
ಚಿತ್ರದುರ್ಗ: ಉತ್ತಮ ಗುಣಮಟ್ಟದಿಂದ ದೇಶದಾದ್ಯಂತ ಗಮನ ಸೆಳೆಯುತ್ತಿದ್ದ ‘ದುರ್ಗದ ಈರುಳ್ಳಿ’ ಈಗ ತಿಪ್ಪೆಯ ಪಾಲಾಗುತ್ತಿದೆ.
ಆಗಸ್ಟ್ ನಂತರ ಸತತ ಸುರಿದ ತುಂತುರು ಮಳೆಗೆ ಸಿಲುಕಿ ಇಳುವರಿ, ರುಚಿ, ಗುಣಮಟ್ಟ, ದರ ಕಳೆದುಕೊಂಡ ಈರುಳ್ಳಿಯನ್ನು ಬೆಳೆಗಾರರು ತಿಪ್ಪೆಗೆ ಚೆಲ್ಲುತ್ತಿದ್ದಾರೆ.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಾಜ್ಯ, ಹೊರರಾಜ್ಯ, ಬಾಂಗ್ಲಾದೇಶ ಸೇರಿದಂತೆ ಅಕ್ಕಪಕ್ಕದ ದೇಶಕ್ಕೂ ದುರ್ಗದ ಈರುಳ್ಳಿ ರಫ್ತಾಗುತ್ತಿತ್ತು. ಆದರೆ ಅಕಾಲಿಕ ಮಳೆಗೆ ಸಿಲುಕಿ ಸೊರಗಿ ಗುಣಮಟ್ಟ ಕಳೆದುಕೊಂಡಿದ್ದು ಹೊರ ಜಿಲ್ಲೆ, ಹೊರರಾಜ್ಯಗಳಿಗೆ ಈರುಳ್ಳಿ ಕಳುಹಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿ ರೈತರು ನಷ್ಟಕ್ಕೀಡಾಘಗಿದ್ದಾರೆ.
ಕೆಲವು ರೈತರು ಈರುಳ್ಳಿಯನ್ನು ತಿಪ್ಪೆಗೆ ಸುರಿದರೆ, ಇನ್ನು ಕೆಲವರು ಮನೆಗೆ ತಾರದೆ ಹೊಲದಲ್ಲೇ ಮಣ್ಣಾಗುವಂತೆ ಮಾಡಿದ್ದಾರೆ. ಗುಣಮಟ್ಟದ ಈರುಳ್ಳಿಗೆ ಈಗಲೂ ಉತ್ತಮ ಬೆಲೆ ಬಂದಿದೆ. ಕ್ವಿಂಟಲ್‌ಗೆ ₹ 2,500ರವೆರೆಗೂ ಮಾರಾಟವಾಗುತ್ತಿದೆ. ಆದರೆ, ಮಳೆಗೆ ಸಿಲುಕಿ ಬಣ್ಣ, ಗುಣಮಟ್ಟ ಕಳೆದುಕೊಂಡ ಈರುಳ್ಳಿಯನ್ನು ವರ್ತಕರು ಕೇಳುತ್ತಿಲ್ಲ.
