ಹೊಸದುರ್ಗ ಕಸಬಾ ಹೋಬಳಿಯ ಶ್ರೀರಂಗಾಪುರ ಗ್ರಾಮದಲ್ಲಿ ಈರುಳ್ಳಿ ಕೊಯ್ಲು ಮಾಡುತ್ತಿರುವುದು.
ಹೊಸದುರ್ಗ: ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆ ಕಟಾವು ಆಗಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ದರ ಕುಸಿತದ ಕಾರಣಕ್ಕೆ ಇದೀಗ ಈರುಳ್ಳಿ ಕಣ್ಣೀರು ತರಿಸಿದೆ.
ಕಳೆದ ಕೆಲ ವರ್ಷಗಳಿಂದೆ ರೈತರು ಈರುಳ್ಳಿ ಬೆಳೆಗೆ ಕೊಳೆರೋಗ, ಅತಿವೃಷ್ಟಿ, ಅನಾವೃಷ್ಟಿಯಂತಹ ಸಮಸ್ಯೆಗಳಿಂದ ನಷ್ಟ ಅನುಭವಿಸಿದ್ದರು. ಈ ಬಾರಿ ಬೆಳೆಗೆ ತಕ್ಕ ಬೆಲೆಯಿಲ್ಲದೆ, ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ತಾಲ್ಲೂಕಿನಾದ್ಯಂತ 2,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಕಸಬಾ ಹೋಬಳಿಯಲ್ಲಿ ಈರುಳ್ಳಿ ಬೆಳೆಯ ವ್ಯಾಪ್ತಿ ಹೆಚ್ಚಿದೆ. ಉಳಿಧೆಡೆ ಅಲ್ಪಮಟ್ಟಿಗೆ ಈರುಳ್ಳಿ ಬೆಳೆಯುತ್ತಾರೆ. ಕಸಬಾ ಹೋಬಳಿಯ ಬಾಗೂರು, ನಾಗೇನಹಳ್ಳಿ, ಹೊನ್ನೆಕೆರೆ, ಶ್ರೀರಂಗಾಪುರ, ಐಲಾಪುರ, ಶೆಟ್ಟಿಹಳ್ಳಿ, ಚಿಕ್ಕಯಗಟಿ, ಮಂಟೇನಹಳ್ಳಿ ಸೇರಿದಂತೆ ಹಲವೆಡೆ ಈರುಳ್ಳಿಯು ಮಳೆಯಾಶ್ರಿತ ಬೆಳೆಯಾಗಿದೆ.
ಬೀಜ, ಗೊಬ್ಬರ, ಕಟಾವು, ಚೀಲ, ಮಾರುಕಟ್ಟೆಗೆ ರವಾನೆ ಸೇರಿದಂತೆ ಹತ್ತು ಹಲವು ವೆಚ್ಚಗಳ ಸುಳಿಯಲ್ಲಿ ರೈತರು ಸಿಲುಕಿಕೊಂಡಿದ್ದಾರೆ.
‘ಈರುಳ್ಳಿಗೆ ಉತ್ತಮ ಬೆಲೆಯಿದ್ದರೆ ದಲ್ಲಾಳಿಗಳು ಮನೆ ಬಳಿ ಬಂದು ಖರೀದಿಸುತ್ತಾರೆ. ಆದರೀಗ ದರ ಕುಸಿತದ ಕಾರಣಕ್ಕೆ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ. ಬೆಂಗಳೂರಿನ ಮಾರುಕಟ್ಟೆಗೆ ಈರುಳ್ಳಿಯನ್ನು ಒಯ್ದರೆ ಪ್ಯಾಕೆಟ್ (50- 60 ಕೆ.ಜಿ) ₹ 300 ರಿಂದ ₹ 500 ದರ ಇದೆ. ಪ್ಯಾಕೆಟ್ ಈರುಳ್ಳಿಗೆ ಉತ್ಪಾದನಾ ವೆಚ್ಚವೇ ₹1,000 ತಗಲುತ್ತದೆ’ ಎಂದು ಶ್ರೀರಂಗಾಪುರ ರೈತ ಜೆ. ಕುಮಾರ್ ಅಳಲು ತೋಡಿಕೊಂಡರು.
‘ಎಕರೆಗೆ ₹35,000 ರಿಂದ ₹40,000 ವ್ಯಯಿಸಲಾಗಿದೆ. ಮಳೆಯೂ ಸಮಯಕ್ಕೆ ಸರಿಯಾಗಿ ಬಂದಿಲ್ಲ. ಮುಂಗಾರಿನಲ್ಲಿ ಸಾವೆ, ಹಿಂಗಾರಿನಲ್ಲಿ ರಾಗಿ ಮಳೆಯಿಲ್ಲದೆ ಒಣಗಿ ಹೋಗಿದೆ. ಈರುಳ್ಳಿ ಬೆಳೆಯ ಆದಾಯ ಕೈ ಸೇರಿಲ್ಲ. ಹೀಗಾದರೆ ರೈತರ ಪರಿಸ್ಥಿತಿ ಏನಾಗಬಹುದು. ಕೆಲ ರೈತರು ಈರುಳ್ಳಿ ಕೊಯ್ಲು ಮುಗಿಸಿ, ಬೆಲೆ ಏರಿಕೆಯಾಗಬಹುದೆಂದು ಅಂದಾಜಿಸಿ ಈರುಳ್ಳಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ’ ಎಂದು ಬಾಗೂರಿನ ಪ್ರಗತಿಪರ ರೈತ ವೆಂಕಟೇಶ್ ಹೇಳಿದರು.
ಸರ್ಕಾರ ಈರುಳ್ಳಿ ಬೆಳೆಗೆ ಕ್ವಿಂಟಲ್‌ಗೆ ಕನಿಷ್ಠ ₹1,500 ಬೆಂಬಲ ಬೆಲೆ ಘೋಷಿಸಬೇಕು. ಈರುಳ್ಳಿ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು.ವೆಂಕಟೇಶ್, ರೈತ, ಬಾಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.