ಹಿರಿಯೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು ಕೊನೆಯ ದಿನವಾಗಿದ್ದ ಶನಿವಾರ ತಾಲ್ಲೂಕಿನ ಬಹುತೇಕ ನ್ಯಾಯಬೆಲೆ ಹಾಗೂ ಸಹಕಾರ ಸಂಘಗಳಲ್ಲಿ ಸರ್ವರ್ ಸಮಸ್ಯೆಯ ಕಾರಣಕ್ಕೆ ಪಡಿತರಕ್ಕಾಗಿ ಫಲಾನುಭವಿಗಳು ಅಂಗಡಿಗಳ ಮುಂದೆ ಇಡೀ ದಿನ ಕಾದು ಕುಳಿತಿದ್ದರು.
ತಾಲ್ಲೂಕಿನಲ್ಲಿ ಪ್ರತಿ ತಿಂಗಳು ಸುಮಾರು 70 ಸಾವಿರ ಕುಟುಂಬಗಳು ಪಡಿತರವನ್ನೇ ನಂಬಿ ಬದುಕುತ್ತಿವೆ. ಪದೇಪದೇ ಸರ್ವರ್ ಸಮಸ್ಯೆ ಕಾರಣಕ್ಕೆ ಪಡಿತರ ವಂಚಿಸುತ್ತಿರುವುದರಿಂದ ಬಡವರ ಅನ್ನವನ್ನು ಕಿತ್ತುಕೊಂಡಂತೆ ಆಗಿದೆ. ಸರ್ಕಾರ ಪಡಿತರವನ್ನು ಉಳಿಸಲು ಸರ್ವರ್ ಸಮಸ್ಯೆ ಹುಟ್ಟು ಹಾಕಿರುವ ಸಂದೇಹ ಕಾಡುತ್ತಿದೆ ಎಂದು ಮಹಾನಾಯಕ ದಲಿತ ಸೇನೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್ ಆರೋಪಿಸಿದರು.
‘ಹಿರಿಯೂರು ನಗರದ ಹತ್ತು ಪಡಿತರ ವಿತರಣೆ ಅಂಗಡಿಗಳಿಗೆ ದಲಿತಸೇನೆ ಪದಾಧಿಕಾರಿಗಳು ಭೇಟಿ ನೀಡಿದ್ದೇವೆ. ಬಹುತೇಕ ಅಂಗಡಿಗಳ ಎದುರು ಬಡ ಫಲಾನುಭವಿಗಳು ಚಿಕ್ಕಮಕ್ಕಳನ್ನು ಕರೆದುಕೊಂಡು ಹೋಗಿ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತಿದ್ದಾರೆ. ಪಡಿತರ ಪಡೆಯಲು ಕಂಪ್ಯೂಟರ್‌ಗೆ ಬೆರಳಚ್ಚು ನೀಡಬೇಕು. ಅಥವಾ ಮೊಬೈಲ್‌ಗೆ ಬರುವ ಒಟಿಪಿ ತಿಳಿಸಬೇಕು. ಸರ್ವರ್ ಸರಿ ಇದ್ದರೆ ಇದು ಆಗುತ್ತದೆ. ಸುಮಾರು ಒಂದು ವರ್ಷದಿಂದ ಸರ್ವರ್ ಸಮಸ್ಯೆ ಕಾರಣಕ್ಕೆ ಸಾವಿರಾರು ಬಡವರಿಗೆ ಪಡಿತರ ಸಿಗುತ್ತಿಲ್ಲ. ಸರ್ವರ್ ಕಾರಣಕ್ಕೆ ಪಡಿತರ ಪಡೆಯದವರಿಗೆ ಮುಂದಿನ ತಿಂಗಳು ಪಡಿತರ ನೀಡುವಾಗ ಹಳೆಯದನ್ನು ನೀಡುವ ವ್ಯವಸ್ಥೆ ಇಲ್ಲ. ಆಹಾರ ಇಲಾಖೆ ಬೇಕೆಂದೇ ಸರ್ವರ್ ಸಮಸ್ಯೆ ಸೃಷ್ಟಿಸಿದೆ’ ಎಂದು ಅವರು ದೂರಿದರು.
‘ಒಂದೊಂದು ಸಹಕಾರ ಸಂಘ ಅಥವಾ ನ್ಯಾಯಬೆಲೆ ಅಂಗಡಿಗೆ ಒಂದು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿ ನಿಗದಿ ಪಡಿಸಿದೆ. ಸರ್ವರ್ ಸರಿ ಇದ್ದರೆ ಒಂದು ವಾರದ ಒಳಗೆ ವಿತರಣೆ ಮುಗಿಯುತ್ತದೆ. ಸರ್ವರ್ ಸಮಸ್ಯೆ ಇದ್ದರೆ ದಿನಕ್ಕೆ 40–50 ಜನರಿಗೆ ಮಾತ್ರ ಪಡಿತರ ನೀಡಲು ಸಾಧ್ಯ. ಬಿಪಿಎಲ್ ಕಾರ್ಡು ಹೊಂದಿರುವ ಶೇ 100ರಷ್ಟು ಜನ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಪಡಿತರಕ್ಕಾಗಿ ಐದಾರು ದಿನ ಅಲೆದರೆ ಕೂಲಿಗೆ ಕತ್ತರಿ ಬೀಳುತ್ತದೆ. ಸರ್ವರ್ ಸಮಸ್ಯೆ ಇದ್ದಾಗ ಫಲಾನುಭವಿಗಳ ಸಹಿ ಪಡೆದು ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಹುಳಿಯಾರು ರಸ್ತೆಯ ನ್ಯಾಯಬೆಲೆ ಅಂಗಡಿ ಎದುರು ಕಾಯುತ್ತಿದ್ದ ಹನುಮಂತಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.