ಚಿತ್ರದುರ್ಗ: ಸುದ್ದಿ ಓದುಗರ ಕೈಸೇರಬೇಕಾದರೆ ಪತ್ರಿಕೆ ವಿತರಣೆ ಮಾಡುವ ಕೈಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬಿಸಿಲು, ಮಳೆ, ಚಳಿ ಏನೇ ಇದ್ದರೂ ಪತ್ರಿಕೆ ಹಾಕುವವರು ಇಲ್ಲವೆಂದರೆ ಪತ್ರಿಕೆಗಳು ಓದುಗರ ಕೈಗೆ ತಲುಪುವುದಿಲ್ಲ. ಹೀಗಾಗಿ ಪತ್ರಿಕಾ ಕ್ಷೇತ್ರದಲ್ಲಿ ವಿತರಕರ ಕಾರ್ಯ ಅತ್ಯಂತ ಗೌರವಯುತವಾದುದು ಹಾಗೂ ಶ್ರೇಷ್ಠವಾದುದು.
ಪತ್ರಿಕಾ ವಿತರಕರ ದಿನಾಚರಣೆಯಂದು ಪತ್ರಿಕೆ ವಿತರಿಸುವ ಮನಸ್ಸುಗಳನ್ನು, ಪತ್ರಿಕೆ ರವಾನಿಸುವ ಚಾಲಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕೋಟೆನಾಡಿನಲ್ಲಿ ನೂರಾರು ಜನರು ಪತ್ರಿಕೆ ವಿತರಣೆ ಮಾಡುತ್ತಾ ಪತ್ರಕರ್ತರು ಹಾಗೂ ಓದುಗರ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ ಜಿಲ್ಲೆಯಲ್ಲಿ ಮಹಿಳೆಯರು ಕೂಡ ಪತ್ರಿಕೆ ವಿತರಣೆ ಮಾಡುತ್ತಿದ್ದು, ಪತ್ರಿಕಾ ವಿತರಣಾ ಕಾರ್ಯದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಪತ್ರಿಕೆ ವಿತರಿಸುವ ಕೆಲ ಮಹಿಳೆಯರ ಯಶೋಗಾಥೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮದಲ್ಲಿ ‘ಪ್ರಜಾವಾಣಿ’ ಏಜೆಂಟರಾಗಿದ್ದ ರಾಮಣ್ಣ ಅವರು 3 ವರ್ಷಗಳ ಹಿಂದೆ ತೀರಿಕೊಂಡರು. 45 ವರ್ಷಗಳಿಗೂ ಹೆಚ್ಚು ಕಾಲ ಅವರು ಪತ್ರಿಕೆಯ ಜತೆ ಒಡನಾಟ ಹೊಂದಿದ್ದರು. ಅವರು ತೀರಿಕೊಂಡ ನಂತರ ಅವರ ಪತ್ನಿ ಲಕ್ಷ್ಮಿದೇವಿ ಅವರು ಪತ್ರಿಕಾ ವಿತರಣೆ ಕಾಯಕ ಮುಂದುವರಿಸಿದ್ದಾರೆ. ‘ಪ್ರಜಾವಾಣಿ’ ಜೊತೆಗಿನ ಒಡನಾಟ ಬಿಡಲೊಪ್ಪದ ಅವರು ಪ್ರತಿದಿನ ನಸುಕಿನಲ್ಲಿ ಎದ್ದು ಪತ್ರಿಕೆ ವಿತರಣೆ ಮಾಡುತ್ತಾರೆ. ಆ ಮೂಲಕ ಅವರು ‘ಪೇಪರ್ ಲಕ್ಷ್ಮಕ್ಕ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಓದು, ಬರಹ ಗೊತ್ತಿಲ್ಲದ ಲಕ್ಷ್ಮಿದೇವಿ ಅವರು ‘ಪ್ರಜಾವಾಣಿ’ ಪತ್ರಿಕೆ ಜೊತೆಗೆ ‘ಡೆಕ್ಕನ್ ಹೆರಾಲ್ಡ್’, ‘ಸುಧಾ’, ‘ಮಯೂರ’ ಬಗ್ಗೆಯೂ ಅಪಾರ ತಿಳಿವಳಿಕೆ ಹೊಂದಿದ್ದಾರೆ. ಯುವಜನರು ಪತ್ರಿಕೆ ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಾರೆ. ಕಳೆದ 3 ವರ್ಷಗಳಿಂದ ಯರಬಳ್ಳಿ ಭಾಗದಲ್ಲಿ ಜನರ ಪ್ರೀತಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿರುವ ಎಸ್.