಿದರು.

‘ನಾಡು ಮತ್ತು ಜನರ ಹಿತರಕ್ಷಣೆಗಾಗಿ ಕೆರೆ, ಕೋಟೆ ಮತ್ತು ಗುಡಿ–ಗೋಪುರಗಳ ನಿರ್ಮಾಣ ಮಾಡಿದ್ದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕೃಷಿ, ನೀರಿನ ಸಂಪನ್ಮೂಲ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡಿದರು. ಬೆಂಗಳೂರನ್ನು ವಾಣಿಜ್ಯ ನಗರವಾಗಿ ಅಭಿವೃದ್ಧಿ ಮಾಡಿದರು. ರಕ್ಷಣೆ ಮತ್ತು ಆಡಳಿತ ವ್ಯವಸ್ಥೆಯಿಂದ ಇಡೀ ನಾಡು ಶಾಂತಿ ಮತ್ತು ಸುಭಿಕ್ಷವಾಗಿರುವಂತೆ ಆಳ್ವಿಕೆ ನಡೆಸಿದರು’ ಎಂದರು.

‘ಕೆಂಪೇಗೌಡರ ಆತ್ಮಸ್ಥೈರ್ಯ, ಪರಿಶ್ರಮ ಬದ್ಧತೆ, ನೈತಿಕತೆ, ಸ್ವಾಭಿಮಾನ, ಜನಹಿತ ಇಚ್ಛಾಶಕ್ತಿ, ಅನುಪಮ ವ್ಯಕ್ತಿತ್ವದ ನಾಯಕತ್ವ ಹೊಂದಿದ್ದರು. ಅವರಲ್ಲಿ ಇದ್ದ ಒಳನೋಟಗಳು ಈಗಿನ ಜನಪ್ರತಿನಿಧಿಗಳಿಗೆ ಮತ್ತು ಆಡಳಿತಗಾರರಿಗೆ ಪ್ರೇರಕಶಕ್ತಿಯಾಗಿ ನಿಲ್ಲಬೇಕಾಗಿದೆ. ಇಂದಿನ ಆಡಳಿತ ವ್ಯವಸ್ಥೆ ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

‘ಉದ್ಯಾನ ನಗರಿ, ವಾಣಿಜ್ಯ ನಗರಿ, ಮಾಯಾನಗರಿ ಎಂದೆಲ್ಲಾ ಬೆಂಗಳೂರು ಗುರುತಿಸಿಕೊಂಡಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜ್ಞಾನ ಮತ್ತು ಕೌಶಲಗಳ ತವರಾಗಿದೆ. ಐಟಿ, ಬಿ.ಟಿಗಳ ಕೇಂದ್ರ, ಆರ್ಥಿಕ ಶಕ್ತಿಯ ತೊಟ್ಟಿಲು, ಸಾಂಸ್ಕೃತಿಕ, ಸೃಜನಶೀಲ, ಚಲನಶೀಲ ಪರಂಪರೆಗೆ ಸಾಕ್ಷಿಯಾಗಿದೆ. ಪ್ರಯೋಗಶೀಲತೆಯ ಸೀಮೆ ಹಾಗೂ ಪ್ರಜಾಪ್ರಭುತ್ವದ ಆಡಳಿತಾತ್ಮಕ ಅಧಿಕಾರದ ಮೈದಾನವಾಗಿದೆ. ಬಹುಭಾಷೆಗಳ, ಬಹು ಸಂಸ್ಕೃತಿಗಳ, ಬಹುವೃತ್ತಿಗಳ ಬಹುತ್ವಗಳೂರು ಪುಟ್ಟ ಪ್ರಪಂಚವೇ ಆಗಿದೆ’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ‘ಬೆಂಗಳೂರು ಜಾಗತೀಕ ಮಟ್ಟದಲ್ಲಿ ಗಮನ ಸೆಳೆದಿದೆ. ಕೆಂಪೇಗೌಡರು ಹಲವು ವೃತ್ತಿಗಳಿಗಾಗಿ ವಿವಿಧ ಪೇಟೆಗಳನ್ನು ನಿರ್ಮಿಸಿದ್ದರು. ಈ ಪೇಟೆಗಳೆಲ್ಲವೂ ಪ್ರಸ್ತುತ ಇಂಡಸ್ಟ್ರೀಯಲ್ ಬಡಾವಣೆಗಳಾಗಿವೆ. ಮಹಾ ಪುರುಷರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯದವರು ಸೇರಿ ಆಚರಣೆ ಮಾಡಬೇಕು. ಇಂದಿನ ಯುವ ಪೀಳಿಗೆ ಮಹನೀಯರ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ , ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ, ಗೌರವಾಧ್ಯಕ್ಷ ಪ್ರೊ.ಎನ್.ಈರಣ್ಣ, ಮುಖಂಡರಾದ ಕರಿಯಪ್ಪ, ರಮೇಶ ಗೌಡ, ಹನುಮಂತಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.