ADVERTISEMENT

ಈರುಳ್ಳಿ ಬೆಳೆಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 10:40 IST
Last Updated 23 ಡಿಸೆಂಬರ್ 2019, 10:40 IST

ಚಳ್ಳಕೆರೆ:ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಡಪನಕುಂಟೆ ಗ್ರಾಮದಲ್ಲಿ ಈರುಳ್ಳಿ ಬೆಳೆಗೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿ ಬೆಳೆ ನಾಶಪಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರೈತ ನಿಂಗೇಗೌಡ ಕೊಳವೆಬಾವಿಯ ನೀರಿಗೆ ಡ್ರಿಪ್ ಅಳವಡಿಸಿಕೊಂಡು 3 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿ ಬಂದಿತ್ತು. ಕಳೆನಾಶಕ ಸಿಂಪಡಿಸಿದ ಕಾರಣ 2 ಎಕರೆ ಪ್ರದೇಶದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ಕೆ.ಜಿಗೆ ₹1.500ರಂತೆ 13 ಕೆ.ಜಿ ಬೀಜವನ್ನು ನಾಟಿ ಮಾಡಿದ್ದೆ. ಗೊಬ್ಬರ, ಬೇಸಾಯ, ಕೂಲಿ ಸೇರಿ ₹ 30 ಸಾವಿರ ಖರ್ಜಾಗಿತ್ತು. ಫಸಲು ಚೆನ್ನಾಗಿ ಬಂದಿತ್ತು. ಕಿಡಿಗೇಡಿಗಳ ಕೃತ್ಯದಿಂದ ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ನಿಂಗೇಗೌಡ ಅಳಲು ತೋಡಿಕೊಂಡರು.

ADVERTISEMENT

ಕಳೆನಾಶಕ ಸಿಂಪಡಣೆ ಸಂಬಂಧ ಪಕ್ಕ ಹೊಲದ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದೆ. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದು ಅವರು ದೂರಿದರು.

ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು ರೈತನಿಗೆ ಪರಿಹಾರ ಕೊಡಿಸಬೇಕು ಎಂದು ರೈತ ಮುಖಂಡ ಕೆ.ಪಿ. ಭೂತಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.