ADVERTISEMENT

ಕಣ್ಮನ ಸೆಳೆಯುತ್ತಿವೆ ನವರಾತ್ರಿ ಗೊಂಬೆಗಳು

ಪ್ರತಿದಿನ ಪೂಜೆ, ಆರತಿ, ಪ್ರಸಾದ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:58 IST
Last Updated 28 ಸೆಪ್ಟೆಂಬರ್ 2025, 5:58 IST
ಚಿತ್ರದುರ್ಗದ ಧವಳಗಿರಿಯ ಸತ್ಯನಾರಾಯಣಾಚಾರ್‌ ಅವರ ಮನೆಯಲ್ಲಿ ದಸರಾ ಗೊಂಬೆ ಕೂರಿಸಿರುವುದು
ಚಿತ್ರದುರ್ಗದ ಧವಳಗಿರಿಯ ಸತ್ಯನಾರಾಯಣಾಚಾರ್‌ ಅವರ ಮನೆಯಲ್ಲಿ ದಸರಾ ಗೊಂಬೆ ಕೂರಿಸಿರುವುದು   

ಚಿತ್ರದುರ್ಗ: ನವರಾತ್ರಿ ಅಂಗವಾಗಿ ನಗರದ ಧವಳಗಿರಿ ಬಡಾವಣೆಯ ಸತ್ಯನಾರಾಯಣಾಚಾರ್‌ ಅವರ ಮನೆಯಲ್ಲಿ ಕೂರಿಸಿರುವ ದಸರಾ ಗೊಂಬೆಗಳು ಮನಸೂರೆಗೊಳ್ಳುತ್ತಿವೆ. ದೇಶದ ವಿವಿಧೆಡೆಯಿಂದ ತಂದಿರುವ ಗೊಂಬೆಗಳು ದೈವೀಕ ಭಾವನೆಯನ್ನು ಸೃಷ್ಟಿಸುತ್ತಿವೆ.

ಸತ್ಯನಾರಾಯಣಾಚಾರ್‌ ಅವರ ಪತ್ನಿ ಗೌರಿ ಕೋಕಿಲಾ ಅವರು ಭಕ್ತಿಪೂರ್ಣವಾಗಿ ಗೊಂಬೆ ಪ್ರತಿಷ್ಠಾಪಿಸಿ ನಿತ್ಯವೂ ಆರಾಧನೆ ಮಾಡುತ್ತಿದ್ದಾರೆ. ಅವರ ಪೋಷಕರಾದ ನಾಗರತ್ನಾಚಾರ್‌– ಲಕ್ಷ್ಮಿದೇವಮ್ಮ ಅವರು 70ರ ದಶಕದಿಂದಲೂ ನಡೆಸಿಕೊಂಡು ಬಂದಿದ್ದ ಪರಂಪರೆಯನ್ನು ಮಗ– ಸೊಸೆ ಬಹಳ ಜತನದಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಹುಲಿಯ ಮೇಲೆ ಕುಳಿತಿರುವ ಚಾಮುಂಡೇಶ್ವರಿ ಗೊಂಬೆಯು ಬಹಳ ಸೊಗಸಾಗಿದೆ. ಚಾಮುಂಡಿಯ ಎರಡೂ ಕಡೆ ಆನೆಗಳು, ಸೈನಿಕರ ಗೊಂಬೆಗಳು ಗಮನ ಸೆಳೆಯುತ್ತಿವೆ. ಕಳಶ ಹಾಗೂ ತೆಂಗಿನಕಾಯಿಯಿಂದ ದೇವಿಯನ್ನು ಪ್ರತಿಷ್ಠಾಪಿಸಿ ಸುತ್ತಲೂ ಅಷ್ಟಲಕ್ಷ್ಮಿಯರ ಗೊಂಬೆಗಳನ್ನು ಕೂರಿಸಲಾಗಿದೆ.

ADVERTISEMENT

ಮೈಸೂರು ಅರಮನೆಯನ್ನು ಹೋಲುವ ಪ್ರತಿಕೃತಿಯನ್ನೂ ಕಾಣಬಹುದು. ಅದರ ಮುಂದೆ ಸೈನಿಕರು, ಸಂಗೀತಗಾರರ ಗೊಂಬೆಗಳು ಇವೆ. ಜೊತೆಗೆ ವೆಂಕಟೇಶ್ವರ, ಪದ್ಮಾವತಿ, ವಿಠಲ– ರುಕ್ಮಿಣಿ ಗೊಂಬೆಗಳನ್ನೂ ಕೂರಿಸಲಾಗಿದೆ. ಗೊಂಬೆ ದರ್ಶನದಲ್ಲಿ ಕೈಲಾಸ ಪರ್ವತವನ್ನೂ ಸೃಷ್ಟಿಸಲಾಗಿದ್ದು ಶಿವ–ಪಾರ್ವತಿಯ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಕೈಲಾಸದಲ್ಲಿ ನಡೆಯುವ ನ್ಯಾಯಪೀಠದ ಚಿತ್ರಣವನ್ನೂ ಕಾಣಬಹುದಾಗಿದೆ.

ಋಷಿ ಮುನಿಗಳು, ಮದುವೆ ಮಂಟಪ, ವರ–ವಧು, ಓಲಗದವರು ಮುಂತಾದ ಚಿತ್ರಣವನ್ನು ಗೊಂಬೆಗಳ ಮೂಲಕ ಕಟ್ಟಿಕೊಡಲಾಗಿದೆ. ಜೊತೆಗೆ ಹಳ್ಳಿಯ ವಾತಾವರಣ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿರುವ ಶಿಕ್ಷಕಿಯ ಚಿತ್ರಣವನ್ನು ಗೊಂಬೆಗಳ ಮೂಲಕ ರೂಪಿಸಲಾಗಿದೆ. ಅಯೋಧ್ಯೆ ಶ್ರೀರಾಮ ದೇವಾಲಯ, ಕಾಶಿ ವಿಶ್ವನಾಥ, ಪುರಿ ಜಗನ್ನಾಥ ದೇವಾಲಯಗಳ ಪ್ರತಿರೂಪಗಳನ್ನು ಕಾಣಬಹುದು.

ಗೌರಿ ಕೋಕಿಲಾ ಅವರು ವೀಣೆ ನುಡಿಸುವುದನ್ನು ಕಲಿಯುತ್ತಿದ್ದು ಗೊಂಬೆಗಳ ಜೊತೆಗೆ ವೀಣೆಯನ್ನೂ ಇಟ್ಟು ಪೂಜಿಸುತ್ತಿದ್ದಾರೆ. ಗೊಂಬೆಗಳ ಪ್ರತಿಷ್ಠಾಪನೆ ಮಾತ್ರವಲ್ಲದೇ ನಿತ್ಯವೂ ದೇವಿ ಮಹಾತ್ಮೆ ಪಾರಾಯಣ, ಆರತಿ, ಮನೆಗೆ ಬಂದವರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಗೌರಿ ಕೋಕಿಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.