ಮಂಜುಳಾ ಅವರು ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರಿಗೆ ಪತ್ರಿಕೆಗಳ ಮೇಲೆ ವಿಶೇಷ ಆಸಕ್ತಿ ಹುಟ್ಟಿದೆ. ನಸುಕಿಗೆ ಎದ್ದು ವ್ಯಾನ್‌ನಲ್ಲಿ ಬರುವ ಪತ್ರಿಕೆ ಸ್ವೀಕಾರ ಮಾಡಿ 7 ಗಂಟೆಯೊಳಗೆ ಪತ್ರಿಕೆ ವಿತರಣೆ ಮಾಡಿ ಮುಗಿಸುತ್ತಾರೆ. ನಂತರ ಗ್ರಂಥಾಲಯಕ್ಕೆ ತೆರಳಿ ತಮ್ಮ ಕರ್ತವ್ಯದಲ್ಲಿ ನಿರತರಾಗುತ್ತಾರೆ.
ಮಂಜುಳಾ ಅವರು ನಿತ್ಯ ಹಲವು ಪತ್ರಿಕೆ ಓದುತ್ತಾರೆ. ಪತ್ರಿಕೆಯಲ್ಲಿ ಬರುವ ವರದಿಗಳ ಬಗ್ಗೆ ಓದುಗರ ಜತೆ ಚರ್ಚೆ ಮಾಡುತ್ತಾರೆ. ಆ ಮೂಲಕ ಓದುಗ ವಲಯದಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ರಿಕಾ ವಿತರಣೆ ಕಾರ್ಯಕ್ಕೆ ಮನೆಯವರ ಸಹಕಾರವೂ ಇರುವ ಕಾರಣ ಬಹಳ ಪ್ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಗ್ರಾಮಸ್ಥರು ಕೂಡ ಮಂಜುಳಾ ಅವರ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಶ್ರೀರಾಂಪುರ ಹೋಬಳಿ, ಬೆಲಗೂರು ಗ್ರಾಮದ ಸೌಭಾಗ್ಯಮ್ಮ ಅವರು ಪತ್ರಿಕೆ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಪ್ರಜಾವಾಣಿ ಸೇರಿ ಹಲವು ಪತ್ರಿಕೆಗಳನ್ನು ಬೆಲಗೂರು, ತಂಡಗ, ಕುರುಬರಹಳ್ಳಿ, ತಾರೀಕೆರೆ ಹಾಗೂ ಕಬ್ಬಳ ಗ್ರಾಮಗಳಿಗೆ ವಿತರಣೆ ಮಾಡುತ್ತಾರೆ.
‘ನಿತ್ಯ ಬೆಳಿಗ್ಗೆ ಬೇಗ ಏಳುವುದು ಕಾಯಕವಾಗಿತ್ತು. ಮನೆಯಲ್ಲಿ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲದೇ ಪತ್ರಿಕೆ ವಿತರಣಾ ಕಾರ್ಯದಲ್ಲಿ ತೊಡಗಿಕೊಂಡು ಸಣ್ಣದಾಗಿ ಕಾಯಕ ಆರಂಭಿಸಿದೆ. ಇಂದು ಅದೇ ನನ್ನ ಬದುಕಿನ ಭರವಸೆಯಾಗಿದೆ. ಈ ಕಾಯಕದಲ್ಲಿ ನೆಮ್ಮದಿಯುತ ಬದುಕು ನನ್ನದಾಗಿದೆ’ ಎಂದು ಸೌಭಾಗ್ಯಮ್ಮ ಹೆಮ್ಮೆಯಿಂದ ಹೇಳುತ್ತಾರೆ.
