
ನಾಯಕನಹಟ್ಟಿ: ಹೋಬಳಿಯ ಜಾಗನೂರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಕರ್ತವ್ಯ ಲೋಪ ಎಸಗಿರುವ ಕಾರಣ ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡಬೇಕೇಂದು ಗ್ರಾಮಸ್ಥರು ಒತ್ತಾಯಿಸಿದರು.
ಜಾಗನೂರಹಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೂ 143 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ ಸೇರಿ 4 ಜನ ಸಹ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯಲ್ಲಿರುವ ಮುಖ್ಯ ಶಿಕ್ಷಕರು 2008ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಒಂದು ದಿನವೂ ತರಗತಿಯನ್ನು ತೆಗೆದುಕೊಂಡಿಲ್ಲ. ಶಾಲೆಯಲ್ಲಿ 6 ಗಣಕಯಂತ್ರಗಳಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಕ್ರೀಡಾಪರಿಕರಗಳಿದ್ದರೂ ವಿದ್ಯಾರ್ಥಿಗಳ ಬಳಕೆಗೆ ಸಿಗುತ್ತಿಲ್ಲ.
‘ಶಾಲೆಯಲ್ಲಿ ಹಲವು ವರ್ಷಗಳಿಂದ ವಿದ್ಯುತ್, ಶೌಚಾಲಯ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮುಖ್ಯ ಶಿಕ್ಷಕರು ಅಗತ್ಯ ಕ್ರಮ ಕೈಗೊಂಡಿಲ್ಲ. ಜೊತೆಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ತೊಡಕಾಗಿದೆ’ ಎಂದು ಗ್ರಾಮಸ್ಥರಾದ ವಿ.ಅಭಿಷೇಕ್, ಟಿ.ನಾಗೇಂದ್ರ, ಮಹಾಂತೇಶ್ ಆರೋಪಿಸಿದರು.
ಸರ್ಕಾರ ವಿದ್ಯಾರ್ಥಿಗಳಿಗಾಗಿ ನೀಡಿರುವ ಶೂಗಳಲ್ಲಿ ಮುಖ್ಯ ಶಿಕ್ಷಕರು ಇತ್ತೀಚಿಗೆ 19 ಜೊತೆ ಶೂಗಳನ್ನು ನಾಯಕನಹಟ್ಟಿಯ ಖಾಸಗಿ ಅಂಗಡಿಗೆ ಮಾರಾಟ ಮಾಡಿರುವ ಬಗ್ಗೆ ನಮ್ಮ ಗ್ರಾಮದ ಯುವಕರು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಜೊತೆಗೆ ವಾರದಲ್ಲಿ ಕೇವಲ 2 ದಿನ ಮಾತ್ರ ಮೊಟ್ಟೆ ವಿತರಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಶಾಲೆಗೂ ಗ್ರಾಮಸ್ಥರಿಗೂ ಸಂಬಂಧವಿಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಾರೆ. ಹಾಗೇ ಶಾಲೆಯಲ್ಲಿದ್ದ ಹಳೆಯ ಕಬ್ಬಿಣದ ಸಾಮಾಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಮಾರಾಟದ ಹಣದ ಬಗ್ಗೆ ಮಾಹಿತಿ ನೀಡುತ್ತಿಲ್ಲ.
‘143 ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ 14 ಕೆಜಿಯಷ್ಟು ಅಕ್ಕಿ ನೀಡಬೇಕು. ಆದರೆ, ಕೇವಲ 7 ಕೆಜಿಯಷ್ಟು ಅಕ್ಕಿ ನೀಡಿ ವಿದ್ಯಾರ್ಥಿಗಳಿಗೆ ಹೊಟ್ಟೆತುಂಬಾ ಊಟ ಹಾಕುತ್ತಿಲ್ಲ. ಅಕ್ಷರ ದಾಸೋಹದ ಆಹಾರ ಪಟ್ಟಿಯಂತೆ ಊಟ ನೀಡುತ್ತಿಲ್ಲ’ ಎಂದು ಆರೋಪಿಸಿದ ಒ. ಉಮೇಶ್, ಜಿ.ಬಿ. ದೇವರಾಜ್, ಪಾಲಯ್ಯ ಬುಧವಾರ 100ಕ್ಕೂ ಹೆಚ್ಚು ಗ್ರಾಮಸ್ಥರೊಂದಿಗೆ ಶಾಲಾ ಆವರಣಕ್ಕೆ ದಾವಿಸಿ ಮುಖ್ಯ ಶಿಕ್ಷಕರ ಕರ್ತವ್ಯ ಲೋಪವನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರು.
ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಗ್ರಾಮಸ್ಥರ ಆರೋಪಗಳನ್ನು ಆಲಿಸಿದರು. ಮತ್ತು ಶಾಲೆಯಲ್ಲಿನ ದಾಖಲೆಗಳನ್ನು ಮತ್ತು ವಸ್ತು ಸ್ಥಿತಿಯನ್ನು ಪರಿಶೀಲಿಸಿ ‘ಮುಖ್ಯ ಶಿಕ್ಷಕರನ್ನು ತಕ್ಷಣದಿಂದಲೇ ಕರ್ತವ್ಯದಿಂದ ಅಮಾನತಿ ಮಾಡಲು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು. ಇದರಿಂದ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಪಟ್ಟಣ ಪಂಚಾಯಿತಿ ಸದಸ್ಯ ಎಂ.ಟಿ. ಮಂಜುನಾಥ, ಗ್ರಾಮಸ್ಥರಾದ ಎಸ್.ಪಿ. ಪಾಲಯ್ಯ, ನಾಗರಾಜ, ಪ್ರಹ್ಲಾದ, ಮಂಜಣ್ಣ, ಬಿ.ಟಿ. ಪ್ರಕಾಶ್, ಮುತ್ತಯ್ಯ, ನಿಂಗಣ್ಣ, ಪಾಪಣ್ಣ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.