ADVERTISEMENT

ಹಿರಿಯೂರು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ: ಕೋವಿಡ್‌ ಸೋಂಕಿತ ಸಾವು

​ಪ್ರಜಾವಾಣಿ ವಾರ್ತೆ
Published 13 ಮೇ 2021, 7:55 IST
Last Updated 13 ಮೇ 2021, 7:55 IST
ಕೋವಿಡ್‌ ಪೀಡಿತ ವ್ಯಕ್ತಿ ಮೃತಪಟ್ಟಿರುವುದು
ಕೋವಿಡ್‌ ಪೀಡಿತ ವ್ಯಕ್ತಿ ಮೃತಪಟ್ಟಿರುವುದು   

ಚಿತ್ರದುರ್ಗ: ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಮ್ಲಜನಕ ಸಿಗದೇ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮೃತಪಟ್ಟಿದ್ದಾರೆ.

ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ರಾಮಪ್ಪ (70) ಮೃತಪಟ್ಟವರು. ಆಮ್ಲಜನಕದ ಕೊರತೆ ಇರುವ ಕಾರಣಕ್ಕೆ ವೆಂಟಿಲೇಟರ್ ಹಾಸಿಗೆ ಸಿಗಲಿಲ್ಲ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಗೆ ನಿತ್ಯ ಏಳು ಸಾವಿರ ಲೀಟರ್‌ ಆಮ್ಲಜನಕದ ಅಗತ್ಯವಿದೆ. ಆದರೆ, ಆರು ಸಾವಿರ ಲೀಟರ್‌ ಮಾತ್ರ ಪೂರೈಕೆ ಆಗುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರದ ಸದರನ್‌ ಏಜೆನ್ಸಿ ಆಮ್ಲಜನಕ ಪೂರೈಕೆ ಮಾಡುವ ಹೊಣೆ ಹೊತ್ತಿದೆ. ಏಜೆನ್ಸಿಯಲ್ಲಿ ಆಮ್ಲಜನಕ ಖಾಲಿ ಆಗಿರುವುದರಿಂದ ಬುಧವಾರ ಸಂಜೆ ಬರಬೇಕಾಗಿದ್ದ ಟ್ಯಾಂಕರ್‌ ಬೆಳಿಗ್ಗೆ 11 ಗಂಟೆಗೂ ಬಂದಿರಲಿಲ್ಲ.

ADVERTISEMENT

‘ಆಮ್ಲಜನಕ ಪೂರೈಕೆ ಆಗುವಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಕೊಂಚ ಆತಂಕ ನಿರ್ಮಾಣವಾಗಿತ್ತು. ಇರುವ ಸಿಲಿಂಡರ್‌ಗಳಲ್ಲಿಯೇ ನಿರ್ವಹಣೆ ಮಾಡಲಾಗಿದೆ. ಎಲ್ಲಿಯೂ ತೊಂದರೆ ಉಂಟಾಗಿಲ್ಲ. ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ರೋಗಿ ಏಕೆ ಮೃತಪಟ್ಟರು ಎಂಬುದನ್ನು ವೈದ್ಯಕೀಯವಾಗಿ ದೃಢಪಡಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ.

ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರು ಖಾಸಗಿ ಆಸ್ಪತ್ರೆಗಳಲ್ಲಿ ಬುಧವಾರ ರಾತ್ರಿ ಆಮ್ಲಜನಕಕ್ಕೆ ತೊಂದರೆ ಉಂಟಾಗಿದೆ. ಕೊರತೆ ಇರುವ ಆಸ್ಪತ್ರೆಗೆ ಇತರೆಡೆಯಿಂದ ಜಂಬೂ ಸಿಲಿಂಡರ್‌ಗಳನ್ನು ರವಾನೆ ಮಾಡಲಾಗಿದೆ. ಇದರಿಂದ ಹಲವು ಆಸ್ಪತ್ರೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಐದು ನಿಮಿಷ ಆಮ್ಲಜನಕ

ಮೃತ ರಾಮಪ್ಪ ಅವರ ಶವದ ಬಳಿ ಮೊಮ್ಮಗಳು ವಸಂತ ಎಂಬುವರು ಸೆಲ್ಫಿ ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ತಾತನಿಗೆ ಕೇವಲ ಐದು ನಿಮಿಷ ಆಮ್ಲಜನಕ ನೀಡಲಾಯಿತು. ಬಳಿಕ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು. ಎಲ್ಲ ಜನಪ್ರತಿನಿಧಿಗಳಿಗೂ ಕರೆ ಮಾಡಿದೆ. ಯಾರೊಬ್ಬರು ಸ್ಪಂದಿಸಿಲ್ಲ’ ಎಂದು ವಿಡಿಯೊದಲ್ಲಿ ಕಿಡಿಕಾರಿದ್ದಾರೆ.‌

ವಸಂತ ಅವರು ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ಈರುಳ್ಳಿ ಮಾರಾಟವಾದರೆ ಸಮಸ್ಯೆಗೆ ಸಿಲುಕಿದ ಪರಿಯನ್ನು ವಿಡಿಯೊ ಮಾಡಿ ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡಿದ್ದರು. ಇದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.