ADVERTISEMENT

ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಭಕ್ತರು

ಕಡೆಯ ಶ್ರಾವಣ ಸೋಮವಾರ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:03 IST
Last Updated 19 ಆಗಸ್ಟ್ 2025, 5:03 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಕಡೆಯ ಶ್ರಾವಣ ಸೋಮವಾರದ ನಿಮಿತ್ತ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಿರುವುದು
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಕಡೆಯ ಶ್ರಾವಣ ಸೋಮವಾರದ ನಿಮಿತ್ತ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಿರುವುದು   

ನಾಯಕನಹಟ್ಟಿ: ಕಡೇ ಶ್ರಾವಣ ಸೋಮವಾರ ಪ್ರಯುಕ್ತ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ, ಹೊರಮಠಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.

ಬೆಳಗಿನ ಜಾವದಿಂದ ಆರಂಭವಾದ ಪೂಜಾ ಕೈಂಕರ್ಯಗಳು ಸೋಮವಾರ ರಾತ್ರಿ 9ಗಂಟೆಯವರೆಗೂ ನಿರಂತರವಾಗಿ ನಡೆಯಿತು. ಒಳಮಠದ ಆವರಣದ ಹಿಂಬದಿಯಲ್ಲಿರುವ ಅಭಿಷೇಕ ಮಂದಿರಲ್ಲಿ ಗುರುತಿಪ್ಪೇರುದ್ರಸ್ವಾಮಿ ವಿಗ್ರಹಕ್ಕೆ ಅಭಿಷೇಕ, ರುದ್ರಾಭಿಷೇಕ, ಅರ್ಚನೆ, ಬಿಲ್ವಾರ್ಚನೆ ಸೇರಿದಂತೆ ಹಲವು ಪೂಜೆಗಳು ಜರುಗಿದವು. ನಂತರ ಪ್ರಧಾನ ದೇವಾಲಯದಲ್ಲಿ ದೇವರ ದರ್ಶನಕ್ಕಾಗಿ ಬೆಳಗಿನಿಂದಲೇ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ತಿಪ್ಪೇಶನ ದರ್ಶನ ಪಡೆದರು.

ಭಕ್ತರಿಗೆ ಸುಗಮ ದರ್ಶನಕ್ಕಾಗಿ ಬ್ಯಾರಿಕೇಡ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹೂವು–ಹಣ್ಣುಕಾಯಿ ಸಮರ್ಪಿಸಲು ದೇವಾಲಯದ ಪ್ರಾಂಗಣದಲ್ಲಿಯೇ ಪ್ರತ್ಯೇಕ ಸಿದ್ಧತೆ ಮಾಡಿದ್ದರಿಂದ ಗರ್ಭಗುಡಿಯ ಬಳಿ ಮಹಾಮಂಗಳಾರತಿ ಮತ್ತು ದೇವರ ದರ್ಶನಕ್ಕೆ ಸಹಾಯಕವಾಯಿತು. ಶ್ರಾವಣ ಮಾಸದ 4 ಸೋಮವಾರಗಳಂದು ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದರಿಂದ ದಾಸೋಹ ವ್ಯವಸ್ಥೆಯನ್ನು ಒಳಮಠದ ಮುಂಭಾಗವಿರುವ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ನೂರಾರು ಭಕ್ತರು ದೇವಾಲಯ ಮುಂಭಾಗದಲ್ಲಿ ದೇವರ ಹೆಸರಿನಲ್ಲಿ ಕೊಬ್ಬರಿ ಸುಟ್ಟು ತಮ್ಮ ಹರಕೆ ಅರ್ಪಿಸಿದರು.

ADVERTISEMENT

ಗದ್ದುಗೆಗೆ ಹೂವಿನ ಅಲಂಕಾರ: ಕಡೇ ಶ್ರಾವಣ ಪ್ರಯುಕ್ತ ಒಳಮಠದ ದರ್ಬಾರ್ ಪೀಠ ಮತ್ತು ಹೊರಮಠದ ಜೀವೈಕ್ಯ ಗದ್ದುಗೆಗೆ ವಿಶೇಷವಾದ ಹೂವುಗಳಿಂದ ಅಲಂಕರಿಸಲಾಗಿತ್ತು. ಪ್ರತೀ ಸೋಮವಾರದಂತೆ ವಾರೋತ್ಸವಕ್ಕೆ ಬೆಳ್ಳಿ ಪಲ್ಲಕ್ಕಿಗೆ ಹೂವಿನಿಂದ ಸಿಂಗರಿಸಲಾಗಿತ್ತು. ನಂದೀಧ್ವಜ ಕುಣಿತ, ಕರಡಿ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ವಾಹನಗಳ ಪೂಜೆ: ದೇವಾಲಯಕ್ಕೆ ಆಗಮಿಸಿದ ಭಕ್ತರು ತಮ್ಮ ವಾಹನಗಳನ್ನು ಒಳಮಠದ ಮುಂಭಾಗ ನಿಲ್ಲಿಸಿ ಪೂಜೆ ಮಾಡಿಸಿಕೊಂಡರು. ದೇವಾಲಯದ ಸಿಬ್ಬಂದಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಿಗೆ ಯಾವುದೇ ಕುಂದುಕೊರತೆ ಉಂಟಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಗುರುವಾರ ದೊಡ್ಡಕೆರೆಗೆ ಗಂಗಾಪೂಜೆ: ಪ್ರತಿವರ್ಷದ ಸಂಪ್ರದಾಯದಂತೆ ಇದೇ ಗುರುವಾರ ಕ್ಷೇತ್ರದ ದೇವಾಲಯದ ನೇತೃತ್ವದಲ್ಲಿ ಪಟ್ಟಣದ ನೈರುತ್ಯ ಭಾಗಕ್ಕಿರುವ ದೊಡ್ಡಕೆರೆ ಏರಿಯ ಮೇಲಿರುವ ದೇವಾಲಯದ ನಂದಿ ವಿಗ್ರಹಗಳಿಗೆ ಕುಂಭಾಭಿಷೇಕ ಮಹೋತ್ಸವವನ್ನು ನೆರವೇರಿಸಲಾವುದು. ನಂತರ ಶಾಸ್ತ್ರೋಕ್ತವಾಗಿ ಕೆರೆ ಗಂಗಮ್ಮನ ಶಾಸ್ತ್ರವನ್ನು ನೆರವೇರಿಸಲಾಗುವುದು. ಕಲಾತಂಡಗಳು ಭಾಗವಹಿಸಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ಎಸ್. ಸತೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.