ADVERTISEMENT

ಸಮುದಾಯದವರು ಭಿನ್ನಾಭಿಪ್ರಾಯ ಬಿಟ್ಟು ಒಂದಾಗಿ

ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:42 IST
Last Updated 15 ಜನವರಿ 2023, 5:42 IST
ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಕ್ಯತಾ ಸಮಾವೇಶದ ಕೃತಜ್ಞತೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿದರು.
ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಕ್ಯತಾ ಸಮಾವೇಶದ ಕೃತಜ್ಞತೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿದರು.   

ಚಿತ್ರದುರ್ಗ: ‘ನಗರದಲ್ಲಿ ಜ.8ರಂದು ಕಾಂಗ್ರೆಸ್‌ ಪಕ್ಷದಿಂದ ನಡೆದ ‘ಐಕ್ಯತಾ ಸಮಾವೇಶ’ ರಾಜ್ಯದಲ್ಲಿ ಹೊಸ ಸಂಚಲನ ಹಾಗೂ ಅಧ್ಯಾಯವನ್ನು ನಿರ್ಮಿಸಿದೆ. ಈ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 153 ಜಾತಿಗಳು ಒಂದಾಗಿವೆ ಎಂಬ ಸಂದೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದೇವೆ’ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಕ್ಯತಾ ಸಮಾವೇಶದ ಕೃತಜ್ಞತೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಬದಲಾಗಬೇಕಾದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಒಂದು ವೇದಿಕೆಗೆ ಬರಬೇಕು. ಆಗ ಮಾತ್ರ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಕಾಂಗ್ರೆಸ್‌ ಆಡಳಿತಕ್ಕೆ ತರಲು ಸಾಧ್ಯ’ ಎಂದು ಕರೆ ನೀಡಿದರು.

ADVERTISEMENT

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 173 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಐಕ್ಯತಾ ಸಮಾವೇಶಕ್ಕೆ ಅನೇಕರು ಕೈಜೋಡಿಸಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಿಗೆ ಸ್ಪಷ್ಟ ಸಂದೇಶ ತಲುಪಿದೆ’ ಎಂದರು.

‘ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕು. ಪ್ರತಿ ಬೂತ್‌ಮಟ್ಟದಲ್ಲಿ ಎಲ್ಲಾ ಜಾತಿಯ 20 ಜನರ ತಂಡ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಬೇಕು’ ಎಂದು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಕರೆ ನೀಡಿದರು.

‘ಒಂದು ಜಾತಿ, ಧರ್ಮದ ವಿರುದ್ಧ ಮತ್ತೊಂದು ಜಾತಿಯವರನ್ನು ಎತ್ತಿಕಟ್ಟಿ ಶಾಂತಿ ಕದಡುವುದೇ ಬಿಜೆಪಿ ಕೆಲಸವಾಗಿದೆ. ಸಂವಿಧಾನವನ್ನು ಉಳಿಸಬೇಕಾಗಿರುವುದರಿಂದ ಪ್ರಜಾಪ್ರಭುತ್ವ, ಜಾತ್ಯತೀತ ರಾಜಕಾರಣ ಬಯಸುವ ಎಲ್ಲರೂ ಒಂದಾಗಬೇಕು. ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

‘ಮುಂದಿನ ವಿಧಾನಸಭೆ ಚುನಾವಣೆಗೆ ಪರಿಶಿಷ್ಟ ಜಾತಿ, ಪಂಗಡವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಚಿತ್ರದುರ್ಗದಲ್ಲಿ ನಡೆದ ಐಕ್ಯತಾ ಸಮಾವೇಶ ಯಶಸ್ವಿಯಾಗಿದ್ದು, ಬೇರೆ ಜನಾಂಗವನ್ನು ಪಕ್ಷದ ಕಡೆ ಸೆಳೆಯುವ ಕೆಲಸವಾಗಬೇಕು’ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು.

‘ರಾಜ್ಯ ಮತ್ತು ಕೇಂದ್ರದಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಜನ ಬೇಸತ್ತಿದ್ದಾರೆ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನು ಪುನಃ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಐಕ್ಯತಾ ಸಮಾವೇಶ ವಿರೋಧಿಗಳಿಗೆ ನಡುಕ ಹುಟ್ಟಿಸಿದೆ. ದೇಶದಲ್ಲಿ ಈ ಎರಡು ಜನಾಂಗ 35 ಕೋಟಿಯಷ್ಟಿದೆ. ಡಬಲ್ ಎಂಜಿನ್‌ ಸರ್ಕಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ದೇಶದ ಪ್ರಧಾನಿ ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿಲ್ಲ. ಆಧುನಿಕ ಭಸ್ಮಾಸುರನಿದ್ದಂತೆ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ದೂರಿದರು.

ಸಂವಿಧಾನ, ಸಾಮಾಜಿಕ ನ್ಯಾಯಕ್ಕೆ ಉಳಿಗಾಲವಿಲ್ಲವಾಗಿದೆ. ಅಧಿಕಾರದಿಂದ ಮದವೇರಿದ ಬಿಜೆಪಿಯನ್ನು ಮಣಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಂದ ಮಾತ್ರ ಸಾಧ್ಯ. ಪಕ್ಷದ ಹೈಕಮಾಂಡ್‌ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸಬೇಕು ಎಂದು ವಿನಂತಿಸಿದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಕಾಂಗ್ರೆಸ್‌ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಪಾಲಯ್ಯ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಸಂಪತ್‌ ಕುಮಾರ್‌, ಡಿ.ಎನ್‌.ಮೈಲಾರಪ್ಪ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಗೀತ ನಂದಿನಿಗೌಡ, ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಜಿ.ಎಸ್‌. ಮಂಜುನಾಥ್ ಇದ್ದರು.

ಹೇಳಿದ ಮಾತಿಗೆ ಕಾಂಗ್ರೆಸ್‌ ಬದ್ಧ

‘ಸದಾಶಿವ ಆಯೋಗದ ವರದಿಯಿಂದ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಮಾತಿಗೆ ಪಕ್ಷ ಬದ್ಧವಾಗಿದೆ. ವರದಿಯನ್ನು ಎರಡು ಸದನಗಳಲ್ಲಿ ಮಂಡಿಸಿ, ಬಹಿರಂಗಪಡಿಸಿ, ಚರ್ಚೆಗೊಳಪಡಿಸುತ್ತೇವೆ’ ಎಂದು ‌ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನ ಐಕ್ಯತಾ ಸಮಾವೇಶದಲ್ಲಿ ಘೋಷಿಸಿದ ಹತ್ತು ಅಂಶಗಳಲ್ಲಿ ಸದಾಶಿವ ಆಯೋಗದ ಕುರಿತು ಸ್ಪಷ್ಟವಾಗಿ ಹೇಳಿದ್ದೇವೆ. ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯವನ್ನ ಸಂಪೂರ್ಣ ನಿರ್ಲಕ್ಷಿಸಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅವಕಾಶ ನೀಡುತ್ತಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ಕಾರ್ಯಕರ್ತ ಸ್ಯಾಂಟ್ರೊ ರವಿಯನ್ನು ಬಿಜೆಪಿ ನಾಯಕರು ರಕ್ಷಣೆ ಮಾಡುತ್ತಿದ್ದಾರೆ. ಎಸ್ಸಿ ಸಮುದಾಯದ ಹೆಣ್ಣುಮಗಳಿಗೆ ದ್ರೋಹ ಮಾಡಿದ ಪ್ರಕರಣವನ್ನು ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು.

–ವಿ.ಎಸ್‌. ಉಗ್ರಪ್ಪ, ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.