
ಹಿರಿಯೂರು: ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ನೋಂದಣಿ ಕಾರ್ಯಾಗಾರಕ್ಕೆ ನಗರಸಭೆ ಸಭಾಂಗಣದಲ್ಲಿ ಬುಧವಾರ ಪೌರಾಯುಕ್ತ ಎ. ವಾಸೀಂ ಚಾಲನೆ ನೀಡಿದರು.
ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ 811 ಜನರಿಗೆ ನಗರಸಭೆಯಿಂದ ವಿವಿಧ ಯೋಜನೆಗಳಡಿ ಸಾಲಸೌಲಭ್ಯ ಕಲ್ಪಿಸಲಾಗಿದೆ. ಪ್ರಸ್ತುತ 18 ರಿಂದ 40 ವರ್ಷ ವಯಸ್ಸಿನವರಿಗೆ 60 ವರ್ಷದ ನಂತರ ಪಿಂಚಣಿ ಬರುವಂತೆ ಮಾಡಲು ಕಾರ್ಡ್ ನೀಡಲಾಗುತ್ತಿದೆ. ಈ ವಯೋಮಾನದವರು ಪ್ರತಿ ತಿಂಗಳು ₹ 55 ರಿಂದ ₹ 200 ಮೊತ್ತ ಪಾವತಿಸಿರೆ 60 ವರ್ಷದ ನಂತರ ಮಾಸಿಕ ₹ 3 ಸಾವಿರ ಪಿಂಚಣಿ ಪಡೆಯಬಹುದು. ಫಲಾನುಭವಿ ಮೃತಪಟ್ಟರೆ ನಾಮಿನಿಗೆ ಪಿಂಚಣಿ ದೊರೆಯುತ್ತದೆ ಎಂದು ತಿಳಿಸಿದರು.
ಪ್ರತಿವಾರ 20 ಜನರನ್ನು ಕರೆಸಿ ಅವರಿಗೆ ಯೋಜನೆಯ ಬಗ್ಗೆ ವಿವರಿಸಿ ಕಂತು ಪಾವತಿಸುವಂತೆ ತಿಳಿಸುತ್ತೇವೆ ಎಂದು ಕಮ್ಯುನಿಟಿ ಅಧಿಕಾರಿ ನಾಗರತ್ನಮ್ಮ ಹೇಳಿದರು.
ಬೀದಿಬದಿ ವ್ಯಾಪಾರಿಗಳು ಅಸಂಘಟಿತ ವಲಯಕ್ಕೆ ಬರುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಅಧಿಕಾರಿ ರಾಜಣ್ಣ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.