ಹೊಸದುರ್ಗ ತಾಲ್ಲೂಕಿನ ದಳವಾಯಿಕಟ್ಟೆ, ಜಿ.ಎಂ.ಪಾಳ್ಯ ಗ್ರಾಮಗಳಲ್ಲಿ ಪತ್ರಿಕೆ ಹಾಕುವ ಎನ್.ರೇಣುಕಾ 15 ವರ್ಷಗಳಿಂದಲೂ ಕಾಯಕ ನಿಷ್ಠೆ ಮೆರೆದಿದ್ದಾರೆ. ದಳವಾಯಿಕಟ್ಟೆಯಲ್ಲಿ ಪತ್ರಿಕೆ ಹಾಕಿ ನಂತರ ಜಿ.ಎಂ.ಪಾಳ್ಯಕ್ಕೆ ನಡೆದುಕೊಂಡೇ ತೆರಳಿ ಪತ್ರಿಕೆ ಹಾಕಿ ಬರುತ್ತಾರೆ. ಆ ಮೂಲಕ ಆ ಭಾಗದಲ್ಲಿ ಉತ್ತಮ ಹೆಸರು ಪಡೆದಿದ್ದಾರೆ.
ಚಿತ್ರದುರ್ಗದ ಆರ್.ಎಂ.ಅಭಿನಯಾ ಅವರು ಖಾಸಗಿ ಕ್ಲಿನಿಕ್‌ವೊಂದರಲ್ಲಿ ಲ್ಯಾಬ್ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್‌ಸಿ ಪದವಿ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ಇವರು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ. ಅಣ್ಣ ಸುನೀಲ್ ಕುಮಾರ್ ಅವರ ಹೆಸರಿನಲ್ಲಿದ್ದ ಏಜೆನ್ಸಿಯನ್ನು ತಾವೇ ನಡೆಸುತ್ತಿದ್ದಾರೆ. ಟೀಚರ್ಸ್ ಕಾಲೊನಿ ಜಡ್ಜ್‌ಸ್ ಕ್ವಾರ್ಟರ್ಸ್ ಜಿಲ್ಲಾ ಪಂಚಾಯಿತಿ ಕಚೇರಿಗಳು ಪೊಲೀಸ್ ಕಾಲೊನಿಯಲ್ಲಿ 150 ಪ್ರತಿಗಳನ್ನು ಹಾಕುತ್ತಿದ್ದಾರೆ. ಮೊದಲು ಅವರು ಸೈಕಲ್‌ನಲ್ಲೇ ತೆರಳಿ ಪತ್ರಿಕೆ ವಿತರಣೆ ಮಾಡುತ್ತಿದ್ದರು. ಈಗ ಸ್ಕೂಟರ್ ಖರೀದಿ ಮಾಡಿದ್ದು ನಿತ್ಯ ಪತ್ರಿಕೆ ವಿತರಣೆ ಮಾಡಿ ಕಾಲೇಜಿಗೆ ತೆರಳುತ್ತಾರೆ. ನಂತರ ಖಾಸಗಿ ಕ್ಲಿನಿಕ್‌ಗೆ ತೆರಳಿ ತಮ್ಮ ಎಂದಿನ ಕಾಯಕ ಮಾಡುತ್ತಾರೆ. ‘ನಮ್ಮ ತಾಯಿ ಮಂಜುಳಾ ಅವರು ಸ್ವಾವಲಂಬಿಯಾಗಿ ಬದುಕುವ ಪಾಠ ಕಲಿಸಿದ್ದಾರೆ. ಸಮಯ ವ್ಯರ್ಥ ಮಾಡದೇ ಸಿಗುವ ಸಣ್ಣ ಅವಧಿಯನ್ನೂ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪತ್ರಿಕೆ ಹಾಕುತ್ತಿದ್ದೇನೆ. ಪತ್ರಿಕೆ ವಿತರಣೆ ಕಾಯಕದಲ್ಲಿ ಸಾಕಷ್ಟು ಧೈರ್ಯ ಕಲಿತಿದ್ದೇನೆ’ ಎಂದು ಅಭಿನಯಾ ಹೇಳಿದರು.
