
ಚಿತ್ರದುರ್ಗ: ಹುಚ್ಚಾಸ್ಪತ್ರೆಯ ರೋಗಿಗಳೆಲ್ಲರೂ ಸೇರಿ ನಾಟಕವಾಡುವ, ನಾಟಕಕ್ಕೆ ನಾಟಕವೇ ಮುಖಾಮುಖಿಯಾಗುವ ‘ಅವತರಣಮ್ ಭ್ರಾಂತಾಲಯಮ್’ ರಂಗಪ್ರಯೋಗ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಯಿತು. ನೀನಾಸಂ ತಿರುಗಾಟ–2025ರ ಕಲಾವಿದರು ಪ್ರೇಕ್ಷಕರನ್ನು ನಗಿಸಲು ನಡೆಸಿದ ಪ್ರಯತ್ನಕ್ಕೆ ಫಲ ದೊರೆಯದಾಯಿತು.
ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಶನಿವಾರ ಪ್ರದರ್ಶನಗೊಂಡ ಬಾನು ಮುಷ್ತಾಕ್ ಅವರ ಕಥೆಯಾಧರಿಸಿದ ‘ಹೃದಯದ ತೀರ್ಪು’ ರಂಗಪ್ರಯೋಗ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಭಾನುವಾರ ನಡೆದ ‘ಅವತರಣಮ್ ಭ್ರಾಂತಾಲಯಮ್ ’ಪ್ರಯೋಗ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿತು. ಅವರ ಮನಮುಟ್ಟಬೇಕು ಎಂಬ ಉದ್ದೇಶದಿಂದ ಕಲಾವಿದರು ಕತೆಯನ್ನು ವೇಗದ ಗತಿಯಲ್ಲಿ, ಉತ್ಸಾಹದ ನಡೆಯಲ್ಲಿ ಕೊಂಡೊಯ್ದರು. ಉತ್ತಮ ಅಭಿನಯ, ಪಂಚಿಂಗ್ ಮೂಲಕ ನಗಿಸಲೆತ್ನಿಸಿದರು. ಆದರೆ, ನಾಟಕದ ತಿರುಳಲ್ಲಿ ಮಿತಿಯಿದ್ದ ಕಾರಣ ಪ್ರೇಕ್ಷಕರ ಮೊಗದಲ್ಲಿ ನಗೆಯುಕ್ಕಲಿಲ್ಲ.
ಈ ಕ್ಷಣ, ಮುಂದೆ, ಮುಂದಿನ ದೃಶ್ಯದಲ್ಲಿ ಇಷ್ಟವಾಗಬಹುದೆಂಬ ನಿರೀಕ್ಷೆಯಿಂದ ಪ್ರೇಕ್ಷಕರು ಕಾದರು. ಆದರೆ ಇಡೀ ನಾಟಕ ಕಸಲು ಮೇಲೊಗರವಾಗಿದ್ದ ಕಾರಣ ಅದರ ವಸ್ತು ಪ್ರೇಕ್ಷಕರ ಮನಸ್ಸು ಮುಟ್ಟಲಿಲ್ಲ. ಕಡೆಗೆ ನಾಟಕ ನೋಡಲು ಬಂದ ಜನರು ಬೇಸರದಿಂದ ಹೊರ ನಡೆಯಬೇಕಾಯಿತು. ಬಹುತೇಕರು ನಾಟಕದ ಅರ್ಧದಲ್ಲೇ ಸಭಾಂಗಣದಿಂದ ತೆರಳಿದರು.
ಜಿ.ಶಂಕರ ಪಿಳ್ಳೆ ಅವರ ಮಲಯಾಳ ಮೂಲವನ್ನು ನಾ.ದಾಮೋದರ ಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ ನಾಟಕ ‘ಅವತರಣಮ್ ಭ್ರಾಂತಾಲಯಮ್’. ಶಂಕರ ವೆಂಕಟೇಶ್ವರನ್ ನಾಟಕದ ನಿರ್ದೇಶಕರು. ಮೊದಲ ನೋಟದಲ್ಲಿ ಇದು ಹುಚ್ಚಾಸ್ಪತ್ರೆಯಲ್ಲಿ ನಡೆಯುವ ನಾಟಕವೆನಿಸಿದರೂ ಇದು ಹುಚ್ಚರ ಕುರಿತಾದ ನಾಟಕವಲ್ಲ. ನಾಟಕದೊಳಗಿನ ನಾಟಕವೇ ಇಲ್ಲಿಯ ಪ್ರಧಾನ ವಸ್ತು.
