ಹೊಳಲ್ಕೆರೆ: ಚಿಪ್ಪುಹಂದಿ ಹತ್ಯೆ ಮಾಡಿ ಅದರ ಚಿಪ್ಪು ಹಾಗೂ ಉಗುರುಗಳನ್ನು ಮಾರಾಟ ಮಾಡುತ್ತಿದ್ದ ಕಳ್ಳರನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ತಾಲ್ಲೂಕಿನ ಕೊಳಾಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಐವರನ್ನು ಬಂಧಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಯರೇಹಳ್ಳಿಯ ಎಂ.ಬಸವರಾಜ, ಹೊಸದುರ್ಗ ತಾಲ್ಲೂಕಿನ ಗೂಳಿಹಟ್ಟಿಯ ಮಂಜುನಾಥ, ಮಾದಿಹಳ್ಳಿಯ ಗುರುಮೂರ್ತಿ, ಹೊಳಲ್ಕೆರೆ ತಾಲ್ಲೂಕಿನ ಕೊಮಾರನ ಹಳ್ಳಿಯ ಮೂಡ್ಲಪ್ಪ, ಹಿರಿಯೂರು ತಾಲ್ಲೂಕಿನ ಭೂತಯ್ಯನ ಹಟ್ಟಿಯ ದೇವರಾಜ ಬಂಧಿತ ಆರೋಪಿಗಳು.
ಇವರಿಂದ 3.2 ಕೆಜಿ ಹಂದಿಯ ಚಿಪ್ಪು ಹಾಗೂ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳಾದ ಕೊಮಾರನಹಳ್ಳಿಯ ಕೆಂಚಪ್ಪ ಹಾಗೂ ಗೂಳಿಹಟ್ಟಿಯ ರಂಗಸ್ವಾಮಿ ಪರಾರಿಯಾಗಿದ್ದಾರೆ.
‘ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಹಂದಿ ಚಿಪ್ಪುಗಳನ್ನು ಖರೀದಿಸುವ ನೆಪದಲ್ಲಿ ಹೋಗಿ ಕಳ್ಳರನ್ನು ಬಂಧಿಸಲಾಗಿದೆ. ನಮ್ಮ ಭಾಗದಲ್ಲಿ ಚಿಪ್ಪುಹಂದಿಗಳು ಹೆಚ್ಚಾಗಿದ್ದು, ಕಳ್ಳತನ ಮಾಡುವ ದೊಡ್ಡ ಜಾಲವೇ ಇದೆ. ಇವರು ಹಂದಿಯ ಚಿಪ್ಪುಗಳನ್ನು ಖರೀದಿಸಿ ಮೈಸೂರಿಗೆ ಸಾಗಿಸುತ್ತಿದ್ದರು. ಅಲ್ಲಿಂದ ಕೇರಳ ಮೂಲಕ ಚೀನಾ ಸೇರಿದಂತೆ ಹೊರದೇಶಗಳಿಗೆ ಸಾಗಿಸಲಾಗುತ್ತಿತ್ತು. ಇವರು ಒಂದು ಕೆ.ಜಿ ಚಿಪ್ಪನ್ನು ₹5 ಲಕ್ಷದಂತೆ ಮಾರಾಟ ಮಾಡುತ್ತಿದ್ದರು. ವಿದೇಶದಲ್ಲಿ ಅದು ₹10 ಲಕ್ಷಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಆಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.