ಕೆ.ಕೆಂಚಪ್ಪಕೆ.ತೋಂಟ ದಾರ್ಯಎಂ.ಎನ್.ನಾಗರಾಜ್‌ಕೆ.ಎಂ.ಕಲ್ಯಾಣ್ ಕುಮಾರ್‌ಪ್ರಶಾಂತ್ ರಾಜ್‌ಎನ್.ವೀರೇಶ್‌ಎಸ್.ಆರ್.ಸಿದ್ದಯ್ಯ
ಕಳೆದ 20 ವರ್ಷದಿಂದ ಪತ್ರಿಕೆ ವಿತರಕನಾಗಿ ಪ್ರಜಾವಾಣಿ ಹಂಚಿಕೆ ಮಾಡುತ್ತಿದ್ದೇನೆ. ಆರಂಭದಲ್ಲಿ ವಿದ್ಯಾರ್ಥಿಯಾಗಿ ಪತ್ರಿಕಾ ವಿತರಣಾ ರಂಗಕ್ಕೆ ಬಂದು ಇಂದು ಎಲ್ಲಾ ರೀತಿಯ ವ್ಯಾವಹಾರಿಕ ಜ್ಞಾನವನ್ನು ಪತ್ರಿಕೆ ವಿತರಕನಾಗಿ ಪಡೆದಿದ್ದೇನೆ. ಸಮಾಜದಲ್ಲಿ ಉತ್ತಮ ಸ್ಥಾನ ಮತ್ತು ಗೌರವವನ್ನು ಪತ್ರಿಕಾ ರಂಗ ತಂದು ಕೊಟ್ಟಿದೆ. ಇಂದು ಪತ್ರಿಕಾ ವಿತರಕರ ಕೊರತೆ ತುಂಬಾ ಇದೆ. ಆದರೂ ಅದನ್ನು ನಿಭಾಯಿಸಿ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ.
ಪ್ರಶಾಂತ್ ರಾಜ್, ಚಿತ್ರದುರ್ಗ
ಪತ್ರಿಕೆ ವಿತರಣೆಯಿಂದ ಗೌರವ ಹೆಚ್ಚಾಗಿದೆ. 20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿರುವ ಕಾರಣ ಆರೋಗ್ಯವೂ ಚೆನ್ನಾಗಿದೆ. ಮೊದಲು ಕಾಲ್ನಡಿಗೆಯಲ್ಲೇ ಪತ್ರಿಕೆ ವಿತರಿಸುತ್ತಿದ್ದೆ. ನಂತರ ಸೈಕಲ್ ಬಳಸಿದೆ. ಉತ್ತಮ ಆರೋಗ್ಯಕ್ಕೆ ಪತ್ರಿಕಾ ವಿತರಣೆ ಔಷಧಿಯಾಗಿದೆ. ಮಲ್ಲಾಡಿಹಳ್ಳಿ, ಕೆಂಗುಂಟೆ ಗ್ರಾಮಗಳಿಗೆ ಪತ್ರಿಕೆ ವಿತರಿಸುತ್ತಿದ್ದೇನೆ.
ಎಂ.ಎನ್.ನಾಗರಾಜ್,ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು
ವೃತ್ತಿ ಗೌರವ ತಂದುಕೊಟ್ಟಿರುವ ಜೊತೆಯಲ್ಲಿ ಜನಸಂಪರ್ಕದ ಕೊಂಡಿಯಾಗಿ ಪತ್ರಿಕಾ ವಿತರಣೆ ಕೆಲಸದಿಂದ ಅನುಕೂಲವಾಗಿದೆ. ಸಮಾಜದಲ್ಲಿ ಬೆಳವಣಿಗೆ ಕಾಣಲು ಪತ್ರಿಕೆ ಬೆನ್ನೆಲುಬು ರೀತಿಯಲ್ಲಿ ಸಹಕರಿಸಿದೆ. ವಿತರಕನಾಗಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ. ಸಮಾಜದ ಅಂಕು ಕೊಂಡು ತಿದ್ದುವ ಪತ್ರಿಕೆ ಕಾರ್ಯದಲ್ಲಿ ನನ್ನದು ಸ್ವಲ್ಪ ಅಳಿಲು ಸೇವೆ ಆಗುತ್ತಿರುವ ಸಮಾಧಾನವಿದೆ
ಕೆ.ಕೆಂಚಪ್ಪ, ಮೊಳಕಾಲ್ಮುರು
ಹೊಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ಕಂಚಿಪುರ ಹಾಗೂ ಚಿಕ್ಕಬ್ಯಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ 29 ವರ್ಷಗಳಿಂದಲೂ ಪ್ರಜಾವಾಣಿ ವಿತರಣೆ ಮಾಡುತ್ತಿದ್ದೇನೆ. ತಂದೆ ಮಾಡುತ್ತಿದ್ದ ಕಾಯಕವನ್ನೇ ಮುಂದುವರಿಸುತ್ತಿದ್ದೇನೆ. ಸೈಕಲ್‌ನಿಂದಾಗಿ ಆರಂಭವಾದ ಪತ್ರಿಕೆ ವಿತರಿಸುವ ಕಾಯಕ ಇಂದು ಬೈಕ್‌ನಲ್ಲಿ ಸಾಗುತ್ತಿದೆ.
