ADVERTISEMENT

ಹಿರಿಯೂರು ತಲುಪಿದ ಪಂಚಮಸಾಲಿ ಪಾದಯಾತ್ರೆ

ಸರ್ಕಾರದ ನಿರ್ಧಾರಕ್ಕೆ ವ್ಯಕ್ತವಾದ ಸಂತಸ, ಹೋರಾಟ ಮುಂದುವರಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 16:52 IST
Last Updated 4 ಫೆಬ್ರುವರಿ 2021, 16:52 IST
ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ನಡೆದ ಸಭೆಯಲ್ಲಿ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು. ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಮಹೇಶ ಕುಮಟಳ್ಳಿ, ಅರವಿಂದ ಬೆಲ್ಲದ,  ಸಿ.ಎಂ.ನಿಂಬಣ್ಣನವರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ವಿಜಯಾನಂದ ಕಾಶೆಪ್ಪನವರ ಇದ್ದರು.

ಚಿತ್ರದುರ್ಗ: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2‘ಎ’ಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದಾಗಿ ಸರ್ಕಾರ ನೀಡಿದ ಆಶ್ವಾಸನೆಗೆ ಪಾದಯಾತ್ರೆಯಲ್ಲಿ ಸಂತಸ ವ್ಯಕ್ತವಾಗಿದೆ.

ಇದು ಮೊದಲ ಹಂತದ ಯಶಸ್ಸು ಎಂದೇ ಪರಿಗಣಿಸಿದ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಾದಯಾತ್ರೆಯನ್ನು ಮುಂದುವರಿಸಿದರು. 22ನೇ ದಿನದ ಪಾದಯಾತ್ರೆ 480 ಕಿ.ಮೀ ಕ್ರಮಿಸಿದ್ದು, ಹಿರಿಯೂರು ತಲುಪಿದೆ.

ಬುಧವಾರ ರಾತ್ರಿ ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮ ತಲುಪಿದ್ದ ಪಾದಯಾತ್ರೆ ಅಲ್ಲಿಯೇ ತಂಗಿತ್ತು. ಗುರುವಾರ ನಸುಕಿನಲ್ಲಿ ಅಲ್ಲಿಂದ ಹೊರಟು ಐಮಂಗಲ ತಲುಪಿತು. ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಶಾಸಕರಾದ ಮಹೇಶ ಕುಮಠಳ್ಳಿ, ಅರವಿಂದ ಬೆಲ್ಲದ ಹಾಗೂ ಅರುಣ್‌ ಪೂಜಾರ್‌ ನೇತೃತ್ವದ ನಿಯೋಗ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿತು.

ADVERTISEMENT

ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಮಠಕ್ಕೆ ಅನುದಾನ ನೀಡುವಂತೆ ಯಾವತ್ತೂ ಕೇಳಿಲ್ಲ. ಅನುದಾನ ನೀಡುವ ಮೂಲಕ ಪಂಚಮಸಾಲಿ ಸಮುದಾಯವನ್ನು ಸರ್ಕಾರ ಅವಮಾನಿಸಿತ್ತು. ಹೀಗಾಗಿ, ಅನುದಾನ ಹಿಂದಿರುಗಿಸುತ್ತಿದ್ದೇವೆ. ಮತ್ತೊಬ್ಬರ ಎದುರು ಕೈವೊಡ್ಡುವ ಸಮಾಜ ನಮ್ಮದಲ್ಲ’ ಎಂದು ಹೇಳಿದರು.

‘ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಹೋರಾಟ ಬೆಂಬಲಿಸಿ ಶಾಸಕರು ರಾಜೀನಾಮೆ ನೀಡುವ ಅಗತ್ಯವೂ ಇಲ್ಲ. ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಬೇಕು’ ಎಂದರು.

‘ಕುಲಶಾಸ್ತ್ರೀಯ ಅಧ್ಯಯನ ಅಗತ್ಯವಿಲ್ಲ’

ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಮತ್ತೊಮ್ಮೆ ಈ ಅಧ್ಯಯನ ನಡೆಸುವ ಅಗತ್ಯವಿಲ್ಲ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯಕ್ಕೆ 1994ರಿಂದ ಹೋರಾಟ ನಡೆಯುತ್ತಿದೆ. 2009ರಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 3 ‘ಬಿ’ ಮೀಸಲಾತಿಯನ್ನು ಯಡಿಯೂರಪ್ಪ ಅವರೇ ಕಲ್ಪಿಸಿದರು. ಪ್ರವರ್ಗ 2‘ಎ’ ಮೀಸಲಾತಿ ಕಲ್ಪಿಸಲು ಸಾಧ್ಯವಿದೆ. ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಗೆಜೆಟ್‌ ಅಧಿಸೂಚನೆ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.