ADVERTISEMENT

ಚಿತ್ರದುರ್ಗ:‌ ಸರ್ಕಾರಿ ಸೇವೆ ಸ್ಥಗಿತಕ್ಕೆ ಜನ ಹೈರಾಣು

ಜಿಲ್ಲಾ ಆಸ್ಪತ್ರೆಯಲ್ಲಿ ಪರದಾಡಿದ ರೋಗಿಗಳು– ಕರ್ತವ್ಯಕ್ಕೆ ಹಾಜರಾಗದ ನೌಕರರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 3:05 IST
Last Updated 2 ಮಾರ್ಚ್ 2023, 3:05 IST
ರೋಗಿಗಳಿಂದ ತುಂಬಿದ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ.
ರೋಗಿಗಳಿಂದ ತುಂಬಿದ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ.   

ಚಿತ್ರದುರ್ಗ:‌ ‘ಮಗನಿಗೆ ಚರ್ಮದ ಅಲರ್ಜಿ, ನನಗೆ ಅರ್ಧ ತಲೆ ನೋವು, ಡಾಕ್ಟ್ರು ಎಷ್ಟು ಹೊತ್ತಿಗೆ ಬರ್ತಾರೆ...’, ‘ನಾಳೆ ಬಂದು ಡ್ರೆಸಿಂಗ್‌ ಮಾಡಿಸಿ ಅಂತಾ ಹೇಳಿದ್ರು ಇಲ್ಲಿ ನೋಡಿದ್ರೆ ಎಲ್ಲ ಬಾಗಿಲು ಮುಚ್ಚಿದ್ದಾರೆ, ಯಾವಾಗ ಓಪನ್‌ ಆಗುತ್ತೆ...?’ ‘ಇವತ್ತು ತಹಶೀಲ್ದಾರ್‌ ಕಚೇರಿ ರಜಾನಾ, ಏಕೆ ಎಲ್ಲ ಸರ್ಕಾರಿ ಕಚೇರಿಗಳು ಮುಚ್ಚಿವೆ...?’

ಏಳನೇ ವೇತನ ಆಯೋಗ ಹಾಗೂ ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಬುಧವಾರ ಕರ್ತವ್ಯಕ್ಕೆ ಗೈರಾದ ಕಾರಣ ಸಮಸ್ಯೆಗೆ ಸಿಲುಕಿದ ಜನರಿಂದ ಇಂತಹ ಹತ್ತಾರು ಪ್ರಶ್ನೆಗಳು ಕೇಳಿ ಬಂದವು.

ಜಿಲ್ಲೆಯಲ್ಲಿ 2,700 ಆರೋಗ್ಯ ಇಲಾಖೆ, 5 ಸಾವಿರ ಪ್ರಾಥಮಿಕ, 2,300 ಪ್ರೌಢಶಾಲಾ ಸಿಬ್ಬಂದಿ ಸೇರಿ ಎಲ್ಲಾ ಇಲಾಖೆಯ 23,420 ನೌಕರರು ಏಕಕಾಲಕ್ಕೆ ಮುಷ್ಕರಕ್ಕೆ ಧುಮುಕಿದ್ದರು. ಇದರಿಂದ ಶಾಲಾ–ಕಾಲೇಜು, ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಯಿತು.

ADVERTISEMENT

ಜಿಲ್ಲಾ ಹಾಗೂ ತಾಲ್ಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳ ವಿಭಾಗ (ಒಪಿಡಿ) ಸಂಪೂರ್ಣ ಬಂದ್‌ ಆಗಿದ್ದರಿಂದ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದರು. ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಧ್ಯಾಹ್ನ 11.30ರ ವೇಳೆಗೆ 200 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದರು. ಐಸಿಯು ಮತ್ತಿತರ ತುರ್ತು ಸೇವಾ ಘಟಕಗಳಲ್ಲಿ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ನೌಕರರ ಸಂಘದ ಪದಾಧಿಕಾರಿಗಳು ಆಸ್ಪತ್ರೆ, ಶಾಲಾ–ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಗ್ರಾಮೀಣ ಭಾಗದ ಜನರು ಜಿಲ್ಲಾ ಆಸ್ಪತ್ರೆಯನ್ನು ಹೆಚ್ಚು ಅವಲಂಬಿಸಿರುವುದರಿಂದ ಸಕಾಲಕ್ಕೆ ಚಿಕಿತ್ಸೆ ದೊರಕದೆ ಪರದಾಡಿದರು. ಹೊರ ರೋಗಿಗಳ ವಿಭಾಗದತ್ತ ಬರುತ್ತಿದ್ದ ರೋಗಿಗಳು ನರ್ಸಿಂಗ್‌ ವಿದ್ಯಾರ್ಥಿಗಳನ್ನು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜ್ವರ, ಶೀತ, ಕಣ್ಣಿನ ಶಸ್ತ್ರ ಚಿಕಿತ್ಸೆ, ಡ್ರೆಸಿಂಗ್‌ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಜ್ವರದಿಂದ ಬಳಲುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಚಿಕಿತ್ಸೆ ದೊರಕದೆ ಸಂಕಟದಲ್ಲೇ ಹಿಂತಿರುಗಿದರು. ಕೆಲವರು ಮಧ್ಯಾಹ್ನದ ವೇಳೆಗೆ ವೈದ್ಯರು ಬರುತ್ತಾರೆ ಎಂದು ಆಸ್ಪತ್ರೆ ಕಾರಿಡಾರ್‌ನಲ್ಲಿ ಕಾದು ಕುಳಿತ್ತಿದ್ದರು.