ಕೆ.ತೊಂಟದಾರ್ಯ, ಕಂಚಿಪುರ, ಹೊಸದುರ್ಗ ತಾಲ್ಲೂಕು
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಗಡಿ ಗ್ರಾಮ ಮೊನ್ನೆಕೋಟೆಯಲ್ಲಿ 12 ವರ್ಷ ದಿಂದ ಪ್ರಜಾವಾಣಿ ಪತ್ರಿಕೆ ವಿತರಿಸುತ್ತಿದ್ದೇನೆ. ಪತ್ರಿಕೆ ಹಂಚುವ ಕೆಲಸ ತುಂಬಾ ತೃಪ್ತಿ ತಂದಿದೆ. ಇದನ್ನು ಸಮಾಜ ಸೇವೆ ಎಂದು ಭಾವಿಸಿದ್ದೇನೆ. ಪತ್ರಿಕೆ ಹಂಚುವ ಕಾರ್ಯದಿಂದ ಗ್ರಾಮದಲ್ಲಿ ಒಂದಿಷ್ಟು ಓದುಗರು ಸೃಷ್ಟಿಯಾಗಿದ್ದಾರೆ. ಇದೇ ನನಗೆ ಹೆಮ್ಮೆ.
ಎನ್.ವೀರೇಶ್, ಚಳ್ಳಕೆರೆ ತಾಲ್ಲೂಕು
ಸಾಧಾರಣ ಅಂಗಡಿ ಇಟ್ಟುಕೊಂಡಿದ್ದ ನಾನು ಈಗ ಪೇಪರ್ ಸಿದ್ದಯ್ಯನಾಗಿದ್ದೇನೆ. ಊರಿನ ಜನರು ನನ್ನನ್ನು ಪೇಪರ್ ಸಿದ್ದಯ್ಯ ಅಂತಲೇ ಕರೆಯುತ್ತಾರೆ. ಪತ್ರಿಕೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮೆಚ್ಚುಗೆಯಾಗಿದೆ. ಈ ವೃತ್ತಿ ಮೂಲಕ ಜನರಲ್ಲಿ ಪತ್ರಿಕೆ ಓದುವ ಆಸಕ್ತಿ ಬೆಳೆಸುತ್ತಿರುವ ನೆಮ್ಮದಿಯೂ ಇದೆ.
ಎಸ್.ಆರ್. ಸಿದ್ದಯ್ಯ, ಸಿರಿಗೆರೆ
ಮಂದ ದೃಷ್ಟಿ, ಅಸ್ಪಷ್ಟವಾಗಿ ಕೇಳಿಸುವ ಕಿವಿಗಳು ನನ್ನ ಬದುಕಿನ ಭಾಗವಾಗಿದೆ. ಈ ದೋಷವಿದ್ದರೂ ನಾನು ಹತಾಶನಾಗಿಲ್ಲ. ಶಿಸ್ತು, ಸಂಯಮ ಜವಾಬ್ದಾರಿಯಿಂದ 37 ವರ್ಷಗಳಿಂದ ಪತ್ರಿಕಾ ವಿತರಣಾ ವೃತ್ತಿ ಮಾಡುತ್ತಿದ್ದೇನೆ. ಮುಂಜಾನೆ ಬೇಗನೆ ಏಳುವುದರಿಂದ ನನಗೆ ಶಿಸ್ತು ರೂಢಿಯಾಗಿದೆ. ಈ ಕೆಲಸ ನನಗೆ ಉತ್ತಮ ಬದುಕು ನೀಡಿದೆ.
ಕೆ.ಎಂ.ಕಲ್ಯಾಣ್ ಕುಮಾರ್, ನಾಯಕನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.