ADVERTISEMENT

ಹುಳಿಯಾರು ರಸ್ತೆ ದುರಸ್ತಿಗೆ ಆಗ್ರಹ: ಜಿಲ್ಲಾಧಿಕಾರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:26 IST
Last Updated 16 ಜುಲೈ 2024, 15:26 IST
ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಹಾದು ಹೋಗಿರುವ ವಾಣಿವಿಲಾಸ ಬಲ ನಾಲೆಯ ಸಮೀಪ ರಸ್ತೆ ತುಂಬ ಗುಂಡಿಗಳು ಬಿದ್ದಿರುವುದು
ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಹಾದು ಹೋಗಿರುವ ವಾಣಿವಿಲಾಸ ಬಲ ನಾಲೆಯ ಸಮೀಪ ರಸ್ತೆ ತುಂಬ ಗುಂಡಿಗಳು ಬಿದ್ದಿರುವುದು    

ಹಿರಿಯೂರು: ‘ನಗರದಲ್ಲಿ ಹಾದು ಹೋಗಿರುವ ಬೀದರ್– ಶ್ರೀರಂಗಪಟ್ಟಣ ಹೆದ್ದಾರಿಯನ್ನು ತಕ್ಷಣ ದುರಸ್ತಿ ಪಡಿಸದೇ ಹೋದರೆ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ ಮಂಗಳವಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

‘ಎರಡು– ಮೂರು ದಿನಗಳಿಂದ ಬರುತ್ತಿರುವ ಜಡಿ ಮಳೆಗೆ ವಾಣಿವಿಲಾಸ ಬಲದಂಡೆ ನಾಲೆಯ ಸಮೀಪ ಹಾದು ಹೋಗಿರುವ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಗುಂಡಿಮಯವಾಗಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ನಿತ್ಯ ಹತ್ತಾರು ದ್ವಿಚಕ್ರ ವಾಹನ ಸವಾರರು ಕೆಳಗೆ ಬೀಳುತ್ತಿದ್ದಾರೆ. ರಸ್ತೆಯಂಚಿನಲ್ಲಿ ನಡೆದು ಹೋಗಲು ಪಾದಚಾರಿಗಳು ಭಯ ಪಡುತ್ತಿದ್ದಾರೆ. ಮಳೆ ಬರುತ್ತಿದ್ದರೆ ಕೆಸರು ನೀರಿನ ಅಭಿಷೇಕ, ಮಳೆ ನಿಂತರೆ ದೂಳಿನ ಸ್ನಾನ ಖಚಿತ. ಶಾಲೆ– ಕಾಲೇಜು ವೇಳೆ ವಿದ್ಯಾರ್ಥಿಗಳು ಪೋಷಕರ ಪಾಡು ಹೇಳತೀರದು. ಆದರೂ ನಗರಸಭೆ ಆಡಳಿತ ಗಮನ ಹರಿಸದಿರುವುದು ಬೇಸರ ಮೂಡಿಸಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಈ ರಸ್ತೆಯಲ್ಲಿ ಮೈಸೂರು ಕಡೆಗೆ ಭಾರೀ ಗಾತ್ರದ ವಾಹನಗಳು ಸಂಚರಿಸುತ್ತಿದ್ದು, ಜನರು ಪ್ರಾಣ ಕಳೆದುಕೊಳ್ಳುವ ಮೊದಲು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿಸುವಂತೆ ನಗರಸಭೆ ಆಡಳಿತಕ್ಕೆ ತಾಕೀತು ಮಾಡಬೇಕು. ಸಾರ್ವಜನಿಕರ ಒತ್ತಡಕ್ಕೆ ಮಣಿದು ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಟಾಚಾರಕ್ಕೆ ಗುಂಡಿಗೆ ಡಾಂಬರು ಹಾಕಿ ರಸ್ತೆ ದುರಸ್ತಿ ಪಡಿಸಿದಂತೆ ಮಾಡುತ್ತಾರೆ. ದುರಸ್ತಿ ಮಾಡಿದ ಮೂರ್ನಾಲ್ಕು ದಿನಗಳಲ್ಲಿ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬೀಳುತ್ತಿವೆ. ಆದ್ದರಿಂದ ಗುಣಮಟ್ಟದ ಕಾಮಗಾರಿ ನಡೆಸುವಂತೆ ನಗರಸಭೆ ಅಧಿಕಾರಿಗಳಿಗೆ ಆದೇಶಿಸಬೇಕು’ ಎಂದು ಹೊರಕೇರಪ್ಪ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.