ಹೊಸದುರ್ಗ: ಈ ದೇಶದಲ್ಲಿ ಅನೇಕರು ಭವಿಷ್ಯ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ವಿಷಾದನೀಯ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸಾಣೇಹಳ್ಳಿಯ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ತನ್ನನ್ನು ತಾನು ತಿಳಿದುಕೊಂಡರೆ ಮಾತ್ರ ಬೇರೆಯವರಿಗೆ ಹೇಳುವ, ಕೇಳುವ ಹಕ್ಕು ಇರುತ್ತದೆ. ದೇವನೊಬ್ಬ ನಾಮ ಹಲವು ಎಂದು ಹೇಳುತ್ತೇವೆ. ನಾವು ದೇವರನ್ನು ಗುರುತಿಸಲಿಕ್ಕೆ ಪ್ರಿಯವಾದ ಹೆಸರನ್ನು ಕೊಟ್ಟಿದ್ದೇವೆ. ಹಲವು ದೇವರನ್ನು ನಂಬದೇ ಏಕದೇವನಿಷ್ಠೆಯನ್ನು ಹೊಂದಬೇಕು. 12ನೇ ಶತಮಾನದಲ್ಲಿ ಶರಣರು ದೀಕ್ಷೆಗೆ ಹೆಚ್ಚು ಮಹತ್ವ ನೀಡಿದರು. ಹೊರಗಡೆ ದೇವರನ್ನು ಹುಡುಕಬೇಡ ನಿನ್ನೊಳಗಡೆ ದೇವರಿದ್ದಾನೆ ಎಂದು ಇಷ್ಟಲಿಂಗವನ್ನು ಅಂಗೈಗೆ ಕೊಟ್ಟಿದ್ದರು. ದೇವಸ್ಥಾನದಲ್ಲಿರುವ ದೇವರು ಜಡ. ಆದರೆ, ಮನುಷ್ಯನೊಳಗೆ ಚೈತನ್ಯ ಇದ್ದು, ಮಾನವನೇ ದೇವನಾಗಬೇಕು. ಇದಕ್ಕೆ ಮನುಷ್ಯನಿಗೆ ಸಂಸ್ಕಾರ ಬೇಕು. ಸಂಸ್ಕಾರವನ್ನು ಕೊಡುವುದೇ ಇಷ್ಟಲಿಂಗ ದೀಕ್ಷೆ’ ಎಂದು ಹೇಳಿದರು.
ದೀಕ್ಷೆ ಪಡೆದ ನಂತರ ನಿಷ್ಠೆಯಿಂದ ಪೂಜೆ ಮಾಡಬೇಕು. ಎಲ್ಲರೂ ಒಂದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ತತ್ವ, ಸಿದ್ಧಾಂತಕ್ಕೆ ದ್ರೋಹವಾದಲ್ಲಿ ಅದನ್ನು ಪ್ರತಿಭಟಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇಷ್ಟಲಿಂಗ ನಿಷ್ಠೆ ಹೊಂದಿದವರು ಬಾಗುವ ಗುಣ ಹೊಂದಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ ಐ.ಜಿ.ಚಂದ್ರಶೇಖಯ್ಯ ದೀಕ್ಷೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.