ADVERTISEMENT

ಫಲಪುಷ್ಪದಲ್ಲಿ ‘ಚಂದ್ರಯಾನ 3’ ಆಕರ್ಷಣೆ

ಜ. 31ರಿಂದ ಫೆ. 2ರವರೆಗೆ 29ನೇ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 15:40 IST
Last Updated 28 ಜನವರಿ 2020, 15:40 IST
ಫಲಪುಷ್ಪ ಪ್ರದರ್ಶನಕ್ಕೆ ಪುಷ್ಪಗಳ ಮೆರುಗು
ಫಲಪುಷ್ಪ ಪ್ರದರ್ಶನಕ್ಕೆ ಪುಷ್ಪಗಳ ಮೆರುಗು   

ಚಿತ್ರದುರ್ಗ: ‘ಚಂದ್ರಯಾನ 3 ವಿಫಲವಾಗಲು ಸಾಧ್ಯವೇ ಇಲ್ಲ ಎಂಬ ಮಾದರಿಯ ಕಲಾಕೃತಿಯೂ ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಹೇಳಿದರು.

‘ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಜ. 31ರಿಂದ ಫೆ. 2ರವರೆಗೆ 29ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ವಿಜ್ಞಾನಿಗಳಿಗೆ ಶುಭ ಕೋರಲು ಈ ಕಲಾಕೃತಿ ಸಿದ್ಧಪಡಿಸಲಾಗುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ, ಕೃಷಿ ಇಲಾಖೆಯಿಂದ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಜ. 31ರಂದು ಸಂಜೆ 6ಕ್ಕೆ ಉದ್ಘಾಟಿಸುವರು’ ಎಂದರು.

ADVERTISEMENT

ವಿಶೇಷ ಆಕರ್ಷಣೆ: ‘ಐತಿಹಾಸಿಕ ಕೋಟೆಯಲ್ಲಿನ ಒಂಟಿಕಲ್ಲು ಬಸವಣ್ಣ ಮಾದರಿ ಕಲಾಕೃತಿ, ಮಹಿಳಾ ಶಕ್ತಿಯ ಪ್ರತೀಕವಾದ ವೀರವನಿತೆ ಒನಕೆ ಓಬವ್ವನ ಕಲಾಕೃತಿ, ಭ್ರೂಣ ಹತ್ಯೆ ತಡೆ ಕುರಿತು ಜಾಗೃತಿ ಮೂಡಿಸುವ ಕಲಾಕೃತಿ, ಖ್ಯಾತ ಕಾದಂಬರಿಕಾರ ತರಾಸು ಕಲಾಕೃತಿ ಈ ಬಾರಿಯ ವಿಶೇಷ ಆಕರ್ಷಣೆಯಾಗಲಿವೆ’ ಎಂದರು.

ಮಕ್ಕಳಿಗಾಗಿ ವ್ಯಂಗ್ಯ ಚಿತ್ರ ಪ್ರದರ್ಶನ: ‘ಮಕ್ಕಳ ಗಮನ ಸೆಳೆಯಲು ಈ ಬಾರಿ ವಿಶೇಷ ಆಸಕ್ತಿ ತೋರಲಾಗಿದೆ. ಡೈನೋಸಾರಸ್ ಸೇರಿ ಟಾಮ್‌ ಅಂಡ್ ಜೆರ್ರಿಯ ಪಾತ್ರಗಳ ಕಲಾಕೃತಿಗಳು ಅವರನ್ನು ಆಕರ್ಷಿಸಲಿವೆ. ಅಲ್ಲದೆ, ತರಕಾರಿ, ಸೊಪ್ಪು, ಹಣ್ಣುಗಳ ಕುರಿತು ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ಮಾದರಿ ಕ್ಷೇತ್ರ ನಿರ್ಮಾಣ: ‘ಕಡಿಮೆ ನೀರಿನಲ್ಲಿ ಉತ್ತಮ ಫಸಲು ಕಂಡುಕೊಳ್ಳುವ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಉದ್ದೇಶಗಳ ಕುರಿತು ರೈತರಿಗೆ ಮಾಹಿತಿ ನೀಡಲು ಮಾದರಿ ಕ್ಷೇತ್ರ ನಿರ್ಮಾಣವಾಗುತ್ತಿದೆ. ವಿವಿಧ ಜಾತಿಯ ಬಹು ಉಪಯೋಗಿ ಆಗುವಂಥ ಸುಮಾರು 25 ಜಾತಿಯ ಔಷಧಿ ಗಿಡಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳ ಹೆಸರು, ಉಪಯೋಗ ಸಾರಲಾಗುವುದು’ ಎಂದರು.

‘ಪ್ರದರ್ಶನದಲ್ಲಿ ಸುಮಾರು 500ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತಿರ್ಮಾನಿಸಲಾಗಿದೆ. ಉತ್ತಮವಾಗಿ ಬೆಳೆದ ಜಿಲ್ಲೆಯ ರೈತರಿಗೆ ಬಹುಮಾನ ವಿತರಿಸುವುದರಿಂದ ತೋಟಗಾರಿಕೆಯಲ್ಲಿ ತೊಡಗಲು ರೈತರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ’ ಎಂದರು.

‘ದೇಶದ ಹೆಮ್ಮೆಯ ಖಗೋಳ ಶಾಸ್ತ್ರಜ್ಞರನ್ನು ಪರಿಚಯಿಸುವ ತರಕಾರಿ ಕೆತ್ತನೆ, ರಂಗೋಲಿ ಕಲಾಕೃತಿ, ತೆಂಗಿನ ಚಿಪ್ಪಿನಿಂದ ಕಲಾಕೃತಿಗಳ ಜತೆಗೆ ನೀರಿನ ಕಾರಂಜಿಯೂ ಈ ಬಾರಿ ಅನಾವರಣಗೊಳ್ಳಲಿದೆ’ ಎಂದು ಹೇಳಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ರಾಜ್ಯ ವಲಯ) ಬಿ. ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷರಾದ ಎ.ಎಸ್. ಲೋಕನಾಥ್, ಎಂ.ವಿ. ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.