ಮುಷ್ಕರದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳು, ಕಾಯಂ ಪೌರಕಾರ್ಮಿಕರು, ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ, ಶಿಕ್ಷಕರು, ಉಪನ್ಯಾಸಕರು, ಅರಣ್ಯ ಇಲಾಖೆ, ವಿವಿಧ ನಿಗಮ ಮಂಡಳಿಗಳ ನೌಕರರೂ ಭಾಗವಹಿಸಿದ್ದರಿಂದ ಸರ್ಕಾರಿ ಕಚೇರಿಗಳಿಗೆ ಬೀಗ ಬಿದ್ದಿತ್ತು.

ಪ್ರಾದೇಶಿಕ ಸಾರಿಗೆ ಇಲಾಖೆ, ತಹಶೀಲ್ದಾರ್‌ ಕಚೇರಿ ಪ್ರವೇಶ ದ್ವಾರವನ್ನು ಬಂದ್‌ ಮಾಡಲಾಗಿತ್ತು. ಇದರಿಂದ ರೈತರು, ವಾಹನಗಳ ನೋಂದಣಿಗೆ ಬಂದವರು ವಾಪಸಾದರು. ಉಪನೋಂದಣಾಧಿಕಾರಿ ಕಚೇರಿ
ಗಳಲ್ಲಿ ಆಸ್ತಿ ನೋಂದಣಿ ಸಹ ನಡೆಯಲಿಲ್ಲ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಸೇವೆಗಳು ಜನರಿಗೆ ದೊರಕಲಿಲ್ಲ. ಮಧ್ಯಾಹ್ನದ ವೇಳೆಗೆ ಮುಷ್ಕರ ಹಿಂಪಡೆದರು ಸಹ ಜಿಲ್ಲಾಧಿಕಾರಿ ಕಚೇರಿ ಹೊರತುಪಡಿಸಿ ಶಾಲಾ ಕಾಲೇಜು, ಇಲಾಖೆ ಕಚೇರಿಗಳಿಗೆ ನೌಕರರು ಆಗಮಿಸದ ಕಾರಣ ಕಚೇರಿ ಬಾಗಿಲುಗಳು ತೆರೆಯಲಿಲ್ಲ.

ರಾಜ್ಯ ಸಂಘದ ಸೂಚನೆಯಂತೆ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಶಾಂತಿಯುತ ಮುಷ್ಕರ ನಡೆಸಿದರು. ಸರ್ಕಾರ ಮನವಿಗೆ ಸ್ಪಂದಿಸಿದ್ದರಿಂದ ಮುಷ್ಕರ ಹಿಂಪಡೆಯಲಾಗಿದೆ.
ಕೆ.ಟಿ.ತಿಮ್ಮಾರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ಕೈ–ಕಾಲು ನಡುಕ ಅಂತ ತೋರಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಗೆ ಬಂದರೆ ಇಲ್ಲಿ ಎಲ್ಲ ಬಾಗಿಲು ಮುಚ್ಚಿದ್ದಾರೆ. ಹಳ್ಳಿಯಿಂದ ಬಂದಿದ್ದೇವೆ. ಮತ್ತೆ ನಾಳೆ ಬರಬೇಕೆಂದರೆ ಸಮಸ್ಯೆ ಆಗುತ್ತೆ. ಹೋಗಿ ಬರೋದು ಕಷ್ಟ.

ಈರಮ್ಮ, ವೃದ್ಧೆ, ಈಚಲನಾಗೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.