ADVERTISEMENT

ವಿಮಾ ಕಂಪನಿಗಳಿಗೆ ಲಾಭ, ರೈತರಿಗೆ ನಷ್ಟ

ಅಧಿಕಾರಿಗಳು– ರೈತ ಮುಖಂಡರ ಸಭೆ; ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:55 IST
Last Updated 27 ಜೂನ್ 2025, 15:55 IST
ಹಿರಿಯೂರಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ರೈತ ಮುಖಂಡರ ಕುಂದು ಕೊರತೆ ಸಭೆಯಲ್ಲಿ ರೈತರು ತಮ್ಮ ಅಹವಾಲು ಹೇಳಿಕೊಂಡರು 
ಹಿರಿಯೂರಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ರೈತ ಮುಖಂಡರ ಕುಂದು ಕೊರತೆ ಸಭೆಯಲ್ಲಿ ರೈತರು ತಮ್ಮ ಅಹವಾಲು ಹೇಳಿಕೊಂಡರು    

ಹಿರಿಯೂರು: ‘ಬೆಳೆವಿಮೆ ನಿಗದಿ ಪಡಿಸುವಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು ವಿಮಾ ಕಂಪನಿಗೆ ಲಾಭ ತಂದು ಕೊಡುತ್ತಿವೆ. ಕಂತು ಪಾವತಿಸಿದ ರೈತನಿಗೆ ನಷ್ಟ ಉಂಟು ಮಾಡುತ್ತಿವೆ’ ಎಂದು ರೈತ ಮುಖಂಡರು ಆರೋಪಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅಧ್ಯಕ್ಷತೆಯಲ್ಲಿ ನಡೆದ 34 ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರ ಕುಂದು ಕೊರತೆ ಸಭೆಯಲ್ಲಿ ರೈತರು ತಮ್ಮ ಅಹವಾಲು ಹೇಳಿಕೊಂಡರು.

‘ಕೃಷಿ ಇಲಾಖೆಯು ಗ್ರಾಮ ಪಂಚಾಯಿತಿಯೊಂದಕ್ಕೆ ಪ್ರಮುಖ ಬೆಳೆಯಾಗಿ ಒಂದು ಬೆಳೆಯನ್ನು ಆಯ್ಕೆ ಮಾಡುತ್ತದೆ. ಆದರೆ, ಬೇರೆ ಬೇರೆ ಬೆಳೆಗಳನ್ನು ರೈತರು ಬೆಳೆದಿದ್ದು ಎಲ್ಲಾ ಬೆಳೆಗಳಿಗೂ ವಿಮಾ ಕಂತು ಪಾವತಿಸುತ್ತಾರೆ. ಸರ್ಕಾರ ವಿಮಾ ಕಂತು ಪಾವತಿಸಿದ ಎಲ್ಲಾ ಬೆಳೆಗಳಿಗೂ ವಿಮೆ ಹಣ ಬಿಡುಗಡೆ ಮಾಡುತ್ತದೆ. ಆದರೆ ವಿಮಾ ಕಂಪನಿಯವರು ಒಂದು ಬೆಳೆಗೆ ಮಾತ್ರ ವಿಮಾ ಪರಿಹಾರ ವಿತರಿಸುತ್ತಾರೆ. ಬೆಳೆ ನಷ್ಟವಾದಲ್ಲಿ ವಿಮಾ ಕಂತು ಪಾವತಿಸಿದ ರೈತರ ಎಲ್ಲಾ ಬೆಳೆಗಳಿಗೂ ಕಂಪನಿ ಪರಿಹಾರ ನೀಡಿದಲ್ಲಿ ಮಾತ್ರ ನ್ಯಾಯ ದೊರೆತಂತಾಗುತ್ತದೆ’ ಎಂದು ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಸಲಹೆ ನೀಡಿದರು.

ADVERTISEMENT

‘ಕೃಷಿ ಇಲಾಖೆಯಲ್ಲಿ ಪರಿಕರಗಳ ಮೇಲೆ ನೀಡುತ್ತಿರುವ ಸಹಾಯಧನದಿಂದ ಕಂಪನಿಗೆ ಮತ್ತು ಏಜೆಂಟರಿಗೆ ಮಾತ್ರ ಲಾಭವಾಗುತ್ತಿದೆ. ಮುಕ್ತ ಮಾರುಕಟ್ಟೆ ಬೆಲೆಗಿಂತ ಇಲ್ಲಿನ ದರ ಶೇ 10ರಿಂದ 15ರಷ್ಟು ವ್ಯತ್ಯಾಸವಿರುತ್ತದೆ. ಆದರೆ  ಶೇ 50 ರಿಯಾಯಿತಿ ಎಂದು ಹೇಳುತ್ತಾರೆ.  ರಿಯಾಯಿತಿ ಹಣವನ್ನು ರೈತರ ಖಾತೆಗೆ ಜಮಾ ಮಾಡಿದಲ್ಲಿ ರೈತರೇ ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುತ್ತಾರೆ’ ಎಂದರು.

