
ಚಿತ್ರದುರ್ಗ: ಶಿವರಾತ್ರಿ ಪ್ರಯುಕ್ತ ಏಳುಸುತ್ತಿನ ಕೋಟೆ ಆವರಣದ ಪಾಲ್ಗುಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸ್ವಾಮಿಗೆ ಅಮರನಾಥ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸ್ಪಟಿಕ ಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಲಾಯಿತು. ಬಳಿಕ ಸೇವಂತಿಗೆ, ಚೆಂಡು, ಪತ್ರೆ ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ಪೋಣಿಸಿದ ಮಾಲೆಯಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಹರ್ಷಿ ಆನಂದ ಗುರೂಜಿ ಶನಿವಾರ ಸ್ವಾಮಿಯ ಮೂರ್ತಿಗೆ ಗಂಗಾ ಜಲ ಮತ್ತು ಶ್ರೀಗಂಧ, ತುಪ್ಪ, ಕ್ಷೀರ ಸೇರಿದಂತೆ ಮತ್ತಿತರ ವಸ್ತುಗಳಿಂದ ವಿಶೇಷ ಅಭಿಷೇಕ ಸಲ್ಲಿಸಿದ್ದರು. ಸಂಜೆ ಬರಗೇರಮ್ಮ ದೇವಸ್ಥಾನದಿಂದ ಮುತ್ತೈದೆಯರು ಕುಂಬ ಕಳಸದೊಂದಿಗೆ ಹಳೇ ಮಾಧ್ಯಮಿಕ ಶಾಲಾ ಆವರಣದವರೆಗೆ ಮೆರವಣಿಗೆ ನಡೆಸಿದರು.
9ರಂದು ದೇವಸ್ಥಾನದ ಆವರಣದಲ್ಲಿ ರುದ್ರ ಹೋಮ ಹಾಗೂ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ. 10ರಂದು ಸೇವಾ ಸಮಿತಿ ಹಾಗೂ ಕೀರ್ತಿ ಆಸ್ಪತ್ರೆ ಸಹಯೋಗದಲ್ಲಿ 9 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ಬಾರದಂತೆ ಎಚ್‌ಪಿವಿ ಲಸಿಕೆ ನೀಡಲಾಗುತ್ತದೆ.
ಪಾಲ್ಗುಣೇಶ್ವರ ಮತ್ತು ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಚ್. ರಂಗಸ್ವಾಮಿ, ಮೇಲ್ವಿಚಾರಕ ಉಸ್ತುವಾರಿ ಎಸ್.ಬಿ.ಎಲ್. ಮಲ್ಲಿಕಾರ್ಜುನ್, ಕೆ.ಜಿ.ಟಿ. ಗುರುಮೂರ್ತಿ, ಎಸ್.ಟಿ. ನವೀನ್ ಕುಮಾರ್, ಪದಾಧಿಕಾರಿಗಳಾದ ಆರ್.ಮಂಜುನಾಥ, ಆರ್.ಮೃತ್ಯುಂಜಯ, ಅರ್ಚಕರಾದ ಸ್ವಾಮಿ, ಮುರುಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.