‘ಮೇನಲ್ಲಿ ಬಿತ್ತನೆ ಮಾಡಿದ ಈರುಳ್ಳಿ ಆಗಸ್ಟ್ ವೇಳೆಗೆ ಕಟಾವಿಗೆ ಬಂತು. ಆಗಸ್ಟ್‌ನಲ್ಲಿ 20 ದಿನ ಸುರಿದ ತುಂತುರು ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಕಡಿಮೆಯಾಯಿತು. ಈರುಳ್ಳಿ ಒಣಗಿಸಲು ಬಿಸಿಲು ಬೇಕು. ಆದರೆ, ನಾವು ತಿಂಗಳ ಕಾಲ ಸೂರ್ಯನನ್ನೇ ನೋಡಲಿಲ್ಲ. ಹೀಗಾಗಿ ಗುಣಮಟ್ಟ ಹಾಳಾಯಿತು’ ಎಂದು ತಾಲ್ಲೂಕಿನ ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿಯ ರೈತ ಟಿ.ಸಂಪತ್‌ಕುಮಾರ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಚಿತ್ರದುರ್ಗ ತಾಲ್ಲೂಕುಗಳ ರೈತರಿಗೆ ಈರುಳ್ಳಿ ಬೆಳೆಯೇ ಆಧಾರ. ವರ್ಷಪೂರ್ತಿ ಈರುಳ್ಳಿ ಬಿಟ್ಟು ಬೇರೆ ಯಾವ ಬೆಳೆಯನ್ನೂ ಬೆಳೆಯುವುದಿಲ್ಲ. ಒಣ ಹವಾಮಾನ ಈರುಳ್ಳಿಗೆ ಹೇಳಿ ಮಾಡಿಸಿದಂತಿತ್ತು. ಬಿಸಿಲನ ಕಾರಣಕ್ಕೆ ಶ್ರೇಷ್ಠ ಗುಣಮಟ್ಟದ ಉತ್ಪನ್ನ ಬಂದು ಉತ್ತಮ ಬೆಲೆಯೂ ಸಿಗುತ್ತಿತ್ತು. ಆದರೆ ಈಚೆಗೆ ಕಟಾವು ಅವಧಿಯಲ್ಲೇ ಮಳೆ ಸುರಿದು, ಹವಾಮಾನ ಬದಲಾಗುತ್ತಿರುವ ಕಾರಣ ಬೆಳೆಗಾರರು ಗೊಂದಲಕ್ಕೆ ಸಿಲುಕಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 20,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. 30 ಲಕ್ಷ ಕ್ವಿಂಟಲ್ ಉತ್ಪನ್ನ ನಿರೀಕ್ಷಿಸಿದ್ದರು. ಶೇ 70ರಷ್ಟು ಮಳೆಗೆ ಸಿಲುಕಿ ಹಾಳಾಗಿದ್ದು ಕೇವಲ ಶೇ 30ರಷ್ಟು ಉಳಿದಿದೆ.
‘ಜೂನ್, ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿದ ರೈತರ ಬೆಳೆ ಮಾತ್ರ ಕೈಗೆ ಸಿಗುತ್ತಿದೆ. ಮೇನಲ್ಲಿ ಬಿತ್ತನೆ ಮಾಡಿದ ಬೆಳೆ ಹಾಳಾಗಿದೆ. ನಮ್ಮಲ್ಲಿ ಶೈತ್ಯಾಗಾರವೂ ಇಲ್ಲದ ಕಾರಣ ಉಳಿಕೆ ಅಲ್ಪಸ್ವಲ್ಪ ಬೆಳೆಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದ ಶೈತ್ಯಾಗಾರಗಳಲ್ಲಿದ್ದ ಈರುಳ್ಳಿ ಈಗ ಮಾರುಕಟ್ಟೆಗಳಿಗೆ ನುಗ್ಗಿದೆ’ ಎಂದು ರೈತಮುಖಂಡ ಧನಂಜಯ ತಿಳಿಸಿದರು.
ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ | ಕಟಾವು ಅವಧಿಯಲ್ಲಿ ಮಳೆ ಸುರಿದು ಸಮಸ್ಯೆ ನಷ್ಟ | ಪರಿಹಾರ ವಿತರಣೆಗೆ ರೈತರ ಒತ್ತಾಯ
ಈರುಳ್ಳಿ ಬೆಳೆಗಾರಿಗೆ ನಷ್ಟ ಪರಿಹಾರ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ವರದಿ ನೀಡಲಾಗಿದೆ. ಇಲಾಖಾ ಪೋರ್ಟಲ್‌ನಲ್ಲಿ ಎಲ್ಲಾ ಮಾಹಿತಿ ಅಪ್ಲೋಡ್ ಮಾಡಲಾಗಿದೆ. ಎನ್‌ಡಿಆರ್‌ಎಫ್ ನಿಧಿಯಿಂದ ಪರಿಹಾರ ಬರಬೇಕಾಗಿದೆಜಿ.ಸವಿತಾ ಜಂಟಿ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.