‘ತೋಟಗಾರಿಕೆ ಬೆಳೆ ವಿಮೆಯಲ್ಲಿ ಹವಾಮಾನದ ಆಧಾರದಲ್ಲಿ ವಿಮೆ ನೀಡುತ್ತಿದ್ದು ಮಳೆ, ಬಿಸಿಲು, ಗಾಳಿ ಇವುಗಳನ್ನು ಮಾಪನ ಮೂಲಕ ಅಳೆಯಬಹುದು. ಆದರೆ ರೋಗ ಬಾಧೆಯಿಂದ ತೋಟ ಹಾಳಾದರೆ ಯಾವ ಮಾಪನದಿಂದ ಅಳೆಯಲು ಸಾಧ್ಯ? 2022ರಲ್ಲಿ ನಿರೀಕ್ಷೆಗೆ ಮೀರಿದ ಮಳೆ ಸುರಿದು ಅಡಿಕೆ ತೋಟಗಳಿಗೆ ಕೊಳೆ ರೋಗ ತಗುಲಿ ನೂರಾರು ಎಕರೆಯಲ್ಲಿನ ತೋಟಗಳು ಹಾಳಾಗಿದ್ದವು.  ರೋಗಪೀಡಿತ ತೋಟಗಳಿಗೂಗು ಬೆಳೆ ವಿಮೆ ಕೊಡಬೇಕು’ ಎಂದು ಅವರು ಆಗ್ರಹಿಸಿದರು.

‘ವಿದ್ಯುತ್‌ ಪರಿವರ್ತಕಗಳು ಸುಟ್ಟರೆ 74 ಗಂಟೆಗಳಲ್ಲಿ ಕೊಡಬೇಕೆಂಬ ನಿಯಮವಿದೆ. ಆದರೆ ಬೆಸ್ಕಾಂ ಇಲಾಖೆಯವರು 15–20 ದಿನಗಳಾದರೂ ಪರಿವರ್ತಕ ಕೊಡುತ್ತಿಲ್ಲ. ನಮ್ಮ ತಾಲ್ಲೂಕಿನಲ್ಲಿ ಕನಿಷ್ಠ 18–20 ಸಾವಿರ ಪರಿವರ್ತಕಗಳಿದ್ದು, ಕೇವಲ ಒಂದೇ ಒಂದು ರಿಪೇರಿ ಕೇಂದ್ರವಿದೆ. ಖಾಸಗಿಯವರಲ್ಲಿ ಪರಿವರ್ತಕ ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು, ದುರಸ್ತಿ ಖರ್ಚು ನೀಡಬೇಕು’ ಎಂದು ತಿಪ್ಪೇಸ್ವಾಮಿ ಮನವಿ ಮಾಡಿದರು.

‘ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬಡರೋಗಿಗಳ ಗೋಳು ಕೇಳುವವರಿಲ್ಲ.  ಖಾಸಗಿ ನರ್ಸಿಂಗ್ ಹೋಂಗಳಿಗೆ ರೋಗಿಗಳು ಹೋಗುವಂತೆ ಮಾಡುತ್ತಾರೆ. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೆ ಸಕಾಲಕ್ಕೆ ವೈದ್ಯರು ಹೋಗುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಆಸ್ಪತ್ರೆಗಳಿಗೆ ಆಗಾಗ್ಗೆ ಅಚ್ಚರಿಯ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ತಾಲ್ಲೂಕು ರೈತಸಂಘದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಸೂಚಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆ ವಿಫಲವಾಗಿದೆ. ಹಲವು ಬಾರಿ ಹೋರಾಟ ಮಾಡಿದರೂ ಅಧಿಕಾರಿಗಳ ಧೋರಣೆ ಬದಲಾಗಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು‘ ಎಂದು ರೈತ ಮುಖಂಡರು ಆಗ್ರಹಿಸಿದರು.

ಉಪ ವಿಭಾಗ ಅಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ ‘ಸರ್ಕಾರದ ಯಾವುದೇ ಇಲಾಖೆ ಇರಲಿ, ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು.ರೈತರು ನೆಮ್ಮದಿಯಿಂದ ಇದ್ದರೆ ಸಮಾಜ ನೆಮ್ಮದಿಯಿಂದ ಇರುತ್ತದೆ’ ಎಂದರು.

ಸಭೆಯಲ್ಲಿ ರೈತ ಮುಖಂಡರಾದ ಕೆ.ಸಿ.ಹೊರಕೇರಪ್ಪ, ತಿಮ್ಮಾರೆಡ್ಡಿ, ಸಣ್ಣತಿಮ್ಮಣ್ಣ, ವೆಂಕಟೇಶ್, ವೀರಣ್ಣಗೌಡ, ಲಕ್ಷ್ಮಿಕಾಂತ್, ಮೀಸೆ ರಾಮಣ್ಣ, ಗೌಡಪ್ಪ, ನಾಗರಾಜ್, ರಂಗಸ್ವಾಮಿ, ಮಂಜನಾಯಕ್, ರಾಮಕೃಷ್ಣ, ವಿರುಪಾಕ್ಷಪ್ಪ, ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.