ನಾಟಕದ ವ್ಯವಸ್ಥಾಪಕ, ಹುಚ್ಚಾಸ್ಪತ್ರೆ ವೈದ್ಯ, ನಿರ್ದೇಶಕ, ನಾಟಕದ ಸಂಭಾಷಣೆ ಹೇಳಿಕೊಡುವ ನರ್ಸ್ ಎಲ್ಲಾ ಪಾತ್ರಗಳು ಗಮನ ಸೆಳೆಯುವಂತಿವೆ. ಮೊಗದಲ್ಲಿ ನಗೆ ತರಿಸುವಂತಿವೆ. ಆದರೆ ನಾಟಕದ ಓಗ, ಬಂಧ ನಗೆ ತರಿಸುವಲ್ಲಿ ವಿಫಲವಾಗುತ್ತದೆ. ನಾಟಕದ ವಸ್ತುವಿನಲ್ಲಿ ನಗು ಇದ್ದರೂ ರಂಗರೂಪದಲ್ಲಿ ನಗುವಿಲ್ಲದಿರುವುದು ಬೇಸರ ತರಿಸುತ್ತದೆ. ಹೀಗಾಗಿ ಪಾಪ, ಕಲಾವಿದರಾದರೂ ಏನು ಮಾಡಿಯಾರು ಎಂಬ ಭಾವನೆ ಮೂಡುತ್ತದೆ.
ವರ್ತಮಾನದ ತಲ್ಲಣಗಳು, ರಾಜಕೀಯ, ಚಳವಳಿ ರೂಪದ ಭ್ರಾಂತಿಗಳೆಲ್ಲವೂ ನಾಟಕದಲ್ಲಿ ಬಂದು ಹೋಗುತ್ತವೆ. ಏನೋ ಒಂದು ಅಸಂಗತ ವಿಚಾರವನ್ನು ಹಿಡಿದಿಡಲು ನಾಟಕ ಯತ್ನಿಸುತ್ತಿದೆ ಎಂದೆನಿಸುತ್ತದೆ. ಆ ಅಸಂಗತ ಸಂಗತಿ ಸಾಮಾನ್ಯ ಪ್ಷೇಕ್ಷಕರಿಗೆ ತಿಳಿಯದೇ ಗೌಜು, ಗದ್ದಲದಲ್ಲೇ ರಂಗಪ್ರಯೋಗ ಮುಗಿದು ಹೋಗುತ್ತದೆ.
ನಾಟಕದ ಆರಂಭದಲ್ಲೇ ರಂಗದ ಮೇಲೆ ಕುರ್ಚಿಗಳನ್ನು ಹಾಕಿ 3–4 ನಿಮಿಷ ಹಾಡೊಂದನ್ನು ಹಾಕಿದ್ದೇ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ನೀನಾಸಂ ನಾಟಕೋತ್ಸವ ಆಯೋಜಕರ ವೇದಿಕೆ ಕಾರ್ಯಕ್ರಮದಿಂದಲೇ ಪ್ರೇಕ್ಷಕರು ಸುಸ್ತಾಗಿರುತ್ತಾರೆ. ಆದರೆ ‘ಅವತರಣಮ್ ಭ್ರಾಂತಾಲಯಮ್ ’ನಾಟಕದೊಳಗಿನ ವೇದಿಕೆ ಕಾರ್ಯಕ್ರಮ ಪ್ಷೇಕ್ಷಕರಿಗೆ ಮತ್ತಷ್ಟು ಬೇಸರ ತರಿಸುತ್ತದೆ. ಅದೂ ಅರ್ಧಗಂಟೆಯ ಒಂದು ದೃಶ್ಯ ಬೇಕಿತ್ತಾ ಎಂಬ ಪ್ರಶ್ನೆ ಮೂಡುತ್ತದೆ. ಆರಂಭದಲ್ಲೇ ಜನರ ಮೊಗದಲ್ಲಿ ಬೇಸರದ ಗೆರೆ ಮೂಡುತ್ತವೆ. ಅಲ್ಲಿಯ ಸ್ವಾಗತ, ವಂದನಾರ್ಪಣೆಗಳು ಜನರನ್ನು ಹೈರಾಣಾಗಿಸುತ್ತವೆ.
2 ಗಂಟೆಯ ಕಾಲ ನಾಟಕದ ವಸ್ತು ಅರ್ಥವಾದರೂ ರಂಗರೂಪದ ಬಂಧ ಪ್ರೇಕ್ಷಕರನ್ನು ಹಿಡಿದಿಡುವುದಿಲ್ಲ. ಈ ನಾಟಕದ ಒಟ್ಟು ಅವಧಿಯನ್ನು ಕಡಿತ ಮಾಡಿಕೊಂಡರೆ ಬಹಳ ಒಳ್ಳೆಯದು ಎಂಬ ಅಭಿಪ್ರಾಯ ನೋಡುಗರಲ್ಲಿ ಮೂಡುತ್ತದೆ. ‘ರಂಗಪ್ರಯೋಗವೊಂದರಿಂದ ಒಟ್ಟಾರೆ ನೀನಾಸಂ ನಾಟಕಗಳ ಗುಣಮಟ್ಟ ಅಳೆಯಲು ಸಾಧ್ಯವಿಲ್ಲ. ಈ ನಾಟಕವನ್ನು ತಿದ್ದಿಕೊಳ್ಳಲು ಸಾಕಷ್ಟು ಅವಕಾಶಗಳಿವೆ’ ಎಂದು ನಾಟಕೋತ್ಸವದ ಆಯೋಜಕ, ನೀನಾಸಂ ಪದವೀಧರ ಗಣೇಶಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.